ADVERTISEMENT

ಪ್ರಯಾಣ ದರ ಏರಿಕೆಗೆ ಎಸ್‌ಯುಸಿಐ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:50 IST
Last Updated 2 ಅಕ್ಟೋಬರ್ 2012, 4:50 IST

ಧಾರವಾಡ: ಬಸ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಧಾರವಾಡದ ಬಸ್ ನಿಲ್ದಾಣದ ಬಳಿ ಇಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ವತಿುಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹಳ್ಳಿ ಜನರು, ರೈತರು, ಕಾರ್ಮಿಕರು ಮತ್ತು ಪ್ರಯಾಣಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, `ಇತ್ತೀಚಿನ ಡೀಸೆಲ್ ಬೆಲೆ ಏರಿಕೆ ಮತ್ತು ಬರಗಾಲದಿಂದ ಜನತೆ ತತ್ತರಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿದ್ದು ತೀವ್ರ ಖಂಡನೀಯ. ಈ ಹಿಂದೆ ಡೀಸೆಲ್ ಬೆಲೆ ಏರಿಕೆ ಮಾಡಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬಸ್ ದರ ಏರಿಸುವುದಿಲ್ಲವೆಂದು ಹೇಳಿದ್ದ ಸಾರಿಗೆ ಸಚಿವ ಆರ್.ಅಶೋಕ ತಮ್ಮ ಮಾತನ್ನೇ ಮುರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಇತ್ತೀಚೆಗಷ್ಟೆ ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಘೋಷಿಸಿದ್ದವು. ಅಲ್ಲದೆ ಭ್ರಷ್ಟ ಸಚಿವರು, ಶಾಸಕರು, ಅಧಿಕಾರಿಗಳೂ ಸಂಪನ್ಮೂಲಗಳ ಕೊಳ್ಳೆ ಹೊಡೆಯುತ್ತಿದ್ದರೆ ಮತ್ತೊಂದೆಡೆ ಜನತೆಯನ್ನು ಬೆಲೆ ಏರಿಕೆಯಿಂದ ಸುಲಿಗೆ ಮಾಡುತ್ತಿದ್ದಾರೆ. ಜನತೆ ಇದಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಾಗಬೇಕು ಎಂದು ಹೇಳಿದರು.

ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗನ್ನವರ, ಮಲ್ಲೇಶಿ ಹುಡೇದ, ಕಾರ್ಯಕರ್ತರಾದ ಶರಣು ಗೊನವಾರ, ರಮೇಶ ಹೊಸಮನಿ, ಬಸವರಾಜ, ಅಕ್ಷಯ, ಮಂಜುನಾಥ, ಸುನಿಲ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.