ADVERTISEMENT

ಬಿಸಿಲ ಬೇಗೆಯಲ್ಲೂ ದಣಿಯದ ಶೆಟ್ಟರ್

ಪಾದಯಾತ್ರೆ, ಅಹವಾಲು ಸ್ವೀಕಾರ, ಸಭೆ–ಸಮಾರಂಭ–ಸನ್ಮಾನ

ಗಣೇಶ ವೈದ್ಯ
Published 5 ಮೇ 2018, 11:25 IST
Last Updated 5 ಮೇ 2018, 11:25 IST
ಜಗದೀಶ ಶೆಟ್ಟರ್ ಅವರು ಕನಕದಾಸ ಕಾಲೇಜಿಗೆ ಪ್ರಚಾರಕ್ಕೆ ಹೋದಾಗ ಯುವಕರು ಸೆಲ್ಫಿ ತೆಗೆದುಕೊಂಡರು
ಜಗದೀಶ ಶೆಟ್ಟರ್ ಅವರು ಕನಕದಾಸ ಕಾಲೇಜಿಗೆ ಪ್ರಚಾರಕ್ಕೆ ಹೋದಾಗ ಯುವಕರು ಸೆಲ್ಫಿ ತೆಗೆದುಕೊಂಡರು   

ಹುಬ್ಬಳ್ಳಿ: ಸೂರ್ಯನ ಕಿರಣಗಳು ಬೆಳಕು ಚೆಲ್ಲುವ ಹೊತ್ತಿಗೆ ಬಾದಾಮಿ ನಗರದಲ್ಲಿರುವ ಉದ್ಯಾನದಲ್ಲಿ ಬೀಸುತ್ತಿದ್ದ ತಂಗಾಳಿಯಲ್ಲಿ ಯೋಗ ಮಾಡಿದ ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್‌, ಅಲ್ಲಿದ್ದ ವಾಯು ವಿಹಾರಿಗಳಿಗೆ ಮತ ಕೇಳುವ ಮೂಲಕ ಮತಬೇಟೆಯನ್ನು ಬೆಳ್ಳಂಬೆಳಿಗ್ಗೆಯೇ ಆರಂಭಿಸಿದರು.

ಅಲ್ಲಿಂದ ಶುರುವಾದ ಮತಯಾಚನೆಯ ಯಾತ್ರೆ ಬಿಡುವಿಲ್ಲದಂತೆ ನಡದೇ ಇತ್ತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದಾದ ಮೇಲೆ ಒಂದು ಪ್ರದೇಶದ ಮನೆಗಳಿಗೆ ಭೇಟಿ ನೀಡುತ್ತಲೇ ಇದ್ದರು. ಅಲ್ಲಲ್ಲಿ ಸಣ್ಣದಾದ ಸಭೆ, ಸನ್ಮಾನ ಮುಗಿಸಿಕೊಂಡು ಹೊರಡುತ್ತಲೇ ಇದ್ದರು. ಎಲ್ಲ ಮತದಾರರನ್ನೂ ತಲುಪಬೇಕು ಎನ್ನುವ ಅವರ ಧಾವಂತಕ್ಕೆ ಅವರ ಹಿಂದಿದ್ದ ಪಡೆ ಸಾಥ್‌ ನೀಡಿದ್ದ ದೃಶ್ಯ ಅಭ್ಯರ್ಥಿಯ ಜತೆಗೆ ಒಂದು ಸುತ್ತಿನ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಕಂಡು ಬಂದಿತು.

ಉಳಿದ ದಿನಗಳಲ್ಲಿ ವಾಕಿಂಗ್‌ ಮಾಡುವ ಶೆಟ್ಟರ್‌ಗೆ ಚುನಾವಣೆ ಪ್ರಚಾರದಿಂದಾಗಿ ಅದನ್ನು ಕೈ ಬಿಟ್ಟಿದ್ದಾರೆ. ಕ್ಷೇತ್ರದ ವಿವಿಧೆಡೆ ಮಾಡುವ ಪಾದಯಾತ್ರೆಯು ವಾಂಕಿಂಗ್‌ ಜಾಗವನ್ನು ತುಂಬಿದೆ. ಮನೆಗೆ ವಾಪಸಾಗಿ ತಿಂಡಿ ತಿನ್ನುತ್ತಲೇ ಪಾಲಿಕೆ ಪ್ರತಿನಿಧಿಗಳು, ಮುಖಂಡರೊಂದಿಗೆ ಚರ್ಚೆ ನಡೆಸಿದರು. ಮತ್ತೆ ಪ್ರಚಾರಕ್ಕೆ ಹೊರ ನಡೆದರು.

ADVERTISEMENT

ಕನಕದಾಸ ಶಿಕ್ಷಣ ಸಮಿತಿ ಕಾಲೇಜಿನಲ್ಲಿ ಸಣ್ಣದಾಗಿ ಏರ್ಪಡಿಸಿದ್ದ ಸಭೆಯಲ್ಲಿ ಶಿಕ್ಷಕ ಸಮುದಾಯ ಉದ್ದೇಶಿಸಿ ಮಾತನಾಡಿ, ತಮ್ಮ ಸಾಧನೆಗಳನ್ನು ಮುಂದಿಡುವ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯವನ್ನು ಬಿಚ್ಚಿಟ್ಟರು.

ಇಪ್ಪತ್ತೈದು ವರ್ಷಗಳಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು, ಆಪಾದನೆ ಮಾಡಲು ಸಾಧ್ಯವಾಗದ ವಿರೋಧಿಗಳು ‘ಶೆಟ್ಟರ್ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸುತ್ತಾರೆ. ರಸ್ತೆ ಅಗೆದು, ಅಲ್ಲಿ ಹಾಕಿರುವ ಯುಜಿಡಿ ಪೈಪ್‌ಲೈನ್‌ಗಳನ್ನು ಸಾಕ್ಷಿಯಾಗಿ ತೋರಿಸಬೇಕಷ್ಟೇ ಎಂದು ಚಟಾಕಿ ಹಾರಿಸಿದರು.

ನಿರ್ವಹಣೆ (ಮ್ಯಾನೇಜ್‌ಮೆಂಟ್‌) ವಿಭಾಗದಲ್ಲಿ ಬಂಗಾರದ ಪದಕ ಪಡೆದ ರತ್ನವ್ವ ಅಮರಶೆಟ್ಟಿ ಅವರನ್ನು ಸನ್ಮಾನಿಸಿ ಅಲ್ಲಿಂದ ಎಪಿಎಂಸಿಯತ್ತ ಹೊರಟರು.

ಅಲ್ಲಿ ವರ್ತಕರೊಂದಿಗಿನ ಮಾತು ಮುಗಿಯುತ್ತಿದ್ದಂತೆಯೇ ವರ್ತಕರು ಎದ್ದು ನಿಂತು ತಮ್ಮ ಸಮಸ್ಯೆಗಳನ್ನು ಹೇಳಲಾರಂಭಿಸಿದರು. ಅದಕ್ಕೆ ಅವರು ಸಮಾಧಾನವಾಗಿ, ‘ಚುನಾವಣೆ ಮುಗಿಯಲಿ. ಆಮೇಲೆ ಎಲ್ಲವನ್ನೂ ಪರಿಹರಿಸೋಣ’ ಎಂದು ಟಿಪಿಕಲ್ ಉತ್ತರ ನೀಡಿ ಹೊರಟರು.

ಹಮಾಲರ ಕಾಲೊನಿಗೆ ಭೇಟಿ ನೀಡಿದ ಅವರು, ಅಲ್ಲೊಂದು ಸಭೆ ಮಾಡಬೇಕಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲದ ಕಾರಣ ಸಭೆ ನಡೆಸದೇ ಮುಂದೆ ಹೊರಟಿದ್ದರು. ಎಲ್ಲೆಡೆಯಂತೆಯೇ ಅಲ್ಲಿಯೂ, ಅವರಿಗೆ ಶಾಲು ಹೊದಿಸಿ ಸನ್ಮಾನಿಸುವನ್ನು ಬೆಂಬಲಿಗರು ಮರೆಯಲಿಲ್ಲ. ಔಪಚಾರಿಕವಾಗಿ ಮಾತನಾಡಿ ಪಯಣ ಮುಂದುವರಿಸಿದರು.

ಸಭೆ, ಸನ್ಮಾನ, ಭಾಷಣಗಳ ನಡುವೆಯೇ ಎರಡು ಮದುವೆ ಮಂಟಪಗಳಿಗೂ ಭೇಟಿ ನೀಡಿದರು. ಅಲ್ಲಿಯೇ ಊಟ ಮುಗಿಸಿದರು. ಆ ನಡುವೆಯೇ ಸಂದರ್ಶನಕ್ಕೆ ಬಂದಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆಗಳಿಗೆ ವಾಹನದಲ್ಲಿಯೇ ಉತ್ತರಿಸುತ್ತಿದ್ದರು.

ವರೂರಿನಲ್ಲಿ ವಿಆರ್‌ಎಲ್ ಸಂಸ್ಥೆಯ ಉದ್ಯೋಗಿಗಳನ್ನು ಭೇಟಿ ಮಾಡಿದರು. ಅಲ್ಲಿಂದ ಮರಳಿ ಬಂದು, ಬೆಂಗೇರಿ, ಗೋಪನಕೊಪ್ಪ, ಶಿರೂರ್ ಪಾರ್ಕ್ ವಾರ್ಡ್‌ಗಳಲ್ಲಿ ಪಾದಯಾತ್ರೆ ಮಾಡಿ ಮತಯಾಚನೆ ಮಾಡಿದರು.

ಸುಡು ಬಿಸಿಲಿನ ನಡುವೆಯೇ ಮೂರು ತಾಸಿಗೂ ಹೆಚ್ಚು ಪಾದಯಾತ್ರೆ ಮಾಡಿದ್ದ ಅವರ ಮುಖದಲ್ಲಿ ಆಯಾಸ ಕಾಣಿಸಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯೋಗಾಭ್ಯಾಸವೇ ತಮ್ಮ ಆರೋಗ್ಯದ ಗುಟ್ಟು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.