ADVERTISEMENT

ಮತಯಂತ್ರ ದೋಷ: ಕಾನೂನು ಸಮರಕ್ಕೆ ನಿರ್ಧಾರ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹೇಶ ನಾಲವಾಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:03 IST
Last Updated 17 ಮೇ 2018, 5:03 IST

ಧಾರವಾಡ: ‘ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿನ ಮತಗಳಿಗೂ, ವಿ.ವಿ. ಪ್ಯಾಟ್‌ನಲ್ಲಿ ದಾಖಲಾಗಿರುವ ಮತಗಳಿಗೂ ವ್ಯತ್ಯಾಸ ಇರುವುದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಜತೆಗೆ ಕಾನೂನು ಸಮರ ನಡೆಸಲು ಸಿದ್ಧತೆ ನಡೆಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ಮಹೇಶ ನಾಲವಾಡ ಹೇಳಿದರು.

‘ಮತ ಎಣಿಕೆ ಸಂದರ್ಭದಲ್ಲಿ ಬೂತ್ ಸಂಖ್ಯೆ ‘135ಎ’ನಲ್ಲಿ ಒಟ್ಟು ದಾಖಲಾದ ಮತಗಳು 459 ಎಂದು ಅಧಿಕಾರಿಗಳು ನಮೂದಿಸಿದ್ದಾರೆ. ಆದರೆ, ಯಂತ್ರದಲ್ಲಿ ದಾಖಲಾದ ಮತಗಳು 505 ಎಂದು ತೋರಿಸುತ್ತಿದೆ. ಜಿಲ್ಲಾ ಚುನಾವಣಾಧಿ ಕಾರಿಗೆ ಲಿಖಿತ ದೂರು ನೀಡಿ ಅದನ್ನು ಪರಿಶೀಲಿಸಲು ಕೋರಲಾಯಿತು. ವಿ.ವಿ. ಪ್ಯಾಟ್‌ನಲ್ಲಿ 459 ಚೀಟಿಗಳೇ ಇದ್ದವು. ಇದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮತದಾನ ಆರಂಭಕ್ಕೂ ಮೊದಲು ನಡೆಸುವ ಅಣುಕು ಮತದಾನದಲ್ಲಿ ಪ್ರತಿ ಅಭ್ಯರ್ಥಿಗೆ ತಲಾ ಎರಡು ಮತಗಳನ್ನು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ 27 ಅಭ್ಯರ್ಥಿಗಳಿಗೆ ಸಂಬಂಧಿಸಿದ 54 ಮತಗಳ ವಿ.ವಿ.ಪ್ಯಾಟ್‌ ಚೀಟಿಗಳು ಕಪ್ಪು ಲಕೋಟೆಯಲ್ಲಿ ಇದೆ. ಆದರೆ, ಹೆಚ್ಚುವರಿ 46 ಮತಗಳು ಎಲ್ಲಿಂದ ಬಂದವು ಎಂಬುದು ನಮ್ಮ ಪ್ರಶ್ನೆ. ಜತೆಗೆ ಸಾಕಷ್ಟು ಖಾಲಿ ಚೀಟಿಗಳು ವಿ.ವಿ. ಪ್ಯಾಟ್ ಪೆಟ್ಟಿಗೆಯಲ್ಲಿದ್ದವು. ಅವು ಎಲ್ಲಿಂದ ಬಂದವು? ಇದನ್ನೆಲ್ಲ ಪರಿಶೀಲಿಸಿ ನ್ಯಾಯ ದೊರಕಿಸಿ
ಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಜೆ 5.45ಕ್ಕೆ ಅಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಮತಗಟ್ಟೆ ಅಧಿಕಾರಿ ಇದಕ್ಕೆ ಯಾವುದೇ ಕಾರಣ ನೀಡಿಲ್ಲ. ಮಧ್ಯಾಹ್ನ 1.55ಕ್ಕೆ ದೂರು ನೀಡಿದ್ದೆ. ಮರು ಮತದಾನ ನಡೆಸಬೇಕು ಎಂದು ಕೋರಿದ್ದರೂ ತಡರಾತ್ರಿ ಜಗದೀಶ ಶೆಟ್ಟರ್‌ ಗೆದಿದ್ದಾರೆ ಎಂದು ಘೋಷಿಸಲಾಗಿದೆ. ಇದು ಅಸಂವಿಧಾನಿಕ ಕ್ರಮ’ ಎಂದರು.

ದೀಪಕ ಚಿಂಚೋರೆ, ಅಲಿ ಗೊರವನಕೊಳ್ಳ, ತಾನಾಜಿ ಪುಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.