ADVERTISEMENT

ಬೇಂದ್ರೆ ಬೆಳಕಿನ ಮಹಾಪಥಿಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:15 IST
Last Updated 27 ಅಕ್ಟೋಬರ್ 2011, 10:15 IST

ಧಾರವಾಡ: `ಕಾವ್ಯಮಯ ಚಿಂತನವನ್ನು ನಾಡು-ನುಡಿಗೆ ಕೊಟ್ಟ ಅಂಬಿಕಾತನಯದತ್ತರು ಬೆಳಕಿನ ಮಹಾಪಥಿಕರಾಗಿದ್ದಾರೆ. ಅವರು ಬೀರಿದ ಕಾವ್ಯದ ಕಂಪು ವಿಮರ್ಶೆಗಿಂತ ಹೆಚ್ಚಾಗಿ ಬಯಸುವುದು ಸಹೃದಯ ಸ್ಪಂದನ. ಇದರಿಂದ ಕವಿಯ ಧನ್ಯತಾ ಭಾವಗಳೆಲ್ಲ ಓದುಗನದೂ ಆಗುತ್ತವೆ ಮತ್ತು ಚಿಂತನ ಪಥದಲ್ಲಿ ಮುಂದುವರಿಯುವಂತೆ ಪ್ರೇರೇಪಿಸುತ್ತವೆ~ ಎಂದು ಡಾ. ಕೆ.ಎಸ್. ಶರ್ಮಾ ಪ್ರತಿಪಾದಿಸಿದರು.

ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಪ್ರಸಾರಾಂಗವು ನಗರದ ಬೇಂದ್ರೆ ಭವನದಲ್ಲಿ ಬೇಂದ್ರೆ ಪುಣ್ಯಸ್ಮರಣೆ-31 ಕಾರ್ಯಕ್ರಮದಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

`ಬೇಂದ್ರೆಯವರು ಕವಿಯಾಗಿ ಕನಸನ್ನು ಕಾಣುವ ಮತ್ತು ವಿಜ್ಞಾನಲೋಕದ ಹೊಸ ಹೊಸ ಬಾಗಿಲುಗಳನ್ನು ತೆರೆದು ತೋರಿಸುವ ಅಗಾಧ ಕಲ್ಪನೆಯುಳ್ಳವರಾಗಿದ್ದರು. ಅವರ ಚಿಂತನಾಶಕ್ತಿಯ ಹಿಂದೆ ಮಾನವೀಯ ಕುತೂಹಲ ಮತ್ತು ಮೌಲ್ಯಪ್ರಜ್ಞೆ ಕೂಡ ಇವೆ. ಬೇಂದ್ರೆ ಕುರಿತು ಪ್ರಕಟವಾದ ಇವೆರಡೂ ಪುಸ್ತಕಗಳು ಬೇಂದ್ರೆ ಕಾವ್ಯದ ಸೊಗಸು ಮತ್ತು ವರ್ಣಮಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿವೆ.

ಅವರನ್ನು ಬರಿ ನೆನೆದರೆ ಸಾಲದು. ಅವರ ಗದ್ಯ-ಪದ್ಯ ಸಾಹಿತ್ಯ ಓದಿ, ಅರಿತು ನಾವು ಬೆಳೆಯಬೇಕಾಗಿದೆ. ಏಕೆಂದರೆ ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ ಎಂಬ ಅವರ ಉದ್ಗಾರ ಕೇವಲ ಭಾವುಕವಾಗಿರದೆ ವೈಜ್ಞಾನಿಕ ಆಶಯದಿಂದ ಕೂಡಿದೆ~  ಎಂದು ವಿವರಿಸಿದರು.

ಮುಖ್ಯ ಅತಿಥಿಯಾದ ಕ.ವಿ.ವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರು ಬೇಂದ್ರೆ ಗ್ರಂಥ ಬಹುಮಾನ-2010 ಪಡೆದವರಿಗೆ ಬಹುಮಾನ ನೀಡಿ, ಕವಿ ಬೇಂದ್ರೆ ಎಂದರೆ ನಮಗೆ ಯಾವತ್ತೂ ಒಂದು ಮಾಯಕ. ಅವರ ಕಾಲದಲ್ಲಿದ್ದ ಮುಗ್ಧ ಸ್ನಿಗ್ಧ ವಾತಾವರಣ ಈಗೆಲ್ಲಿ ಹೋದವು ಎಂದು ಹುಡುಕಬೇಕಾಗಿದೆ. ಬೇಂದ್ರೆಯವರನ್ನು ಮೂರು-ನಾಲ್ಕು ಸಲ ಕಂಡು ಮಾತನಾಡಿದಾಗ ನನಗೆ ಧನ್ಯತೆಯ ಭಾವನೆ ಮೂಡುತ್ತಿತ್ತು.

ಬದುಕನ್ನು ಅವರು ಕಂಡ ರೀತಿ ಅನನ್ಯ. ಅದಕ್ಕಿಂತ ಮಿಗಿಲಾಗಿ ಭಾಷೆಯಲ್ಲಿ ಕಂಡರಿಸಿದ ಅವರ ಶೈಲಿ ವಿಸ್ಮಯಕಾರಿ. ಅವರು ನಮ್ಮನ್ನು ಸಹೃದಯರನ್ನಾಗಿ ಮಾರ್ಪಡಿಸುತ್ತಿದ್ದರು. ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಅವರಷ್ಟು ಪ್ರಭಾವಶಾಲಿಯಾಗಿ ತಿಳಿಯಪಡಿಸಿದವರು ಇನ್ನೂ ಹುಟ್ಟಿಲ್ಲ ಎನಿಸುತ್ತದೆ. ಇಂಥ ಮಹಾಕವಿ, ಮಹಾಮಾನವ ಧಾರವಾಡದಲ್ಲಿ ನಮ್ಮೆದುರಿಗೇ ಇದ್ದರೆಂಬುದು ನಮ್ಮ ಸೌಭಾಗ್ಯ~  ಎಂದರು.

ಬೇಂದ್ರೆ ಗ್ರಂಥ ಬಹುಮಾನ ಪಡೆದ ಕಥೆಗಾರ್ತಿ ಅನುಪಮಾ ಪ್ರಸಾದ್(ಕಾಸರಗೋಡು) ಮತ್ತು ಕವಿ ವೀರಣ್ಣ ಮಡಿವಾಳರ (ಚಿಕ್ಕೋಡಿ) ಈ ಸಂದರ್ಭದಲ್ಲಿ ಮಾತನಾಡಿದರು. ಇವರಿಬ್ಬರ ಕೃತಿಗಳನ್ನು ಪ್ರೊ.ದುಷ್ಯಂತ ನಾಡಗೌಡ ಸಮೀಕ್ಷಿಸಿದರು.

ಬೇಂದ್ರೆ ಭಾವಗೀತೆಗಳನ್ನು ಸುಮಿತ್ರಾ ಕಾಡದೇವರಮಠ ಹಾಡಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ  ಬಿ.ಡಿ. ಹಿರೇಗೌಡರು ಸ್ವಾಗತಿಸಿ, ಪರಿಚಯಿಸಿದರು. ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಂದ್ರೆ ಬೆಳಕು ಕೃತಿ ಲೇಖಕರಾದ ಸುರೇಶ ಕುಲಕರ್ಣಿ ಮತ್ತು ಗೌರೀಶ ಕಾಯ್ಕಿಣಿ ವಿರಚಿತ  ಕಂಪಿನಕರೆ ಸಂಪಾದಕರಾದ ಡಾ.ಎಂ.ಜಿ. ಹೆಗಡೆ ಮಾತನಾಡಿದರು. ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.