ADVERTISEMENT

ನಿಲ್ಲದ ಮಳೆಗೆ ಹೊಸ ಮನೆ ನೆಲಸಮ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 8:35 IST
Last Updated 20 ಜೂನ್ 2011, 8:35 IST

ಕಲಘಟಗಿ: ಕಳೆದ ಎರಡು ದಿನಗಳಿಂದ ಬಿಟ್ಟೂಬಿಡದೇ ಸುರಿಯುತ್ತಿರುವ  ಮಳೆಯಿಂದ ಅನಾಹುತಗಳು ಮುಂದುವರಿದಿದ್ದು, ತಾಲ್ಲೂಕಿನ ಹುಲ್ಲಂಬಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮನೆಯೊಂದು ಶುಕ್ರವಾರ ರಾತ್ರಿ ನೆಲಸಮವಾಗಿದೆ.

ಹುಲ್ಲಂಬಿಯ ಮಲ್ಲಯ್ಯ ಕುಂದಗೋಳ ಎಂಬುವವರ ಮನೆಯನ್ನು ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ನಿರ್ಮಿಸಲಾಗಿತ್ತು. ಮನೆಯ ಗೋಡೆಗಳಿಗೆ ಸಿಮೆಂಟಿನ ಪ್ಲಾಸ್ಟರ್ ಮಾಡಿಸುವುದು ಮಾತ್ರ ಬಾಕಿಯಿತ್ತಾದರೂ, ಮಂಗಳೂರು ಹೆಂಚಿನ ಹೊದಿಕೆಯನ್ನು ಮಾಡಲಾಗಿತ್ತು. ಇಷ್ಟರ ನಡುವೆಯೂ ಹೊಸದಾಗಿ ನಾಲ್ಕಾರು ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿದ ಮನೆ ಮೇಲ್ಛಾವಣಿಯೊಂದಿಗೆ ಸಂಪೂರ್ಣ ನೆಲಕಚ್ಚಿರುವ ಘಟನೆಯಿಂದ ಮನೆಯ ಸದಸ್ಯರೆಲ್ಲ ಆಘಾತಕ್ಕೊಳಗಾಗಿದ್ದಾರೆ.

ಇನ್ನೂ ವಾಸ್ತವ್ಯ ಮಾಡಿರದ ಮನೆಯಾದರೂ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಮಲಗುವುದಕ್ಕಾಗಿ ಮಲ್ಲಯ್ಯ ಮತ್ತು ಮನೆಯವರು ಬರುತ್ತಿದ್ದರೆನ್ನ ಲಾಗಿದೆ. ಆದರೆ ಮನೆಗೆ ಬರುವ ಮುನ್ನವೇ ಮನೆ ಬಿದ್ದಿದ್ದರಿಂದ ಆಗಬಹುದಾದ ಭಾರಿ ಅಪಾಯ ತಪ್ಪಿದೆ.

ಮನೆಯನ್ನು ಕಳೆದುಕೊಂಡವರಿಗೆ ಸರಕಾರ ಗರಿಷ್ಠ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಿಸಿಲಿನ ನಿರೀಕ್ಷೆಯಲ್ಲಿ...
ನಿರಂತರ ಮಳೆಯಿಂದಾಗಿ ರೈತರು ತಮ್ಮ ಕೃಷಿಕಾರ್ಯಗಳಿಗೆ ತೆರಳದಂತಾಗಿದೆ. ಬೀಜ ಗೊಬ್ಬರ ಸೇರಿದಂತೆ ಎಲ್ಲ ತಯಾರಿ ಮಾಡಿಕೊಂಡಿದ್ದರೂ, ಮಳೆರಾಯ ಬಿಡುವು ನೀಡದೇ ಬಿತ್ತನೆ ಕಾರ್ಯ ನಡೆಯುವಂತಿಲ್ಲ.

ಮಳೆ ಹೊರಪಾಗಿ, ಬಿಸಿಲು ಮೂಡಿದಾಗ ಮಾತ್ರ ಹೊಲದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದ್ದು, ರೈತರು ಚಿಂತಿತರಾಗಿದ್ದಾರೆ.

ಶೇ 10ರಷ್ಟೂ ಹತ್ತರಷ್ಟೂ  ಬಿತ್ತನೆಯ ನಡೆಯದೇ ಇರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆ ಕಂಡುಬಂದಿದೆ. ಮಳೆ ಹೀಗೆಯೇ ಮುಂದುವರಿದಲ್ಲಿ ಬೆಳೆಯ ಪ್ರಮಾಣವೂ ಕುಂಠಿತಗೊಳ್ಳಬಹು ದೆಂಬ ಆತಂಕದಲ್ಲಿ ರೈತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.