ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಬೇರೆ ಪಕ್ಷಗಳು ಅಭ್ಯರ್ಥಿ ಘೋಷಣೆಗೆ ಮೀನಮೇಷ ಎಣಿಸುತ್ತಿದ್ದು, ಬಿಜೆಪಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿ ಪ್ರಚಾರ ಆರಂಭಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದಲ್ಲಿ ಭಾನುವಾರ ಪಕ್ಷದ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ. 20ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದರು.
ಬಿಜೆಪಿ ಈಗಾಗಲೇ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದೆ. ಆದರೆ ಇತರೆ ಪಕ್ಷಗಳಲ್ಲಿ ಪ್ರಧಾನ ಅಭ್ಯರ್ಥಿ ಯಾರು ಎಂಬುದೇ ಇನ್ನೂ ಗೊಂದಲಮಯವಾಗಿದೆ ಎಂದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪತನವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಹೊಸ ರಾಜಕೀಯ ಧ್ರುವೀಕರಣ ಆಗಲಿದ್ದು, ಸಿದ್ದರಾಮಯ್ಯ ಮತ್ತೆ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕೂರಲಿದ್ದಾರೆ ಎಂದರು.
ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸುನಿಲ್ ವಲ್ಯಾಪುರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.