ಧಾರವಾಡ: `ದಂತವೈದ್ಯಕೀಯ ಕ್ಷೇತ್ರದ ಬೆಳವಣಿಗೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಆವಿಷ್ಕಾರಗಳು ಸಾಕಷ್ಟು ಸಹಕಾರಿಯಾಗಿದ್ದು, ವಿಶ್ವದೆಲ್ಲೆಡೆ ಅತ್ಯುತ್ತಮ ದಂತವೈದ್ಯಕೀಯ ಚಿಕಿತ್ಸೆ ಲಭ್ಯವಾಗುತ್ತಿದೆ. ಆದರೆ ದಿನೇ ದಿನೇ ಇದರ ವೆಚ್ಚ ಹೆಚ್ಚುತ್ತಿದ್ದು ಜನಸಾಮಾನ್ಯರಿಗೆ ದುಬಾರಿ ಎನಿಸುತ್ತಿದೆ' ಎಂದು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮಾಜಿ ನಿರ್ದೇಶಕ ಪ್ರೊ.ಕೆ.ವಿ.ರಾಘವನ್ ಹೇಳಿದರು.
ಸತ್ತೂರಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಅಖಿಲ ಭಾರತ 14ನೇ ದಂತವೈದ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, `ದುಬಾರಿ ವೆಚ್ಚವನ್ನು ಭರಿಸಲು ಅನುವಾಗುವಂತೆ ವಿವಿಧ ವಿಶ್ವವಿದ್ಯಾಲಯಗಳು ದಂತವೈದ್ಯಕೀಯ ಆಸ್ಪತ್ರೆಗಳನ್ನು ಆರಂಭಿಸಬೇಕು' ಎಂದರು.
ಭಾರತೀಯ ಎಂಡೊಡಾಂಟಿಕ್ಸ್ ಸೊಸೈಟಿ (ಐಇಎಸ್) ಅಧ್ಯಕ್ಷೆ ಡಾ.ನಸೀಂ ಷಾ ಮಾತನಾಡಿ, `ವೈದ್ಯರಿಗೆ ವೃತ್ತಿಬದ್ಧತೆ ಮುಖ್ಯವಾಗಿದ್ದು, ವೃತ್ತಿ ಹಾಗೂ ವೃತ್ತಿ ಸಂಬಂಧಿ ಬರವಣಿಗೆಯಲ್ಲೂ ಮೌಲ್ಯಗಳನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಸಿದ್ಧ ಪಠ್ಯಸಾಮಗ್ರಿಗಳ ಬದಲು ಸ್ವತಃ ಶ್ರಮವಹಿಸಿ ಹುಡುಕಿ ಓದಬೇಕು' ಎಂದು ಸಲಹೆ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್‌ಡಿಎಂ ಸೊಸೈಟಿ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶ ಸಂಘಟನಾ ಸಮಿತಿ ಅಧ್ಯಕ್ಷ ಬಲರಾಮ ನಾಯ್ಕ, ಕಾರ್ಯದರ್ಶಿ ಡಾ.ಪಿ.ಕರುಣಾಕರ, ಐಎಸಿಡಿಇ ಕಾರ್ಯದರ್ಶಿ ಡಾ.ಎಲ್.ಲಕ್ಷ್ಮೀನಾರಾಯಣ, ಡಾ.ಪ್ರಿಯಾ ಹೊರಟ್ಟಿ ವೇದಿಕೆಯಲ್ಲಿದ್ದರು. ವಿವಿಧ ರಾಜ್ಯಗಳ 900ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.