ಹುಬ್ಬಳ್ಳಿ: ಬೋಗಿಗಳ ಉತ್ಪಾದನೆ ಹಾಗೂ ದುರಸ್ತಿಯಲ್ಲಿ ಗುರಿ ಮೀರಿ ಸಾಧನೆ ಮಾಡಿರುವ ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರ, ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಬಳಕೆಯಲ್ಲೂ ಮಿತವ್ಯಯವನ್ನು ಸಾಧಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಕಾರ್ಯಾ ಗಾರ ಪ್ರಧಾನ ವ್ಯವಸ್ಥಾಪಕ ಶ್ಯಾಮಧರ್ ರಾಮ್, ಕಳೆದ ಹಣಕಾಸು ವರ್ಷದಲ್ಲಿ ಕಾರ್ಯಾಗಾರ ಮಾಡಿದ ಸಾಧನೆ ವಿಷಯವಾಗಿ ಮಾಹಿತಿ ನೀಡಿದರು.
`ಹಿಂದಿನ ವರ್ಷ 97 ಎ/ಸಿ ಬೋಗಿಗಳು, 633 ಎ/ಸಿ ರಹಿತ ಬೋಗಿಗಳು ಹಾಗೂ 630 ಇತರ ಬೋಗಿಗಳನ್ನು ದುರಸ್ತಿ ಮಾಡಲಾಗಿದೆ. ಇದೇ ಅವಧಿಯಲ್ಲಿ 2,875 ಬೋಗಿ ಚೌಕಟ್ಟುಗಳನ್ನು ಉತ್ಪಾದನೆ ಮಾಡಲಾಗಿದ್ದು, 270 ಬೋಗಿ ಗಳನ್ನು ಜೋಡಿಸಲಾಗಿದೆ. 1,375 ಬೋಗಿ ಬೂಸ್ಟರ್, 154 ಬಾಡಿ ಬೂಸ್ಟರ್ ಮತ್ತು 2,931 ಎಲ್.ಎಸ್. ಬೀಮ್‌ಗಳನ್ನು ತಯಾರು ಮಾಡಲಾಗಿದೆ~ ಎಂದು ಅವರು ವಿವರಿಸಿದರು.
`ವಿದ್ಯುತ್ ವ್ಯವಸ್ಥೆಯಲ್ಲಿ ಕೈಗೊಂಡ ವ್ಯಾಪಕ ಸುಧಾರಣಾ ಕ್ರಮಗಳ ಪರಿಣಾಮವಾಗಿ ವಾರ್ಷಿಕ 16,01,580 ಯುನಿಟ್‌ಗಳ ಉಳಿತಾಯ ಮಾಡಲಾಗಿದೆ. ಆಡಳಿತ ಕಚೇರಿ ಕಟ್ಟಡಕ್ಕೆ ಸಂಪೂರ್ಣವಾಗಿ ಸೌರಶಕ್ತಿ ವಿದ್ಯುತ್ತನ್ನೇ ಬಳಕೆ ಮಾಡಲಾಗುತ್ತಿದೆ. ಹೊರೆಯಾಗಿದ್ದ ಉಪ ವಿತರಣಾ ಕೇಂದ್ರದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದರಿಂದ ವಾರ್ಷಿಕ ರೂ 1.59 ಕೋಟಿ ಅನಗತ್ಯ ವೆಚ್ಚವನ್ನು ಉಳಿಸಲು ಸಾಧ್ಯವಾಗಿದೆ~ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
`ಕಾರ್ಯಾಗಾರದ ಆಧುನೀಕರಣಕ್ಕೆ ರೂ 80.98 ಕೋಟಿ ಮಂಜೂರಾಗಿದ್ದು, ಮಾರ್ಚ್ ಅಂತ್ಯಕ್ಕೆ ರೂ 33.68 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಸಿಎನ್‌ಸಿ ಲೇಥ್, ಸಿಎನ್‌ಸಿ ಪ್ಲಾಸ್ಮಾ ಪ್ರೊಫೈಲ್ ಕಟಿಂಗ್ ಯಂತ್ರ, ಬ್ಲಾಸ್ಟಿಂಗ್ ಪಾಯಿಂಟ್, ಪೇಂಟ್ ಬೂತ್, ವಿದ್ಯುತ್ ಕ್ರೇನ್‌ಗಳ ಸೌಲಭ್ಯವನ್ನು ಕಾರ್ಯಾಗಾರ ಪಡೆದಿದೆ~ ಎಂದು ಅವರು ವಿವರಿಸಿದರು.
`ಪ್ರಸಕ್ತ ಸಾಲಿನಲ್ಲಿ ಕಾರ್ಯಾಗಾರದ ಸೌಲಭ್ಯ ವನ್ನು ಮೇಲ್ದರ್ಜೆಗೆ ಏರಿಸಲು ರೂ 17.19 ಕೋಟಿ ಅಗತ್ಯವಿದೆ. ಬೋಗಿ ದುರಸ್ತಿ ಹಾಗೂ ಪೇಂಟ್ ಶೆಡ್‌ಗಳು ಸೋರುತ್ತಿದ್ದು, ಅವುಗಳ ದುರಸ್ತಿಯನ್ನೂ ಮಾಡಬೇಕಿದೆ~ ಎಂದು ಅವರು ಹೇಳಿದರು.
`ಕಾರ್ಯಾಗಾರಕ್ಕೆ 3,617 ಸಿಬ್ಬಂದಿ ಮಂಜೂರಾಗಿದ್ದು, ಸದ್ಯ 3,074 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. 591 ಹುದ್ದೆಗಳು ಖಾಲಿಯಾಗಿದ್ದು, ಶೀಘ್ರದಲ್ಲೇ 200 ಸಿಬ್ಬಂದಿ ಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ~ ಎಂದು ಶ್ಯಾಮ್‌ಧರ್ ತಿಳಿಸಿದರು.
`ಬೋಗಿಗಳ ದುರಸ್ತಿ ಹಾಗೂ ನಿರ್ವಹಣೆ ಅವಧಿ 12ರಿಂದ 18 ತಿಂಗಳಿಗೆ ವಿಸ್ತಾರಗೊಂಡಿದೆ. ಬೋಗಿಗಳ `ವಿ~ ಬೆಲ್ಟ್‌ಗಳ ವೈಫಲ್ಯವನ್ನು ಕಡಿತ ಗೊಳಿಸಲಾಗಿದೆ. ಗಾಲಿಗಳ ನಿರ್ವಹಣೆಗೆ ವಿಶೇಷ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಲಾಗಿದ್ದು, ಇದ ರಿಂದ ಸದ್ಯ ರೈಲ್ವೆ ಇಲಾಖೆಗೆ ರೂ 19.8 ಲಕ್ಷ ಉಳಿತಾಯವಾಗಿದೆ. ವರ್ಷಾಂತ್ಯದ ವೇಳೆಗೆ ಈ ಉಳಿ ತಾಯದ ಪ್ರಮಾಣ ರೂ 4.2 ಕೋಟಿಗೆ ಹೆಚ್ಚಲಿದೆ ಎಂಬ ಅಂದಾಜಿದೆ~ ಎಂದರು.
`ಕಚೇರಿಯಲ್ಲಿ ಕೆಲಸದ ಸಂಸ್ಕೃತಿಯಲ್ಲೂ ಸುಧಾರಣೆ ತರಲಾಗಿದ್ದು, ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಅನಗತ್ಯ ವಿಳಂಬವನ್ನು ಹೋಗಲಾಡಿಸಲು ಸಾಧ್ಯವಾಗಿದ್ದು, ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿದೆ~ ಎಂದು ತೃಪ್ತಿ ವ್ಯಕ್ತಪಡಿಸಿದರು.
ಅಧಿಕಾರಿಗಳಾದ ಅಮಿತವ ಚೌಧರಿ, ರಾಜಶೇಖರಪ್ಪ, ಕೃಷ್ಣಾಜಿರಾವ್, ಮೋಹನ್‌ರಾಜ್, ಸಾಯಿನಾಥ್ ಮತ್ತಿತರರು ಹಾಜರಿದ್ದರು. ಮಧ್ಯಾಹ್ನ ನಡೆದ ರೈಲ್ವೆ ಸಪ್ತಾಹ ಸಮಾರಂಭದಲ್ಲಿ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿಂದಿನ ದಾಖಲೆ ಮುಂದುವರಿಕೆ...
ಕಾರ್ಯಾಗಾರದ ಕಾರ್ಯನಿರ್ವಹಣೆ ಗಾಗಿ ಕಾರ್ಯಕ್ಷಮತೆ, ರೈಲ್ವೆ ಸಪ್ತಾಹ ಪ್ರಶಸ್ತಿಗಳು ದೊರೆತಿವೆ. ಈ ವರ್ಷವೂ ಹಿಂದಿನ ದಾಖಲೆಯನ್ನು ಮುಂದುವರಿಸಲು ನಾವು ಉದ್ದೇಶಿಸಿದ್ದೇವೆ. ಸಿಬ್ಬಂದಿಗೆ ಹಲವು ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳ ಲಾಗಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಎರಡು ವಿಶೇಷ ಘಟಕ ಗಳನ್ನು ಕಾರ್ಯಾಗಾರದ ಆವರಣದಲ್ಲಿ ಹಾಕಲಾಗಿದೆ. ಇದರಿಂದ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿದಿದೆ.
- ಶ್ಯಾಮಧರ್ ರಾಮ್, ಪ್ರಧಾನ ವ್ಯವಸ್ಥಾಪಕ, ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.