ADVERTISEMENT

`ಪಿಎಚ್‌ಸಿಗಳಲ್ಲಿ ಖಾಸಗಿ ಸ್ತ್ರೀರೋಗ ತಜ್ಞರಿಂದ ಸಲಹೆ'

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 10:13 IST
Last Updated 14 ಡಿಸೆಂಬರ್ 2012, 10:13 IST

ಹುಬ್ಬಳ್ಳಿ: `ಪ್ರಸವಪೂರ್ವ ಮತ್ತು ಪ್ರಸವ ನಂತರದ ಸಾವಿನ ಸಂಖ್ಯೆ ಕಡಿಮೆಗೊಳಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ವಿಶೇಷ ಆರೋಗ್ಯ ಸೇವೆ- ಸಲಹೆ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ' ಎಂದು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ (ಕೆಎಸ್‌ಒಜಿಎ) ನಿಯೋಜಿತ ಅಧ್ಯಕ್ಷ ಡಾ.ಎಂ. ಜಿ. ಹಿರೇಮಠ ತಿಳಿಸಿದರು.

`2013ರಲ್ಲಿ ಸಂಘ `ತಲುಪಲಾಗದವರನ್ನು ತಲುಪುವ ಮತ್ತು ಯುವಕರಿಗೆ ತರಬೇತಿ' ಎಂಬ ವಿಷಯದಡಿ ಕಾರ್ಯ ಪ್ರವೃತ್ತವಾಗಲಿದ್ದು, ಸಂಘದ ಸದಸ್ಯರಾಗಿರುವ 4,000 ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಈ ಯೋಜನೆಗೆ ಕೈಜೋಡಿಸಲಿದ್ದಾರೆ' ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ತಿಳಿಸಿದರು.

`ಸಂಘದ ಸದಸ್ಯರು ಪ್ರತಿ ತಿಂಗಳಲ್ಲಿ ಎರಡು ದಿನ (ಮೊದಲ ಗುರುವಾರ ಮತ್ತು ಮೂರನೇ ಗುರುವಾರ ಮಧ್ಯಾಹ್ನದ ನಂತರ) ಗ್ರಾಮೀಣ ಭಾಗಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳ ಸಹಕಾರ ಪಡೆದು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮ ಧಾರವಾಡ ಜಿಲ್ಲೆಯಲ್ಲಿ ಜನವರಿ ಮೂರರಂದು ಆರಂಭಗೊಳ್ಳಲಿದ್ದು, ಪ್ರಾಯೋಗಿಕವಾಗಿ ಹುಬ್ಬಳ್ಳಿ ತಾಲ್ಲೂಕಿನ ಗ್ರಾಮೀಣ ಭಾಗ ಕೇಂದ್ರೀಕರಿಸಿ ಚಾಲನೆ ನೀಡಲಾಗುವುದು' ಎಂದರು.

`ಧಾರವಾಡ ಜಿಲ್ಲೆಯ ಪ್ರತಿಯೊಬ್ಬ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯ ಪಿಎಸ್‌ಸಿ ಕೇಂದ್ರವನ್ನು ದತ್ತು ಪಡೆದು ಅಲ್ಲಿಗೆ ಬರುವ ಗರ್ಭಿಣಿಯರಿಗೆ ವೈದ್ಯಕೀಯ ಸಲಹೆ - ಸೂಚನೆ ನೀಡಬೇಕು. ತಜ್ಞ ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸವ ಪೂರ್ವ ಮತ್ತು ನಂತರದ ಸಾವಿನ ಪ್ರಮಾಣ ಹೆಚ್ಚುತ್ತಿದೆ' ಎಂದು ಅವರು ಅಭಿಪ್ರಾಯಪಟ್ಟರು.

`ಬ್ಯಾಹಟ್ಟಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ಪಡೆದು ಈ ಕಾರ್ಯಕ್ರಮವನ್ನು ಈಗಾಗಲೇ ನಾನು ಆರಂಭಿಸಿದ್ದೇನೆ. ಪಿಎಚ್‌ಸಿಗಳಿಗೆ ಬರುವ ಗರ್ಭಿಣಿಯರಿಗೆ ಪ್ರಸವ ಸಂಬಂಧಿ ಆರೋಗ್ಯ ಸಮಸ್ಯೆಗಳ ಕುರಿತು ಸ್ತ್ರೀ ರೋಗ ತಜ್ಞರು ಸಲಹೆಗಳನ್ನು ನೀಡಬೇಕು. ಪ್ರಸವ ಪೂರ್ವ ಮತ್ತು ನಂತರದ ಸಾವಿಗೆ ಪ್ರಮುಖವಾಗಿ ಕಾರಣವಾಗುವ ರಕ್ತಸ್ತಾವ, ಗರ್ಭಚೀಲದ ಹರಿಯುವಿಕೆ, ರಕ್ತದೊತ್ತಡ ಕುರಿತು ಹೆಚ್ಚಿನ ನಿಗಾ ವಹಿಸಿ ಅಗತ್ಯ ನಿರ್ದೇಶನ ನೀಡಬೇಕು ಎನ್ನುವುದು ನನ್ನ ಬಯಕೆ. ಖಾಸಗಿ ವೈದ್ಯರ ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರ ನೀಡಿದರೆ ಯೋಜನೆ ಯಶಸ್ವಿಯಾಗುತ್ತದೆ' ಎಂದರು.

`ಧಾರವಾಡ ಜಿಲ್ಲೆಯಲ್ಲಿ 200 ಸ್ತ್ರೀ ರೋಗ ತಜ್ಞರಿದ್ದು, ಎಲ್ಲರೂ ನಗರ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ 25 ಸ್ತ್ರೀ ರೋಗ ವೈದ್ಯರು ಪಿಎಚ್‌ಸಿ ದತ್ತು ಪಡೆದು ಈ ಯೋಜನೆ ಆರಂಭಿಸಲು ಮುಂದೆ ಬಂದಿದ್ದಾರೆ. ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೂ ಸಲ್ಲಿಸಲಾಗಿದೆ. ಗರ್ಭಿಣಿಯರಿಗೆ ಸರ್ಕಾರ ವಿಮಾ ಯೋಜನೆ ಅಳವಡಿಸಿ ಹೆರಿಗೆ ವೆಚ್ಚದ ಮರುಪಾವತಿ ವ್ಯವಸ್ಥೆ ಮಾಡಬೇಕು. ಖಾಸಗಿ ಆಸ್ಪತ್ರೆಗಳೂ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಬೇಕು' ಎಂದು ಆಗ್ರಹಿಸಿದ ಅವರು, `ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ಪ್ರಗತಿ ಅವಲೋಕಿಸಿದ ಬಳಿಕ ಏಪ್ರಿಲ್ ಒಂದರಿಂದ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು' ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಭಾಷ್ ಬಬ್ರುವಾಡ, ಡಾ. ಕಸ್ತೂರಿ ದೋನಿಮಠ, ಡಾ. ನವೀನ್ ಪ್ರಸನ್ನ ಮತ್ತಿತರರು ಇದ್ದರು.

ಸಾವಿನ ಸಂಖ್ಯೆ 200!
ಪ್ರಸವಪೂರ್ವ ಮತ್ತು ನಂತರದ ಸಾವಿನ ಪ್ರಮಾಣ ದೇಶದಲ್ಲಿ ಲಕ್ಷಕ್ಕೆ 270ರಷ್ಟಿದ್ದು, ವಿಶ್ವ ದಲ್ಲೇ ಇದು ಅತಿ ಹೆಚ್ಚು. ಕರ್ನಾಟಕದಲ್ಲಿ ಈ ಪ್ರಮಾಣ 200ಕ್ಕೂ ಹೆಚ್ಚು ಇದ್ದು, ಇದು ದಕ್ಷಿಣ ಭಾರತ ರಾಜ್ಯ ಗಳಲ್ಲೇ ಅತಿ ಹೆಚ್ಚು. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಈ ಪ್ರಮಾಣ ಹೆಚ್ಚಿದೆ. ಹೀಗಾಗಿ ಮೊದಲ ಹಂತವಾಗಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅಳವಡಿಸಲು ನಿರ್ಧರಿಸಲಾಗಿದೆ. ಸಂಘದ ಎಲ್ಲ ಸದಸ್ಯರು ಸಹಕಾರ ನೀಡುವ ಭರ ವಸೆ ಇದೆ' ಎಂದು ಎಂ.ಜಿ. ಹಿರೇಮಠ ತಿಳಿಸಿದರು.

`ರಾಜ್ಯದಾದ್ಯಂತ ಈ ಯೋಜನೆ ಯಶಸ್ವಿಯಾಗಿ ಕಾರ್ಯಗತಗೊಂಡರೆ 2015ರ ವೇಳೆಗೆ ಪ್ರಸವಪೂರ್ವ ಮತ್ತು ನಂತರದ ಸಾವಿನ ಪ್ರಮಾಣ ರಾಜ್ಯದಲ್ಲಿ 100ಕ್ಕಿಂತಲೂ ಕಡಿಮೆಯಾಗಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.