ADVERTISEMENT

`ಪರಿಸರ ರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ'

ಹಿರಿಯರು, ಕಿರಿಯರ ಗಮನ ಸೆಳೆದ ನೂರಾರು ಅಂಚೆಚೀಟಿಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 6:25 IST
Last Updated 12 ಜೂನ್ 2013, 6:25 IST

ಧಾರವಾಡ: `ಪರಿಸರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದಿವೆ. ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲ, ವಾಯು ಮಾಲಿನ್ಯ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಇದರ ಪರಿಹಾರಕ್ಕೆ ಸಂಘಟಿತ ಪ್ರಯತ್ನ ಅತ್ಯವಶ್ಯ' ಎಂದು ಡಾ.ಸಂಜೀವ ಕುಲಕರ್ಣಿ ಹೇಳಿದರು.

ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಂಡಿತ ಮುಂಜಿ ಅವರು ಸಂಗ್ರಹಿಸಿದ ಅಂಚೆ ಚೀಟಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಪರಿಸರ ಕುರಿತಂತೆ ಜ್ಞಾನ, ಪ್ರೀತಿ ಹಾಗೂ ಕಾಳಜಿ ಎಲ್ಲರಲ್ಲಿ ಹೆಚ್ಚಾಗಬೇಕು. ಸೌಮ್ಯ ಸ್ವಭಾವದ ಪರಿಸರ ಕಾಳಜಿಯನ್ನು ಹೊಂದಿರುವ ಪಂಡಿತ ಮುಂಜಿ ಅವರ ಪರಿಸರ ಕಾಳಜಿ ಧಾರವಾಡಿಗರಿಗೆ ಮಾದರಿಯಾಗಿದೆ. ಅವರ ಮನೆಯ ಮುಂದಿರುವ ನಗರಪಾಲಿಕೆಯ ಉದ್ಯಾನವನವನ್ನು ಅವರು ಪೋಷಿಸುತ್ತಿರುವ ರೀತಿ ಶ್ಲಾಘನೀಯ' ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಸಂಚಾಲಕ ಪ್ರಕಾಶ ಉಡಿಕೇರಿ `ಪರಿಸರ ಸಂರಕ್ಷಣೆಯಲ್ಲಿ ಸಮಾಜದ ಎಲ್ಲ ವರ್ಗದವರು ಸಕ್ರಿಯವಾಗಿ ಭಾಗವಹಿಸಬೇಕು, ಅಂಚೆ ಚೀಟಿಗಳ ಮೂಲಕ ವಿಶ್ವದ ಬಗೆಬಗೆಯ ಪಕ್ಷಿಲೋಕದ ವಿವರಗಳನ್ನು ತಿಳಿಯಲು ಈ ಪ್ರದರ್ಶನ ನೆರವಾಗಿದೆ' ಎಂದರು.

ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಬಿ.ಎಚ್.ಕರಡಿ, ಅಸ್ಲಾಂ ಅಟ್ಟಿಹಾಳ, ವಿಶ್ವನಾಥ ಬಿರಾದಾರ ಇದ್ದರು. ಶಶಿಧರ ಪಾಟೀಲ ವಂದಿಸಿದರು.70 ದೇಶಗಳ 1300 ಅಂಚೆಚೀಟಿಗಳು ಪ್ರದರ್ಶನದಲ್ಲಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.