ADVERTISEMENT

ಬೀದಿಯಲ್ಲಿ ತರಕಾರಿ ಮಾರಾಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:35 IST
Last Updated 10 ಅಕ್ಟೋಬರ್ 2011, 5:35 IST

ಧಾರವಾಡ: ಇಲ್ಲಿನ ಸೂಪರ್ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಜಾತ್ಯತೀತ ಜನತಾದಳದ ಇಸ್ಮಾಯಿಲ್ ತಮಾಟಗಾರ ನೇತೃತ್ವದಲ್ಲಿ ನಡೆದಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ತರಕಾರಿ ಮಾರಾಟಗಾರರು ಭಾನುವಾರ ಸುಭಾಸ ರಸ್ತೆಯಲ್ಲಿ ವ್ಯಾಪಾರ- ವಹಿವಾಟು ನಡೆಸಿದರು.

ಸುಭಾಸ ರಸ್ತೆಯ ಕಾಮತ್ ಹೋಟೆಲ್‌ನಿಂದ ಕೆಸಿಸಿ ಬ್ಯಾಂಕ್ ವರೆಗಿನ ರಸ್ತೆಯಲ್ಲಿ ತರಕಾರಿ, ಹಣ್ಣಿನ ವ್ಯಾಪಾರ ನಡೆಯಿತು. ವಾಹನ ಸಂಚಾರ ಬಂದ್ ಆಗಿತ್ತು. ಸೂಪರ್ ಮಾರುಕಟ್ಟೆಯ ತರಕಾರಿ ಮಾರಾಟಗಾರರು ಬೆಳಿಗ್ಗೆ 8 ಗಂಟೆಗೆ ಸುಭಾಸ ರಸ್ತೆಗೆ ಆಗಮಿಸಿ ತರಕಾರಿಗಳನ್ನು ರಸ್ತೆ ಮೇಲೆ ಹಾಕಿದರು.

ತರಕಾರಿ ಮಾರಾಟಗಾರರು ರಸ್ತೆ ಮೇಲೆ ವ್ಯಾಪಾರ ನಡೆಸುತ್ತಿದ್ದರೂ, ಪಾಲಿಕೆಯವರು ಈ ಬಗ್ಗೆ ಯಾವುದೇ ಆಕ್ಷೇಪ ಎತ್ತಲಿಲ್ಲ. ಪೊಲೀಸರು ಮೂಕಪ್ರೇಕ್ಷರಾಗಿದ್ದರು. ಸಂಜೆ 4.30ರ ವರೆಗೆ ಸುಭಾಸ ರಸ್ತೆಯಲ್ಲಿ ತರಕಾರಿ ವ್ಯಾಪಾರ ನಡೆದಿತ್ತು. ಸುಭಾಸ ರಸ್ತೆಯ ಅಂಗಡಿಕಾರರಿಗೆ ತೀವ್ರ ತೊಂದರೆಯಾಯಿತು.

ಸೂಪರ್ ಮಾರುಕಟ್ಟೆಯಲ್ಲಿ ನಿತ್ಯ ವ್ಯಾಪಾರ ಮಾಡುವವರೇ ಸುಭಾಸ ರಸ್ತೆಯಲ್ಲಿ ಇಂದು ವ್ಯಾಪಾರ ನಡೆಸಿದರು. ಸೂಪರ್ ಮಾರುಕಟ್ಟೆಯಲ್ಲೂ ವ್ಯಾಪಾರ ಎಂದಿನಂತೆ ನಡೆಯಿತು. ಆದರೆ ಕೆಲವು ಮಂದಿ ವ್ಯಾಪಾರಸ್ಥರಿಗೆ ಯಾವುದಕ್ಕಾಗಿ ಹೋರಾಟ ನಡೆದಿದೆ ಎಂಬುದೇ ಗೊತ್ತಿರಲಿಲ್ಲ.

`ಹೋರಾಟದ ಬಗ್ಗೆ ನಮಗೆ ಗೊತ್ತಿಲ್ಲ. ಸುಭಾಸ ರಸ್ತೆಯಲ್ಲಿ ವ್ಯಾಪಾರ ಮಾಡಬೇಕು ಎಂದು ಒತ್ತಾಯದಿಂದ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ಮಾರ್ಕೆಟ್‌ಗೆ ಸೌಲಭ್ಯ ಒದಗಿಸಲು ಹೋರಾಟ ನಡೆದಿದೆ ಎಂದು ಈಗ ಗೊತ್ತಾಗಿದೆ~ ಎಂದು ಕಾಯಿಪಲ್ಲೆ ಮಾರಾಟ ಮಾಡುವ ಮಹಿಳೆಯೊಬ್ಬರು ಹೇಳಿದರು.

ಸಂಜೆ 4.30ರ ನಂತರ ಡಿಸಿಪಿ ಎಸ್.ಎಂ.ಪ್ರತಾಪನ್, ಎಸಿಪಿ ಡಾ. ಸಂಜೀವ ಪಾಟೀಲ ನೇತೃತ್ವದಲ್ಲಿ ರಸ್ತೆ ತೆರವುಗೊಳಿಸುವ ಕಾರ್ಯ ನಡೆಯಿತು.

ಸತ್ಯಾಗ್ರಹ ನಾಲ್ಕನೇ ದಿನಕ್ಕೆ:  ಸೂಪರ್ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಇಸ್ಮಾಯಿಲ್ ತಮಾಟಗಾರ ನಡೆಸಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಮುಂದುವರಿದಿದೆ.

ಜಿಲ್ಲಾಧಿಕಾರಿ ದರ್ಪಣ ಜೈನ್ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮುಷ್ಕರ ಹಿಂದಕ್ಕೆ ಪಡೆಯುವಂತೆ ಕೋರಿದರು. ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು.

ಸೋಮವಾರ ಬೆಳಿಗ್ಗೆ ಸಭೆ ನಡೆಸಿ ಮುಷ್ಕರ ಹಿಂದಕ್ಕೆ ಪಡೆಯುವ ಕುರಿತು ನಿರ್ಧರಿಸಲಾಗುವುದು ಎಂದು ಎನ್.ಎಚ್.ಕೋನರಡ್ಡಿ ಹೇಳಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ, ಹನುಮಂತಪ್ಪ ಅಲ್ಕೋಡ, ರಾಜಣ್ಣ ಕೊರವಿ, ಸರೋಜಾ ಪಾಟೀಲ, ವಿಜಯಲಕ್ಷ್ಮೀ ಲೂತಿಮಠ, ಸುರೇಶ ಹಿರೇಮಠ, ರಾಘವೇಂದ್ರ ಸೊಂಡೂರ ಮತ್ತಿತರರು ಭಾಗವಹಿಸಿದ್ದರು.

ವ್ಯಾಪಾರಸ್ಥರ ಸಭೆ: `ಸೂಪರ್ ಮಾರುಕಟ್ಟೆ ಅಭಿವೃದ್ಧಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಸೋಮವಾರ (ಅ. 10) ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವ್ಯಾಪಾರಸ್ಥರ ಸಭೆ ಕರೆಯಲಾಗುವುದು. ಮಾರುಕಟ್ಟೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ತಾತ್ಕಾಲಿಕ ಸೌಕರ್ಯ ಒದಗಿಸಲು ಕ್ರಮ ಕೈಕೊಳ್ಳಲಾಗುವುದು~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು.

ಸುಭಾಸ ರಸ್ತೆಯಲ್ಲಿ ರಸ್ತೆ ಬಂದ್ ಮಾಡಿ ವ್ಯಾಪಾರ ನಡೆಸಿರುವುದು ಸರಿಯಲ್ಲ. ತಕ್ಷಣ ವಾಪಸ್ಸು ಪಡೆಯಬೇಕು. ಹೀಗೆ ಮುಂದುವರಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.