ADVERTISEMENT

ತಿಂಗಳಾದರೂ ದುರಸ್ತಿಯಾಗದ ರಸ್ತೆ!

₹35 ಲಕ್ಷ ಮೊತ್ತದ ಟೆಂಡರ್‌ಗೆ ಸಿದ್ಧತೆ: ವಲಯ ಸಹಾಯಕ ಆಯುಕ್ತ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 7:08 IST
Last Updated 20 ಮೇ 2018, 7:08 IST
ಹುಬ್ಬಳ್ಳಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಿಂದ ದೇಸಾಯಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು, ಬೃಹತ್‌ ಗುಂಡಿ ಬಿದ್ದಿದೆ
ಹುಬ್ಬಳ್ಳಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಿಂದ ದೇಸಾಯಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು, ಬೃಹತ್‌ ಗುಂಡಿ ಬಿದ್ದಿದೆ   

ಹುಬ್ಬಳ್ಳಿ: ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಿಂದ ದೇಸಾಯಿ ಸರ್ಕಲ್‌ ಸಂಪರ್ಕಿಸುವ ರಸ್ತೆ ‘ಪಿಂಟೋ’ ವೈನ್‌ ಶಾಪ್‌ ಸಮೀಪ ರಸ್ತೆ ಮಧ್ಯದಲ್ಲಿ ಬೃಹತ್‌ ಗುಂಡಿ ಬಿದ್ದು ತಿಂಗಳಾದರೂ ಚುನಾವಣೆಯ ಗದ್ದಲದಲ್ಲಿ ಇನ್ನೂ ದುರಸ್ತಿಯಾಗಿಲ್ಲ!

ಜನನಿಬಿಡ ಪ್ರದೇಶವಾಗಿದ್ದು, ಈ ರಸ್ತೆಯು ನಗರದ ರೈಲು ನಿಲ್ದಾಣ ಭಾಗದಿಂದ ದೇಶಪಾಂಡೆ ನಗರಕ್ಕೆ ಸಂಪರ್ಕ ಕೊಂಡಿಯಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಬೀಳುವ ಮುನ್ನ ಗುಂಡಿ ಮುಚ್ಚಿ: ‘ರಸ್ತೆ ನಡುವೆ ಗುಂಡಿ ಬಿದ್ದು ತಿಂಗಳಾದರೂ ಮಹಾನಗರ ಪಾಲಿಕೆ ಸಿಬ್ಬಂದಿ ದುರಸ್ತಿಗೆ ಕ್ರಮಕೈಗೊಂಡಿಲ್ಲ. ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ರಾತ್ರಿ ವೇಳೆ ವೇಗವಾಗಿ ಬರುವ ಬೈಕ್, ಆಟೊ ರಿಕ್ಷಾ, ಕಾರುಗಳು ಬೀಳುವ ಸಾಧ್ಯತೆ ಇದೆ. ಆದಷ್ಟು ಬೇಗ ದುರಸ್ತಿ ಮಾಡಬೇಕು’ ಎಂದು ಬೈಕ್‌ ಸವಾರ ಆರ್‌.ವಿ.ಉಪಾಧ್ಯಾ, ಆಟೊ ಚಾಲಕ ರಜಾಕ್‌ ಮಡಕೇರಿ, ಹೆಲ್ಮೆಟ್‌ ವ್ಯಾಪಾರಿ ಸಯ್ಯದ್‌ ಬಳ್ಳಾರಿ ಒತ್ತಾಯಿಸಿದರು.

ADVERTISEMENT

ಟೆಂಡರ್‌ ಕರೆಯಬೇಕಿದೆ: ಒಂದು ತಿಂಗಳಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣಕ್ಕೆ ಕುಸಿದ ರಸ್ತೆ ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ ಎಂದು ಮಹಾನಗರ ಪಾಲಿಕೆ ವಲಯ– 8ರ ಸಹಾಯಕ ಆಯುಕ್ತ ಎಸ್‌.ಎನ್‌.ಗಣಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆಯಡಿ ಹಾದುಹೋಗಿರುವ ಬೃಹತ್‌ ನಾಲೆ ಕುಸಿದಿರುವುದರಿಂದ ಗುಂಡಿ ಬಿದ್ದಿದೆ. ಕಾಂಕ್ರೀಟ್‌ ವಾಲ್‌ ಮತ್ತು ಸ್ಲ್ಯಾಬ್‌ ಹಾಕಬೇಕಾಗುತ್ತದೆ. ಇದಕ್ಕಾಗಿ ಅಂದಾಜು ₹ 35 ಲಕ್ಷ ಖರ್ಚಾಗುತ್ತದೆ. ದೊಡ್ಡ ಮೊತ್ತದ ಕೆಲಸವಾಗಿರುವುದರಿಂದ ಈ ವಾರದಲ್ಲಿ ಟೆಂಡರ್‌ ಕರೆಯಲಾಗುವುದು. ರಸ್ತೆ ದುರಸ್ತಿಗೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.