ADVERTISEMENT

ಪೋಲಿಯೊ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪಣ

ಧಾರವಾಡ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 5:55 IST
Last Updated 18 ಜನವರಿ 2016, 5:55 IST
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಮಗುವಿಗೆ ಸಿಬ್ಬಂದಿ ಪೋಲಿಯೊ ಹನಿ ಹಾಕಿದರು
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಮಗುವಿಗೆ ಸಿಬ್ಬಂದಿ ಪೋಲಿಯೊ ಹನಿ ಹಾಕಿದರು   

ಹುಬ್ಬಳ್ಳಿ: ವಿಶ್ವ ಆರೋಗ್ಯ ಸಂಸ್ಥೆಯ ‘ಪೋಲಿಯೊ ಮುಕ್ತ ರಾಷ್ಟ್ರ ನಿರ್ಮಾಣ’ ಅಭಿಯಾನದ ಅಂಗವಾಗಿ ಭಾನುವಾರ ನಗರದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು. ಸರ್ಕಾರಿ ಸಂಸ್ಥೆಗಳು, ಸಂಘ–ಸಂಸ್ಥೆಗಳು ಮತ್ತು ಶಾಲಾ–ಕಾಲೇಜುಗಳಲ್ಲಿ ಸಿಬ್ಬಂದಿ ಪೋಲಿಯೊ ಲಸಿಕೆ ಹಾಕಿದರು.

ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಮೇಯರ್‌ ಅಶ್ವಿನಿ ಮಜ್ಜಗಿ ಚಾಲನೆ ನೀಡಿದರು. ಉಪಮೇಯರ್‌ ಸ್ಮಿತಾ ಜಾಧವ, ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ಹಾಜರಿದ್ದರು. ನಂತರ ಬಂದ ಶಾಸಕ ಪ್ರಸಾದ್ ಅಬ್ಬಯ್ಯ, ಮಗುವಿಗೆ ಪೋಲಿಯೊ ಹನಿ ಹಾಕಿದರು.

ನೈರುತ್ಯ ರೈಲ್ವೆ: ‘ಪೋಲಿಯೊ ಮುಕ್ತ ರಾಷ್ಟ್ರ’ ಅಭಿಯಾನದ ಅಂಗವಾಗಿ ನೈರುತ್ಯ ರೈಲ್ವೆ ವತಿಯಿಂದ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ನೈರುತ್ಯ ರೈಲ್ವೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಎಚ್‌. ಪ್ರದೀಪಕುಮಾರ ಮಗು­ವೊಂದಕ್ಕೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹುಬ್ಬಳ್ಳಿ ವಿಭಾಗೀಯ ಹೆಚ್ಚುವರಿ ಮುಖ್ಯ ವೈದ್ಯಕೀಯ ಸೂಪರಿಂಟೆಂ­ಡೆಂಟ್‌ ಡಾ. ವಿ.ಕೆ. ಹಿಮಾಚಲ್‌ ಮಾತನಾಡಿ, ‘ಹುಬ್ಬಳ್ಳಿ ವಿಭಾಗೀಯ ವೈದ್ಯಕೀಯ ವಿಭಾಗವು ಪೋಲಿಯೊ ಲಸಿಕೆ ಹಾಕುವ ಅಭಿಯಾನಕ್ಕೆ ಸಂಪೂರ್ಣ ಸಜ್ಜಾಗಿದೆ. ಭಾನುವಾರ ಪ್ರಯಾಣ ಮಾಡಿದ, ಶಿಶುವಿನಿಂದ ಐದು ವರ್ಷದ ಮಗುವಿನವರೆಗೂ ಪೋಲಿಯೊ ಹನಿ ಹಾಕುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಈ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಸಂಚಾರಿ ಘಟಕಗಳನ್ನು ಸಿದ್ಧಗೊಳಿ­ಸಿದ್ದು, ಇವುಗಳ ಮೂಲಕ, ದೂರದ ಪ್ರದೇಶಗಳಲ್ಲಿನ ಮಕ್ಕಳಿಗೂ ಪೋಲಿಯೊ ಹನಿ ಹಾಕುವ ಕೆಲಸವನ್ನು ಸಿಬ್ಬಂದಿ ಮಾಡಿದ್ದಾರೆ ಎಂದರು. ರೈಲ್ವೆ ಸೆಂಟ್ರಲ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ಎನ್‌. ರಮಾಕಾಂತ್‌, ಮುಖ್ಯ ಆರೋಗ್ಯ ನಿರ್ದೇಶಕ ಡಾ. ವಿಲಾಸ್‌ ಗುಂಡ, ಹೆಚ್ಚುವರಿ ಮುಖ್ಯ ಆರೋಗ್ಯ ನಿರ್ದೇಶಕ ಡಾ. ಅರುಣಕುಮಾರ, ಸೂಪರಿಂಟೆಂ­ಡೆಂಟ್‌ ಸೌಂದರರಾಜನ್‌ ಮತ್ತು ಸಿಬ್ಬಂದಿ ಹಾಜರಿದ್ದರು.

ರೋಟರಿ ಕ್ಲಬ್‌: ರೋಟರಿ ಕ್ಲಬ್ ಉತ್ತರ ವಲಯದ ವತಿಯಿಂದ 37ರಿಂದ 41ರವರೆಗಿನ ವಾರ್ಡ್‌ಗಳಲ್ಲಿ ಮಕ್ಕಳಿಗೆ ಭಾನುವಾರ ಪೋಲಿಯೊ ಹನಿ ಹಾಕಲಾಯಿತು. ಪೋಲಿಯೊ ಹಾಕುವ ಸಿಬ್ಬಂದಿಗೆ, ಕ್ಲಬ್‌ ವತಿಯಿಂದ ಉಪಾಹಾರ, ಊಟ ಹಾಗೂ ನೀರಿನ ಬಾಟಲಿಗಳನ್ನು ಪೂರೈಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.