ADVERTISEMENT

ಮತದಾರರ ಚೀಟಿಯಲ್ಲಿ ಹೆಣ್ಣು ಗಂಡಾಯ್ತು!

ಶಾಂತಯ್ಯನವರ ಹೆಸರು ಶಾಂತ್ಯಾ ಆದ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 5:32 IST
Last Updated 8 ಮಾರ್ಚ್ 2014, 5:32 IST

ಧಾರವಾಡ: ಮುಂದಿನ ತಿಂಗಳು ನಡೆ ಯಲಿರುವ ಮಹಾಚುನಾವಣೆಯಲ್ಲಿ ಸಾರ್ವಜನಿಕರು ಮತ ಚಲಾಯಿಸಲು ತಮ್ಮ ಮತದಾರರ (ಎಪಿಕ್‌ ಕಾರ್ಡ್‌) ಚೀಟಿಯೊಂದಿಗೆ ಮತ ಚಲಾಯಿಸ ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಚುನಾವಣಾ ಆಯೋಗ ತಾನೇ ನೀಡಿದ ಚೀಟಿಯನ್ನು ನೋಡಿ ಗೊಂದಲಕ್ಕೊಳ ಗಾಗುವುದು ಖಚಿತ.

ಏಕೆಂದರೆ, ಭಾವಚಿತ್ರದಲ್ಲಿ ಹೆಣ್ಣು ಮಗಳ ಫೋಟೊ ಇದ್ದರೂ, ಮತದಾ ರರ ಕಾಲಂನಲ್ಲಿ ಹೆಣ್ಣುಮಗಳ ಹೆಸರಿದ್ದರೂ ಲಿಂಗ ಎಂಬಲ್ಲಿ ಮಾತ್ರ ‘ಪುರುಷ’ ಎಂದಾಗಿದೆ! ಚುನಾವಣಾ ಶಾಖೆಯು ವಿತರಿಸುವ ಕಾರ್ಡುಗಳಲ್ಲಿನ ಅಧ್ವಾನ ಇಷ್ಟಕ್ಕೇ ಮುಗಿಯಲಿಲ್ಲ. ತಂದೆ–ತಾಯಿ ಇಟ್ಟ ಹೆಸರನ್ನು ಆಡು ಭಾಷೆಯಲ್ಲಿ ಬೇರೆ ರೀತಿ ಕರೆಯುತ್ತೇವೆ. ಅದೇ ಆಡುಮಾತಿನ ಹೆಸರುಗಳೇ ಮತ ದಾರರ ಚೀಟಿಯಲ್ಲಿಯೂ ಬಂದರೆ?

ಈ ಪ್ರಶ್ನೆಗೆ ಆಯೋಗ ನೀಡುವ ಸರಳ ಉತ್ತರ, ‘ಇನ್ನೊಂದು ಫಾರಂ ಭರ್ತಿ ಮಾಡಿ ಕೊಡಿ. ನಮಗೆ ಸಮಯ ಸಿಕ್ಕಾಗ ಸರಿ ಮಾಡಿಕೊಡುತ್ತೇವೆ’ ಎಂದು.

ಇಂತಹ ಗಂಭೀರ ತಪ್ಪುಗಳು ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರಬಹು ದಾದರೂ ಧಾರವಾಡ–71 ಕ್ಷೇತ್ರದಲ್ಲಿ ಹೇರಳವಾಗಿಯೇ ನಡೆದಿವೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ.

ಮದಿಹಾಳದ ನಿವಾಸಿ, 56ರ ಹರೆಯದ ಸಿದ್ಧೇಶ್ವರಯ್ಯ ಹೊಸಮಠ ಅವರ ತಂದೆಯ ಹೆಸರು ಶಾಂತಯ್ಯ. ಅದನ್ನೇ ಫಾರಂ ಸಂಖ್ಯೆ 6ರಲ್ಲಿ ಭರ್ತಿ ಮಾಡಿ ಕೊಟ್ಟಿದ್ದರು. ಎಡವಟ್ಟಾಗಿದ್ದು ತಹಶೀಲ್ದಾರ್‌ ಕಚೇರಿಯಲ್ಲಿರುವ ಚುನಾವಣಾ ಶಾಖೆಯಲ್ಲಿ. ಅಲ್ಲಿ ಶಾಂತಯ್ಯ ಬದಲಾಗಿ ಶಾಂತ್ಯಾ ಎಂದು ಮುದ್ರಣ ಗೊಂಡಿದೆ. ಇಂಗ್ಲಿಷ್‌ ಜೊತೆಗೆ ಮತದಾರರ ಹೆಸರನ್ನು ಕನ್ನಡ ದಲ್ಲಿಯೂ ಬರೆಯಲು ಅವಕಾಶವಿದೆ. ಆದರೆ, ಆ ತಾಪತ್ರಯ ತೆಗೆದುಕೊಳ್ಳ ಲು ಒಲ್ಲದ ಚುನಾವಣಾ ಸಿಬ್ಬಂದಿ ಕನ್ನಡದಲ್ಲಿ ಹೆಸರು ಬರೆಯಬೇಕಾದ ಕಡೆಯೂ ಇಂಗ್ಲಿಷ್‌ನಲ್ಲಿಯೇ ಬರೆ ದಿದ್ದಾರೆ.

ಸಿದ್ಧೇಶ್ವರಯ್ಯ ಅವರ ಪುತ್ರ ವಿಶುಕುಮಾರ್ ಅವರಿಗೆ ನೀಡಿದ ಕಾರ್ಡ್‌ನ ತಂದೆಯ ಕಾಲಂ ಎದುರು ‘ಸಿದ್ಯ್ದಾ’ ಎಂದು ಮುದ್ರಣಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ, ಸಿದ್ಧೇಶ್ವರಯ್ಯ ಅವರ ಪುತ್ರ ವಿಜಯ್‌, ‘ನಮ್ಮ ಕುಟುಂಬದ್ದಷ್ಟೇ ಅಲ್ಲ. ಮದಿಹಾಳ ಬಡಾವಣೆಯ ಹಲವು ಕಡೆಗಳಲ್ಲಿ ಇದೇ ಬಗೆಯ ತಪ್ಪುಗಳು ನುಸುಳಿವೆ. ನನ್ನ ಸಹೋದರಿಗೆ ನೀಡಿದ ಕಾರ್ಡ್‌ನಲ್ಲಿ ‘ಪುರುಷ’ ಎಂದು ಬರೆಯುವಾಗ ಚುನಾವಣಾ ಸಿಬ್ಬಂದಿ ನಿದ್ದೆ ಮಾಡುತ್ತಿದ್ದರೇ? ನಾವು ವರ್ಷಾ ನುಗಟ್ಟಲೇ ಹಲವು ಉಪಯುಕ್ತ ಕೆಲಸಗಳಿಗೆ ಬಳಕೆ ಮಾಡುವ ಕಾರ್ಡ್‌ ಗಳನ್ನು ನೀಡುವವರಿಗೆ ಕನಿಷ್ಟ ಜವಾ ಬ್ದಾರಿ ಮತ್ತು ಪ್ರಜ್ಞೆಯೂ ಬೇಡವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಈ ಬಗ್ಗೆ ಪ್ರಶ್ನಿಸಲು ಹೋದರೆ ಇನ್ನೊಂದು ಫಾರಂ ಕೊಟ್ಟು, ತುಂಬಿಕೊಡು ಎನ್ನುತ್ತಾರೆ. ನಾವು ಸರಿಯಾಗಿ ಬರೆದಿದ್ದನ್ನು ಯಥಾವತ್ತಾಗಿ ಮುದ್ರಿಸಿದರೂ ಸರಿಯಾಗುತ್ತಿತ್ತು. ತಾವೇ ತಪ್ಪು ಮಾಡಿ ಮತ್ತೆ ನಮ್ಮನ್ನು ಅಲೆದಾಡಿಸುವುದು ಎಷ್ಟು ಸರಿ’ ಎಂದು ಟೀಕಿಸಿದರು.

‘ಫಾರಂ 8 ಭರ್ತಿ ಮಾಡಿಕೊಡಬೇಕು’
ನಮ್ಮ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಕಾರ್ಡ್‌ಗಳನ್ನು ಮುದ್ರಿಸುವ ಸಮಯದಲ್ಲಿ ಕೆಲವು ಲೋಪದೋಷಗಳಾಗಿವೆ. ಅದಕ್ಕೆಂದೇ ಚುನಾವಣಾ ಆಯೋಗವು ತಿದ್ದುಪಡಿಗೂ ಅವಕಾಶ ಕಲ್ಪಿಸಿದೆ. ಅಂತಹ ತಪ್ಪುಗಳಾಗಿದ್ದಲ್ಲಿ ಫಾರಂ ಸಂಖ್ಯೆ 8ನ್ನು ಭರ್ತಿ ಮಾಡಿಕೊಟ್ಟರೆ ಅದನ್ನು ಸರಿಪಡಿಸಿ ಮತ್ತೊಂದು ಕಾರ್ಡ್‌ ನೀಡಲಾಗುವುದು. ಉದ್ದೇಶಪೂರ್ವಕವಾಗಿ ಈ ತಪ್ಪು ನಡೆದಿರುವುದಿಲ್ಲ. ತಪ್ಪು ಮುದ್ರಣಗೊಂಡಿರುವ ಕಾರ್ಡ್ ತಂದರೂ ಮೂಲ ಪಟ್ಟಿಯಲ್ಲಿನ ಹೆಸರು ಹಾಗೂ ಕಾರ್ಡ್‌ನಲ್ಲಿರುವ ಭಾವಚಿತ್ರದ ಆಧಾರದ ಮೇಲೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.
–ಆರ್‌.ವಿ.ಕಟ್ಟಿ, ತಹಶೀಲ್ದಾರ್‌, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.