ಹುಬ್ಬಳ್ಳಿ: ಉತ್ತರಾಖಂಡದ ಪ್ರವಾಹದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಒಟ್ಟು ಒಂದು ಲಕ್ಷ ರೂಪಾಯಿ ಸಂಗ್ರಹಿಸಿದ್ದು ಮಂಗಳವಾರ ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಲಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಎನ್‌ಎಸ್‌ಎಸ್ ಘಟಕದ ಪ್ರಾಧ್ಯಾಪಕ ಪ್ರೊ.ವೀರೇಶ ಎಸ್. ಕಟ್ಟಿಮಠ, ಕಾಲೇಜಿನ ಸುಮಾರು 50 ವಿದ್ಯಾರ್ಥಿಗಳು ಒಂದು ವಾರಗಳ ಕಾಲ ಹುಬ್ಬಳ್ಳಿ ನಗರದ ವಿವಿಧ ಕಡೆಗಳಲ್ಲಿ ನಿಂತು ಸುಮಾರು 10 ಸಾವಿರ ಸಾರ್ವಜನಿಕರಿಂದ ಸಂಗ್ರಹಿಸಿದ್ದು ಜನರಿಂದ ಉತ್ತಮ ಸಹಕಾರ ದೊರಕಿದೆ ಎಂದರು.
ವಿದ್ಯಾರ್ಥಿಗಳು ಯಾವುದೇ ತರಗತಿಗೆ ಗೈರಾಗದೇ ನಿಗದಿತ ಅವಧಿಗಳಲ್ಲಿ ತರಗತಿಗಳನ್ನು ಮುಗಿಸಿ ಉಳಿದ ಸಮಯದಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಜೂನ್ 26ರಂದು ಮೂರು ಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಈ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮುಂದಿನ ಒಂದು ವಾರದಲ್ಲಿ ಒಂದು ಲಕ್ಷ ರೂಪಾಯಿ ಧನ ಸಂಗ್ರಹ ಮಾಡಲಾಗಿದೆ ಎಂದರು.
ಯುವ ಸಮುದಾಯಕ್ಕೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿ ದೀನರ ಕಣ್ಣೊರೆಸುವ ಕಾರ್ಯ ಆವಶ್ಯಕ ಎಂದು ಮನಗಂಡು ರಾಷ್ಟ್ರೀಯ ಸೇವಾಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದರು.
ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಈ ಹಣವನ್ನು ಅರ್ಪಿಸುವ ನಿಟ್ಟಿನಲ್ಲಿ ಕಾಲೇಜಿನ 10 ಜನರ ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರಿಗೆ ನೀಡಲಿದೆ ಎಂದು ಅವರು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಆನಂದ ಡಿ. ಮುಳಗುಂದ ಉಪಸ್ಥಿತರಿದ್ದರು.
ಸ್ವರ್ಣ ಬಿಂದು ಶಿಬಿರ ನಾಳೆ
ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಬುಧವಾರ ಪುಷ್ಯ ನಕ್ಷತ್ರದ ಹಿನ್ನೆಲೆಯಲ್ಲಿ ಬೆಳಿಗ್ಗೆ 9.15ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸ್ವರ್ಣಬಿಂದು ಪ್ರಾಶನ ಹಾಗೂ ಸ್ವರ್ಣ ಪ್ರಾಶನ ಮಾತ್ರೆ ನೀಡುವ ಶಿಬಿರ ಏರ್ಪಡಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಪಿ.ಜಿ. ಸುಬ್ಬನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.