ADVERTISEMENT

ಫಲಾನುಭವಿ ಕೈ ಸೇರದ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:05 IST
Last Updated 4 ಅಕ್ಟೋಬರ್ 2012, 5:05 IST
ಫಲಾನುಭವಿ ಕೈ ಸೇರದ ಸೌಲಭ್ಯ
ಫಲಾನುಭವಿ ಕೈ ಸೇರದ ಸೌಲಭ್ಯ   

ಹುಬ್ಬಳ್ಳಿ: `ಅಂಗವಿಕಲ ಮಗನನ್ನ ಬಗಲಾಗ ಇಟ್ಗೊಂಡು ಅಧಿಕಾರಿಗಳ ಹತ್ತಿರ ಓಡಾಡಿದೆ. ಅವಂಗ ಬರುತ್ತಿದ್ದ ಅಂಗವಿಕಲ ಮಾಸಾಶನ ಹಾಗೂ ನನ್ಗ ಬರ‌್ತಿದ್ದ ವಿಧವಾ ವೇತನ ನಿಂತು ವರ್ಷ ಕಳೆದೈತಿ....~
ದಶಕದ ಹಿಂದೆ ನಗರದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಪ್ರಾಣ ತೆತ್ತ ಶೇಂಗಾ ಮಾರಾಟಗಾರ ಅಂಬಾಲಾಲ ಅವರ ಪತ್ನಿ ಹೇಮಾ ಅಂಬಾಲಾಲ ಮೆಹರವಾಡೆ ಅವರು ಕಳೆದ ಏಪ್ರಿಲ್‌ನಲ್ಲಿ ಪತ್ರಿಕೆ ಮುಂದೆ ಹೇಳಿಕೊಂಡ ಅಳಲು ಇದು.
 
ಈ ಹೇಳಿಕೆ ನೀಡಿದ ನಂತರದ ಬೆಳವಣಿಗೆಯಲ್ಲಿ ಅವರಿಗೆ ನ್ಯಾಯಯುತವಾಗಿ ಬರಬೇಕಾದ ಸೌಲಭ್ಯ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇಷ್ಟೆಲ್ಲ ಆಗಿ ಬರೋಬ್ಬರಿ ಐದು ತಿಂಗಳು ಕಳೆದರೂ ಹೇಮಾ ಅವರ ಕಣ್ಣೀರು ಕಡಿಮೆಯಾಗಲಿಲ್ಲ.

`ವಿಧವಾ ವೇತನ ಹಾಗೂ ಅಂಗವಿಕಲ ಮಾಸಾಶನ ಬಿಡುಗಡೆಯಾಗಿದ್ದರೂ ಇಲ್ಲಿಯ ವರೆಗೆ ಒಂದು ಪೈಸೆ ಕೈ ಸೇರಲಿಲ್ಲ. ಅಧಿಕಾರಿಗಳು ಕೈಚೆಲ್ಲಿದಾಗ ಹಿರಿಯ ರಾಜಕಾರಣಿಗಳ ಬಳಿಗೆ ಹೋದೆ. ಅವರು ನೋಡ್ತೀನಿ ಎಂದು ಮಾತ್ರ ಹೇಳಿದರು.

ಒಟ್ಟಿನಲ್ಲಿ ಬದುಕು ಶೋಚನೀಯ ಸ್ಥಿತಿಯಲ್ಲಿದ್ದು ದಿಕ್ಕು ಕಾಣದಾಗಿದೆ...~ ಎಂದು ಹೇಳಿದ ಹೇಮಾ, `ಗಂಡನಿಗೆ ಕೊಳ್ಳಿ ಇಟ್ಟವರು ನಮಗೂ ಒಂದಷ್ಟು ವಿಷ ಹಾಕಿ ಸಾಯಿಸಿ ಪುಣ್ಯ ಕಟ್ಟಿಕೊಳ್ಳಲಿ~ ಎಂದಾಗ ಕಣ್ಣೀರು ಧಾರೆಯಾಗಿ ಹರಿಯಿತು.

ಹಳೇ ಹುಬ್ಬಳ್ಳಿಯ ಶರಾವತಿ ನಗರ ನಿವಾಸಿಯಾದ ಹೇಮಾ ಅವರ ಪತಿ 2001ರ ಸೆಪ್ಟೆಂಬರ್ 15ರಂದು ನಗರದಲ್ಲಿ ನಡೆದ ಗಲಭೆಯಲ್ಲಿ ಸಾವಿಗೀಡಾಗಿದ್ದರು. ಇದಾಗಿ ನಾಲ್ಕು ತಿಂಗಳಲ್ಲಿ ಗಣೇಶ ಹುಟ್ಟಿದ್ದ. ಆತ ಅಂಗವಿಕಲನಾಗಿದ್ದ. ನಂತರ ವಿಧವಾ ವೇತನಕ್ಕಾಗಿ ಅಲೆದಾಡಿದ ಹೇಮಾ ಅವರಿಗೆ ಸಿಗುತ್ತಿದ್ದ ಸೌಲಭ್ಯ 2011ರಿಂದ ನಿಂತು ಹೋಗಿತ್ತು.

ಈ ಕುರಿತು `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ರಾಜ್ಯ ಗುಪ್ತದಳ ಪೊಲೀಸರು ಕಚೇರಿಗಳಿಗೆ ಅಲೆದಾಡಿ ಸೌಲಭ್ಯ ಸಿಗುವಂತೆ ಮಾಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಳು ಹೇಮಾ ಅವರಿಗೆ ಬರೆದ ಪತ್ರದಲ್ಲಿ, ವಿಳಾಸದ ಗೊಂದಲ ಇದ್ದ ಕಾರಣ ಸೌಲಭ್ಯವನ್ನು ಸರಿಯಾಗಿ ತಲುಪಿಸಲು ಸಾಧ್ಯವಾಗಲಿಲ್ಲ ಎಂದಿದ್ದರು.

`ಜಿಲ್ಲಾಧಿಕಾರಿಗಳು ಆದೇಶ ನೀಡಿದರೂ ಸೌಲಭ್ಯವನ್ನು ತಲುಪಿಸಲು ಅಧಿಕಾರಿಗಳು ಮತ್ತೆ ಮೀನ-ಮೇಷ ಎಣಿಸುತ್ತಿದ್ದಾರೆ~ ಎಂದು ಹೇಮಾ ದೂರಿದರು.

`ನಡೆದಾಡಲು ಹಾಗೂ ಯಾವುದೇ ಕೆಲಸವನ್ನು ಸ್ವಂತವಾಗಿ ಮಾಡಲು ಸಾಧ್ಯವಿಲ್ಲದ ಮಗನನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾದರೂ ಹೇಗೆ? ಸ್ವಂತ ಮನೆ ಇಲ್ಲದ ನಮಗೆ ಈಗ ತಿನ್ನುವ ಆಹಾರಕ್ಕೂ ಕುತ್ತು ಬಂದಿದೆ.  ಅಣ್ಣ ಕೈಲಾದ ಸಹಾಯ ಮಾಡುತ್ತಾನೆ. ಆದರೂ ಜೀವನ ಸಾಗಿಸುವುದು ಕಷ್ಟ~ ಎಂದು ಅವರು ಹೇಳಿದರು.

ಗಮನಕ್ಕೆ ಬಂದಿಲ್ಲ: ತಹಶೀಲ್ದಾರ್ ಸ್ಪಷ್ಟನೆ
ಈ ಕುರಿತು ತಹಶೀಲ್ದಾರರಾದ ಜಯಶ್ರೀ ಶಿಂತ್ರಿ ಅವರನ್ನು ಕೇಳಿದಾಗ, `ಹೇಮಾ ಅವರ ವಿಧವಾ ವೇತನ ಹಾಗೂ ಗಣೇಶನ ಅಂಗವಿಕಲ ಮಾಸಾಶನದ ವಿಷಯ ಗಮನಕ್ಕೆ ಬಂದಿಲ್ಲ ಎಂದರು. ಹೇಮಾ ಮೆರವಾಡೆ ಅವರ ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.