ADVERTISEMENT

`ನಾಯಕರ ಕೃತಿಗಳಲ್ಲಿ ವಸ್ತುನಿಷ್ಠ ಸಹಜತೆ'

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:38 IST
Last Updated 20 ಏಪ್ರಿಲ್ 2013, 10:38 IST

ಧಾರವಾಡ:  `ಮಾನವೀಯ ಮೌಲ್ಯಗಳ ಗಾಢ ತನ್ಮಯತೆಯೊಂದಿಗೆ ಸಂಶೋಧನಾತ್ಮಕವಾದ ಡಾ.ಸದಾನಂದ ನಾಯಕ ಅವರ ಕೃತಿಗಳಲ್ಲಿ ವಸ್ತುನಿಷ್ಠ ಸಹಜತೆ ಎದ್ದು ಕಾಣುತ್ತದೆ' ಎಂದು ಹಿರಿಯ ಕವಿ ಡಾ.ಚನ್ನವೀರ ಕಣವಿ ಹೇಳಿದರು.

ನಗರದ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನವು ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಸದಾನಂದ ನಾಯಕ ಅವರ ಜನ್ಮಶತಮಾನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಸದಾನಂದರ ಬರವಣಿಗೆಯ ಮೂಲಕ ಅಭಿವ್ಯಕ್ತಗೊಂಡಿರುವ ಸಾಹಿತ್ಯ ಚಿಂತನೆ ಓದುಗರಿಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಅವರ ಎಲ್ಲ ಕೃತಿಗಳನ್ನು ಮರುಮುದ್ರಣ ಮಾಡುವ ಪ್ರಯತ್ನಗಳು ನಡೆಯಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೇಣುಗೋಪಾಲ, `ಸದಾ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಡಾ.ನಾಯಕ, ಎಲೆಯ ಮರೆಯ ಕಾಯಿಯಾಗಿಯೇ ಉಳಿದು ಆದರ್ಶದ ಪಥದಲ್ಲಿ ಪಯಣಿಸಿದವರು. ಜ್ಞಾನಕ್ಷಿತಿಜ ವಿಸ್ತಾರವಾಗಬೇಕೆಂಬ ಹಂಬಲವನ್ನು ಬಲವಾಗಿ ಹೊಂದಿದ್ದರು' ಎಂದು ಸ್ಮರಿಸಿದರು.

ಡಾ.ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಜೈನ, ವೈದಿಕ ಮತ್ತು ವೀರಶೈವ ಪುರಾಣಗಳ ಸಂಶೋಧನಾತ್ಮಕ ವಿಶ್ಲೇಷಣೆಯನ್ನು ನಿರೂಪಿಸಿರುವ ಡಾ.ನಾಯಕ, ಬಹಳ ಅಪರೂಪದ ಪ್ರಾಧ್ಯಾಪಕರಾಗಿದ್ದರು ಎಂದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಸಿದ್ಧರಾಮ ಮನಹಳ್ಳಿ, ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ್, ವಕೀಲ ವೆಂಕಟೇಶ ಕುಲಕರ್ಣಿ, ಹಿರಿಯ ಶಿಕ್ಷಣತಜ್ಞ ಶಿವಶಂಕರ ಹಿರೇಮಠ, ನಾಡವರ ಸಮಾಜ ಸೇವಾ ಸಂಘದ ಎಸ್.ಬಿ.ನಾಯಕ, ಡಾ.ಸದಾನಂದರ ಪುತ್ರಿ ಪ್ರತಿಭಾ ಪ್ರಿಯದರ್ಶಿನಿ ಅಭಿನಂದನಾಪರ ಮಾತನಾಡಿದರು.

ನಿವತ್ತ ಡಿಡಿಪಿಐ ಎಸ್.ಕೆ.ಕಲ್ಲಯ್ಯನವರ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ನಿರೂಪಿಸಿದರು. ಕೆ.ಎಚ್.ನಾಯಕ ವಂದಿಸಿದರು.

ಇಟಿಗಟ್ಟಿ: ಹನುಮಪ್ಪ ತೊಟ್ಟಿಲೋತ್ಸವ 25ಕ್ಕೆ
ಧಾರವಾಡ: ತಾಲ್ಲೂಕಿನ ಇಟಿಗಟ್ಟಿ ಗ್ರಾಮದಲ್ಲಿ ಇದೇ 25ರಂದು ನಡೆಯುವ ಹನುಮ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 18ರಿಂದ ಪ್ರಾರಂಭವಾಗಿರುವ ಡಾ.ಶ್ರೀಶಾಚಾರ್ಯ ನಾಮಾವಳಿ ಅವರ ಪ್ರವಚನ ಕಾರ್ಯಕ್ರಮವು ಅಂದು ಸಂಜೆ 6.30ಕ್ಕೆ ಮಂಗಳಗೊಳ್ಳುವುದು. ಅಲ್ಲದೇ ಅದೇ ದಿನ ಪಂ.ಬಾಲಚಂದ್ರ ಶಾಸ್ತ್ರಿಗಳನ್ನು ಸನ್ಮಾನಿಸಲಾಗುವುದು.

24ರಂದು ಸಂಜೆ 6.30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಲಾಗುವುದು. 25 ರಂದು ಸೂರ್ಯೋದಯದ ಹೊತ್ತಿಗೆ ತೊಟ್ಟಿಲು ಸೇವೆ ಹಾಗೂ ಮಹಾ ಪ್ರಸಾದ ಕಾರ್ಯಕ್ರಮ ಜರುಗಲಿದೆ ಎಂದು ಇಟಿಗಟ್ಟಿ ವಾಡೇದ ಹನುಮಪ್ಪನ ಉತ್ಸವ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಉಚಿತ ಕಂಪ್ಯೂಟರ್ ಶಿಬಿರ
ಧಾರವಾಡ: ಇಲ್ಲಿಯ ಪೂಜಾ ಕಂಪ್ಯೂಟರ್ ಎಜ್ಯುಕೇಶನ್ ವತಿಯಿಂದ ಬೇಸಿಗೆ ರಜೆ ಅವಧಿಯಲ್ಲಿ ವಿಶೇಷ ಉಚಿತ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಅಲ್ಲದೇ ಇದರೊಂದಿಗೆ ಉಚಿತವಾಗಿ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಏರ್ಪಡಿಸಿದ್ದು, ಆಸಕ್ತರು ಮೊಬೈಲ್ ಸಂಖ್ಯೆ 84533 92723ಕ್ಕೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.