ADVERTISEMENT

`ಬಿಆರ್‌ಟಿಎಸ್ ವಿರೋಧಿಸಿ ಸಿಎಂಗೆ ಮನವಿ'

ಚತುಷ್ಪಥ ಸಾಕು, ಫ್ಲೈಓವರ್ ನಿರ್ಮಿಸಿ, ಆಸ್ತಿ ಮಾಲೀಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 11:01 IST
Last Updated 11 ಡಿಸೆಂಬರ್ 2012, 11:01 IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಯನ್ನು ಚತುಷ್ಪಥಕ್ಕೆ ಸೀಮಿತಗೊಳಿಸುವಂತೆ ಹಾಗೂ ಬಿಆರ್‌ಟಿಎಸ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಒಂದೆರಡು ದಿನದೊಳಗೆ ಮನವಿ ಸಲ್ಲಿಸಲು ಹೊಸೂರಿನಿಂದ ನವೀನ ಹೋಟೆಲ್‌ವರೆಗೆ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಆಸ್ತಿಗಳ ಮಾಲೀಕರು ನಿರ್ಧರಿಸಿದ್ದಾರೆ.

ಉಣಕಲ್ ವೃತ್ತ ಸಮೀಪ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಆಸ್ತಿ ಮಾಲೀಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸರ್ಕಾರವು ರಸ್ತೆ ವಿಸ್ತರಣೆ ಜೊತೆಗೆ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಗೊಳಿಸಲು ಹೊರಟಿರುವುದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಈ ಮೊದಲು ಹೊಸೂರಿನಿಂದ ಉಣಕಲ್‌ವರೆಗೆ 35 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದ್ದು, ಇದಕ್ಕೆ ಅಗತ್ಯವಾದ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ 44 ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಯೋಜನೆಯ ಬಗ್ಗೆ  ಸ್ಥಳೀಯರಿಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಭೂಮಿ ವಶಪಡಿಸಿಕೊಳ್ಳುವ ಸಂಬಂಧ ನೋಟಿಸ್ ಸಹ ನೀಡಿಲ್ಲ ಎಂದರು.

ಬಿಆರ್‌ಟಿಎಸ್ ಯೋಜನೆಯು ದೇಶದ ಎಲ್ಲ ಭಾಗಗಳಲ್ಲೂ ವಿಫಲವಾಗಿದೆ. ಹೀಗಿದ್ದು ಸರ್ಕಾರ ಯೋಜನೆ ಅನುಷ್ಠಾನಗೊಳಿಸಹೊರಟಿರುವುದು ಸರಿಯಲ್ಲ. ಇದನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಅಗತ್ಯಬಿದ್ದಲ್ಲಿ ಆಸ್ತಿ ಮಾಲೀಕರೆಲ್ಲರೂ ಒಟ್ಟುಗೂಡಿ ಕಾನೂನು ಹೋರಾಟವನ್ನೂ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಫ್ಲೈ-ಓವರ್ ನಿರ್ಮಿಸಿ: ಮಾಜಿ ಸಚಿವ ಜಬ್ಬಾರ್‌ಖಾನ್ ಹೊನ್ನಳ್ಳಿ ಮಾತನಾಡಿ, ಕಳೆದ ಐದು ವರ್ಷದಿಂದ ಚತುಷ್ಪಥ ರಸ್ತೆ ನಿರ್ಮಾಣ ಸಂಬಂಧ ಪ್ರತಿಕ್ರಿಯೆ ನಡೆಯುತ್ತಿದ್ದರೂ ಈವರೆಗೂ ರಸ್ತೆ ನಿರ್ಮಾಣವಾಗಿಲ್ಲ. ಇದು ಸಾಲದೆಂಬಂತೆ ಈಗ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಸರಿಯಲ್ಲ. ಯೋಜನೆ ಪ್ರಕಾರ ಹುಬ್ಬಳ್ಳಿ-ಧಾರವಾಡ ನಡುವೆ 32 ನಿಲುಗಡೆ ಇರಲಿದ್ದು, ಇದರಿಂದ ವೇಗದ ಪ್ರಯಾಣವಾದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಿವಿಬಿ ಕಾಲೇಜಿನಿಂದ ಉಣಕಲ್‌ವರೆಗೆ ಒಳಸೇತುವೆ ನಿರ್ಮಾಣ ಮಾಡುವುದೂ ಯೋಜನೆಯಲ್ಲಿ ಸೇರಿದೆ. ಆದರೆ ಹೀಗೆ ರಸ್ತೆ ಮಧ್ಯೆ ಗೋಡೆ ಕಟ್ಟಿದಲ್ಲಿ ಇಲ್ಲಿನ ಜನಜೀವನಕ್ಕೆ ತೊಂದರೆಯಾಗಲಿದೆ. ವ್ಯಾಪಾರಕ್ಕೆ ಹೊಡೆತ ಬೀಳಲಿದೆ. ರಸ್ತೆಯ ಆಚೀಚೆಯ ಜನರ ನಡುವೆ ಸಂಪರ್ಕವೇ ಕಡಿತಗೊಳ್ಳಲಿದೆ. ಹೀಗಾಗಿ ಅಂಡರ್‌ಪಾಸ್ ನಿರ್ಮಾಣವನ್ನು ಕೈಬಿಟ್ಟು ಫ್ಲೈಓವರ್ ಅನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಭೂಮಿ ಕಳೆದುಕೊಳ್ಳಲಿರುವ ಆಸ್ತಿ ಮಾಲೀಕರು ಇದೇ 21ರ ಒಳಗೆ ತಮ್ಮ ಆಸ್ತಿಗಳ ವಿವರ ಹಾಗೂ ಆಕ್ಷೇಪಣೆ ಸಲ್ಲಿಸಲು ಸಂಬಂಧಿಸಿದ ಇಲಾಖೆಯು ಸೂಚಿಸಿದ್ದು, ಎಲ್ಲರೂ ಒಟ್ಟಾಗಿ ವಿವರ ಹಾಗೂ ದೂರು ಸಲ್ಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ಭಾನುವಾರ ಇದೇ ಸ್ಥಳದಲ್ಲಿ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಯಿತು.

ವಿನಯ್ ಜವಳಿ, ಪ್ರಕಾಶ ಮಿರ್ಜಾನ್‌ಕರ್, ಯಂಕರೆಡ್ಡಿ ಕಿರೇಸೂರ, ಜಿ. ವಿಜಯರಾಮ್, ಎಸ್.ಎಸ್. ಬಾಗೇವಾಡಿ, ಎಂ.ಆರ್. ಮಿಸ್ಕಿನ್, ಆರ್.ಆರ್. ಮಿಸ್ಕಿನ್, ಮಂಜು ಕಿರೇಸೂರ ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.