
ಧಾರವಾಡ: ಮೈಸೂರು ರಂಗಾಯಣದ ಕಲಾವಿದರು ಗುರುವಾರ ಅಭಿನಯಿಸಿದ ‘ಬೀಚಿ ಬುಲೆಟ್ಸ್’ ನಾಟಕ ಬೀಚಿಯವರ ಹಾಸ್ಯದ ಹೊನಲನ್ನು ಪ್ರೇಕ್ಷಕರಿಗೆ ಉಣಬಡಿಸಿತು. ಬರೀ ಹಾಸ್ಯ ಸಾಹಿತಿ ಎಂದು ಪರಿಗಣಿತವಾಗಿದ್ದ ‘ಬೀಚಿ’, ಜೀವನದ ಹಲವು ಸಂದರ್ಭಗಳಿಗೆ ಮುಖಾಮುಖಿಯಾಗಿದ್ದನ್ನು ಕಲಾವಿದರು ಮನೋಜ್ಞವಾಗಿ ಅಭಿಯನಯಿಸಿದರು.
ಎರಡು ಗಂಟೆಗಳಿಗೂ ಅಧಿಕ ಕಾಲ ವಿರಾಮವಿಲ್ಲದೇ ನಡೆದ ಈ ನಾಟಕ ರಂಗಾಯಣದ ಜನಪ್ರಿಯ ಪ್ರಯೋಗಗಳಲ್ಲೊಂದು. ಮಂಜುನಾಥ ಬೆಳಕೆರೆ, ಜಗದೀಶ ಮನೆವಾರ್ತೆ ಹಾಗೂ ಕೃಷ್ಣಕುಮಾರ್ ನಾರ್ಣಕಜೆ ಅವರ ಪರಿಕಲ್ಪನೆಯಲ್ಲಿ ಮೂಡಿದ ‘ಬೀಚಿ ಬುಲೆಟ್ಸ್’ನ್ನು ನಿರ್ದೇಶಿಸಿದವರು ಗಂಗಾಧರ ಸ್ವಾಮಿ.
ಮಾತಿನಲ್ಲೇ ಹೇಗೆ ಹಾಸ್ಯ ಹುಟ್ಟುತ್ತದೆ ಹಾಗೂ ಶಿಕ್ಷಕರ ‘ಜ್ಞಾನಮಟ್ಟ’ ಎಂಥದು ಎಂಬುದನ್ನು ತಿಳಿಸಲು ರಂಗಾಯಣ ಕಲಾವಿದರು ಪ್ರಸಂಗವೊಂದನ್ನು ತೆರೆಯ ಮೇಲೆ ತಂದರು. ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡುವ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳ ಜ್ಞಾನಮಟ್ಟ ಅಳೆಯಲು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಪ್ರಮುಖವಾದುದು ‘ಶಿವಧನಸ್ಸನ್ನು ಮುರಿದುದು ಯಾರು?’ ಎಂಬುದು.
ಉತ್ತರಕ್ಕಾಗಿ ವಿದ್ಯಾರ್ಥಿಗಳು ತಡಕಾಡುವ ಪರಿ ನಗೆ ಉಕ್ಕಿಸುವಂಥದು. ಪ್ರಶ್ನೆಗೆ ಉತ್ತರ ಕನ್ನಡ ಮೇಷ್ಟ್ರಿಂದಾದರೂ ಬಂದೀತೆ ಎಂದು ಅವರತ್ತ ನೋಡುವ ವಿದ್ಯಾರ್ಥಿಗಳಿಗೆ ‘ನಾನಲ್ಲ’ ಎಂದು ಸನ್ನೆಯ ಮೂಲಕ ನಿರಾಶೆಯ ಪ್ರತಿಕ್ರಿಯೆ ದೊರೆಯುತ್ತದೆ. ಕೊನೆಗೆ ವಿದ್ಯಾರ್ಥಿಗಳು, ಶಿವಧನಸ್ಸು ಮುರಿದುದು ನಾವು ನೋಡಿಯೇ ಇಲ್ಲ; ಧನಸ್ಸು ಹೇಗಿತ್ತು ಎಂಬುದೇ ನೋಡಿಲ್ಲ ಎಂದು ‘ನೈಜ’ ಉತ್ತರ ನೀಡುತ್ತಾರೆ!
ಕೊನೆಗೆ ಶಿಕ್ಷಕರತ್ತ ತಿರುಗಿದ ಅಧಿಕಾರಿ, ಅವರಿಂದಲೂ ‘ನಾನು ನೋಡಿಯೇ ಇಲ್ಲ’ ಎಂಬ ಉತ್ತರ ಪಡೆಯುತ್ತಾರೆ. ಪಠ್ಯದ ಕನಿಷ್ಟ ಜ್ಞಾನವೂ ಇಲ್ಲದ್ದರಿಂದ ಕೆಂಡಾಮಂಡಲವಾದ ಅಧಿಕಾರಿ, ಅವರ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿ ಶಿಕ್ಷಣ ಇಲಾಖೆಗೆ ಉತ್ತರ ಬರೆಯುತ್ತಾರೆ.
ಕೆಲ ವಾರಗಳ ಬಳಿಕ ವಿಧಾನಸೌಧದ ಶಿಕ್ಷಣ ಇಲಾಖೆ ಕಚೇರಿಯಿಂದ ಉತ್ತರ ಬರುತ್ತದೆ. ಆದರೆ, ಉತ್ತರ ನೋಡಿದ ಅಧಿಕಾರಿ ಬೇಸ್ತು ಬೀಳುತ್ತಾರೆ. ಊರಲ್ಲಿ ಯಾವ ಬಾವಿಯ ಆಳ ಎಷ್ಟಿದೆ ಎಂದು ನೋಡಿಕೊಂಡು ಬರಲು ಸಹಾಯಕಿಯನ್ನು ಕೇಳುತ್ತಾನೆ! ಆ ಉತ್ತರ ಹೇಗಿದೆಯೆಂದರೆ, ‘ಕೇವಲ ಒಂದು ಶಿವಧನಸ್ಸು ಮುರಿದ ವಿಷಯವನ್ನು ನೀವೇಕೆ ಇಷ್ಟು ದೊಡ್ಡದು ಮಾಡಿದ್ದೀರಿ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಏನೋ ಆಕಸ್ಮಿಕವಾಗಿ ಅದು ಮುರಿದಿರಬಹುದು. ಅದೇನೂ ಅಷ್ಟು ಗಂಭೀರ ಸಂಗತಿಯಲ್ಲ’ ಎಂಬ ಸಮಜಾಯಿಷಿ ಇರುತ್ತದೆ!
ಇನ್ನೊಂದು ನೆನಪಿಡುವ ಪ್ರಸಂಗವಿದೆ. ಕನ್ನಡಕ್ಕಾಗಿ ಒಂದು ಕಾಲಕ್ಕೆ ಕೈಯೆತ್ತಿದ ಸಾಹಿತಿಗಳು ಇಂದು ದುಡ್ಡಿಗಾಗಿ ಹೇಗೆ ಕನ್ನಡವನ್ನು ಮಾರಿಕೊಳ್ಳುತ್ತಿದ್ದಾರೆ ಎಂಬುದು. ಉದ್ಧಾಮ ಸಾಹಿತಿಯೊಬ್ಬರು ಒಂದು ಗಂಟೆ ಕನ್ನಡದ ಬಗ್ಗೆ ಭಾಷಣ ಬಿಗಿಯಲು ₨ 200 ಪಡೆಯುತ್ತಾರೆ.
ಜೊತೆಗೆ ಆಟೊ, ಹಾರದ ಖರ್ಚಿಗೆ ಎಂದು ₨ 80. ಇದನ್ನು ಅರಿತಿದ್ದ ಸಂಘಟಕನೊಬ್ಬ ಕಿಟಕಿ ಬಾಗಿಲು ಮುಚ್ಚಿದ, ಆದರೆ ಇಂದು ನರಪಿಳ್ಳೆಯೂ ಇಲ್ಲದ ಕೋಣೆಯಲ್ಲಿ ಈ ಸಾಹಿತಿಯ ಭಾಷಣ ಏರ್ಪಾಟು ಮಾಡುತ್ತಾರೆ. ಭಾಷಣ ಮಾಡದಿದ್ದರೆ ಹಣ ವಾಪಸ್ ನೀಡಬೇಕು ಎಂದು ಸಂಘಟಕ ಷರತ್ತು ವಿಧಿಸಿರುತ್ತಾರೆ. ಸಭಾಂಗಣ ಖಾಲಿ ಇರುವುದನ್ನು ಕಂಡ ಸಾಹಿತಿ ಭಾಷಣ ಮಾಡುವ ಬದಲು ಗೊರಕೆ ಹೊಡೆಯುತ್ತಾರೆ. ಇದನ್ನು ಗಮನಿಸಲೆಂದು ಟೇಪ್ ರೆಕಾರ್ಡರ್ ಇಟ್ಟಿದ್ದ ಚಾಲಾಕಿ ಸಂಘಟಕ ಸಾಹಿತಿ ಭಾಷಣ ಮಾಡದ್ದನ್ನು ಖಾತ್ರಿ ಪಡಿಸಿಕೊಂಡು ಕೊಟ್ಟ ₨ 280ನ್ನು ವಾಪಸ್ ಪಡೆಯುತ್ತಾರೆ!
ವಿಘ್ನ ನಿವಾರಕ ಗಣಪತಿ ಯಾವ ಜಾತಿಯವರ ಸ್ವತ್ತು ಎಂಬುದು ಸಭಿಕರಲ್ಲಿ ನಗೆಯುಕ್ಕಿಸಿದ ಇನ್ನೊಂದು ಹಾಸ್ಯಮಯ ಪ್ರಸಂಗ. ಐದು ನಿಮಿಷಕ್ಕೊಮ್ಮೆ ಬದಲಾಗುವ ಪಾತ್ರಕ್ಕೆ ತಕ್ಕಂತೆಯೇ ತಮ್ಮ ಪಾತ್ರಗಳಿಗೆ ತಾವೇ ಮೇಕಪ್ ಮಾಡಿಕೊಂಡ ರಂಗಾಯಣ ಕಲಾವಿದರ ಚಾಕಚಕ್ಯತೆ ಉಲ್ಲೇಖನೀಯ.
ಜೋಕಾಗಿ ಹರಿಯಿತು ಕಲಾವಿದರ ಪಿಂಚಣಿ ಬೇಡಿಕೆ!
ಇನ್ನೇನು ಕೆಲವೇ ತಿಂಗಳಲ್ಲಿ ರಂಗಾಯಣದ ಕೆಲ ಕಲಾವಿದರು ನಿವೃತ್ತಿ ಹೊಂದಲಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಅವರಿಗೆ ಇನ್ನೂ ಪಿಂಚಣಿಯನ್ನು ನಿಗದಿಪಡಿಸಿಲ್ಲ. ಈ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಪಿಂಚಣಿ ಬೇಡಿಕೆ ‘ಬೀಚಿ ಬುಲೆಟ್ಸ್’ನಲ್ಲಿ ಒಂದು ಬುಲೆಟ್ಟಾಗಿ ಸರ್ಕಾರದತ್ತಲೇ ಸಿಡಿಯಿತು.
ಆತ್ಮಹತ್ಯೆ ಮಾಡಿಕೊಂಡು ನರಕಕ್ಕೆ ಬಂದ ವ್ಯಕ್ತಿಯೊಬ್ಬ ತನ್ನನ್ನು ದೇವರು ಎಂದು ಕರೆದುಕೊಳ್ಳುತ್ತಾನೆ. ಆತ ಏಕೆ ಸತ್ತಿರಬಹುದು ಎಂಬ ಜಿಜ್ಞಾಸೆ ಯಮ ಹಾಗೂ ಚಿತ್ರಗುಪ್ತರಲ್ಲಿ ಮೂಡುತ್ತದೆ. ಅದಕ್ಕೆ ಚಿತ್ರಗುಪ್ತ, ಈ ಕಲಾವಿದ ಭೂಲೋಕದ ಯಾವುದೋ ನಾಟಕ ಕಂಪನಿಯಲ್ಲಿ ಕಲಾವಿದನಾಗಿರಬೇಕು. ಕಂಪನಿಯವರು ಪಿಂಚಣಿ ಕೊಡದೇ ಇರುವುದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ತರ್ಕವನ್ನು ಮುಂದಿಡುತ್ತಾನೆ!
ತುಂಬಿದ ರಂಗಮಂದಿರ
ರಂಗಾಯಣ ನಾಟಕೋತ್ಸವದ ಮೂರನೇ ದಿನವಾದ ಗುರುವಾರ ಕಲಾವಿದರು ಅಭಿನಯಿಸಿದ ‘ಬೀಚಿ ಬುಲೆಟ್ಸ್’ ನೋಡಲು ಜನತೆ ವಿವಿಧೆಡೆಯಿಂದ ಬಂದ ಪರಿಣಾಮ ಇಡೀ ರಂಗಮಂದಿರ ಭರ್ತಿಯಾಗಿತ್ತು. ಹತ್ತಾರು ಜನರು ಕುರ್ಚಿಯ ಕೆಳಗಿನ ಕಾರ್ಪೆಟ್ ಮೇಲೆ ಕುಳಿತು ನಾಟಕ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.