ADVERTISEMENT

ಧಾರವಾಡದಲ್ಲಿ ವಿದ್ಯಾಸಂಸ್ಥೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 7:55 IST
Last Updated 22 ಜೂನ್ 2012, 7:55 IST

ಧಾರವಾಡ: ಚಾತುರ್ಮಾಸ್ಯದ ನಂತರ ಇಲ್ಲಿಯ ಹನುಮಂತನಗರದಲ್ಲಿ ವಿದ್ಯಾ ಸಂಸ್ಥೆ ಹಾಗೂ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಹಿತ ವಸತಿ ನಿಲಯ ಆರಂಭಿಸಲಾಗುವುದು ಉಡುಪು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಘೋಷಿಸಿದರು.

ನಗರದಲ್ಲಿ ಗುರುವಾರ ಶ್ರೀ ಕೃಷ್ಣ, ಶ್ರೀ ರಾಘವೇಂದ್ರ ಶ್ರೀ ಮಹಾಗಣಪತಿ ದೇವತಾ ಸಮುಚ್ಛಯದ ನೂತನ ವಿಮಾನಗೋಪುರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, `ಪ್ರತಿಮೆ ಅಥವಾ ವಿಗ್ರಹಗಳು ದೇವತಾಸ್ವರೂಪಿ. ಭಗವಂತನ ಸನ್ನಿಧಾನ ಅದರಲ್ಲಿರುತ್ತದೆ. ಬಾಹ್ಯರೂಪದಲ್ಲಿ ಭಗವಂತನನ್ನು ಪರಿಚುಸುವ ಮತ್ತು ದಾರಿ ತಪ್ಪಿದಾಗ ಸನ್ಮಾರ್ಗ ತೋರಿಸುವುದೇ ದೇವಾಲಯಗಳು.
 
ಸಂಸಾರ ಸಮುದ್ರದಲ್ಲಿ ಸಿಲುಕಿ ಒದ್ದಾಡುತ್ತಿರುವ ಅಸಂಖ್ಯಾತ ಜನರಿಗೆ ಸನ್ಮಾರ್ಗ ಸಿಗುವುದು ಕಷ್ಟ. ನಾವಿಕರಿಗೆ ಹೇಗೆ ಸಮುದ್ರ ತೀರದಲ್ಲಿ ದಿಕ್ಕು ತಿಳಿಯಲು ಲೈಟ್‌ಹೌಸ್ ಮಾಡಿರುತ್ತಾರೆಯೋ ಹಾಗೆ ದೇವಸ್ಥಾನಗಳು ಭಕ್ತರು ದಾರಿ ತಪ್ಪಿದಾಗ ದಿಕ್ಕು ತೋರುವ ಲೈಟ್‌ಹೌಸ್‌ಗಳಿದ್ದಂತೆ. ಅನ್ಯಾಯದಿಂದ ಗಳಿಸಿದ ಸಂಪತ್ತು ಕ್ಷಣಿಕ ಮತ್ತು ಯಾವ ಕಾಲಕ್ಕೂ ನಿಲ್ಲದು. ನ್ಯಾಯಯುತವಾಗಿ ದುಡಿದ ಅಲ್ಪವಿದ್ದರೂ ಅದು ಶಾಶ್ವತ~ ಎಂದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾ ಅಧ್ಯಕ್ಷ ಟಿ.ಕೃಷ್ಣಯ್ಯ ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು.
ವಿಮಾನಗೋಪುರ ಉದ್ಘಾಟನೆ ನಂತರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆದವು. ನಂತರ ಶ್ರೀಗಳ ಸಂಸ್ಥಾನ ಪೂಜೆ ಜರುಗಿತು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾದ ವತಿಯಿಂದ ಪುರಾಣಿಕರು ಶ್ರೀಗಳಿಗೆ ಧನ್ಯವಾದ ಹಾಗೂ ಕಾಣಿಕೆ ಸಮರ್ಪಣೆ ಮಾಡಿದರು.

ಗೋಪುರ ನಿರ್ಮಾಣಕ್ಕೆ ಧನಸಹಾಯ ಮಾಡಿದ ಗಣ್ಯರನ್ನು ಶ್ರೀಗಳು ಸನ್ಮಾನಿಸಿದರು.ವೆಂಕಟರಾಜ ಉಡುಪಿ, ಕೆ.ಎಸ್.ಎನ್  ಉರಾಳ, ಶ್ರೀಪತಿ ಭಟ್, ಎ.ಜಿ.ರಾವ್, ಗಜಾನನ ಅಣ್ಣ, ಗೋಪಿನಾಥ ಕಿದಿಯೂರ, ಅನಂತ ರಾಮಾಚಾರ್ಯ, ಮುರಳಿ ಉಡುಪಿ, ಹುಬ್ಬಳ್ಳಿಯ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾದ ಅಧ್ಯಕ್ಷ ಶ್ರೀಕಾಂತ ಕೆಮ್ತೂರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.