ADVERTISEMENT

ಮಧುಮೇಹ ಬರದಂತೆ ನೋಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 4:30 IST
Last Updated 20 ಆಗಸ್ಟ್ 2012, 4:30 IST

ಹುಬ್ಬಳ್ಳಿ: `ಎಲ್ಲ ಕಾಯಿಲೆಗಳನ್ನು ಉತ್ಪಾದಿಸುವ, ಹೆಚ್ಚಿಸುವ ರಿಜರ್ವ್ ಬ್ಯಾಂಕ್ ಎಂದರೆ ಮಧುಮೇಹ. ಅದು ಬಾರದಂತೆ ನೋಡಿಕೊಳ್ಳಿ~ ಎಂದು ಮೇಯರ್ ಡಾ.ಪಾಂಡುರಂಗ ಪಾಟೀಲ ಸಲಹೆ ನೀಡಿದರು.

ಆಶಾ ಹೃದಯ ಮತ್ತು ಮಧುಮೇಹ ಪ್ರತಿಷ್ಠಾನ ಹಾಗೂ ಮಜೀಥಿಯಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ ಮಧುಮೇಹ ಜಾಗೃತಿ ಅಂಗವಾಗಿ ಒಂದು ಲಕ್ಷ ಮಂದಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸುವ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೇ 65-70ರಷ್ಟು ಜನರಿಗೆ ಮಧುಮೇಹ ಕುರಿತು ತಿಳಿವಳಿಕೆ ಕೊರತೆಯಿದೆ. ಮುಖ್ಯವಾಗಿ ಮಧುಮೇಹ ಕಾಯಿಲೆಯೇ ಅಲ್ಲವೆಂದು ಎಲ್ಲರಿಗೆ ದೃಢೀಕರಿಸಬೇಕಿದೆ ಎಂದರು.

`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕವಾಗಿ ಎಲ್ಲ ರೋಗಿಗಳಿಗೆ ತಲುಪುತ್ತಿಲ್ಲ. ಇಂಥ ಸಂದರ್ಭದಲ್ಲಿ ದಾನಿಗಳು ನೀಡುವ ಆರ್ಥಿಕ ನೆರವು ಬಡವರಿಗೆ ಆಶಾಕಿರಣವಾಗಿದೆ. ಜೊತೆಗೆ ದಾನಿಗಳು ದೇವರಾಗಿದ್ದಾರೆ~ ಎಂದರು.

ಒಂದು ಲಕ್ಷ ಮಂದಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸುವ ಯೋಜನೆಗೆ ನೆರವಾದ ಉದ್ಯಮಿ ಆನಂದ ಸಂಕೇಶ್ವರ, ಎಸ್.ಎಸ್. ಮುದ್ದಿ, ಮಹಾದೇವ ಕರಮರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಎಂ. ಅಂಗಡಿ ಮೊದಲಾದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಶಾ ಹೃದಯ ಮತ್ತು ಮಧುಮೇಹ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಜಿ.ಬಿ. ಸತ್ತೂರ ಮಾತನಾಡಿ, ಇದು ಸುಮಾರು 8 ತಿಂಗಳ ಯೋಜನೆಯಾಗಿದ್ದು, ತಪಾಸಣೆಯು ಇದೇ 26ರಂದು ಬೆಳಿಗ್ಗೆ 10 ಗಂಟೆಗೆ ನಗರದ ರೈಲು ನಿಲ್ದಾಣದಲ್ಲಿ ಆರಂಭಗೊಳ್ಳಲಿದೆ.

ಯೋಜನೆಯ ಅನುಷ್ಠಾನಕ್ಕಾಗಿ ನಾಲ್ವರು ನರ್ಸ್‌ಹಾಗೂ ಒಬ್ಬ ವೈದ್ಯರನ್ನು ನೇಮಿಸಲಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ದುರ್ಗದಬೈಲ್, ಗ್ರಾಮೀಣ ಪ್ರದೇಶ ಮತ್ತಿತರ ಕಡೆಗಳಲ್ಲಿ ಅವರು ಪರೀಕ್ಷೆ ಮಾಡಲಿದ್ದಾರೆ. ಮಧುಮೇಹ ಬಗ್ಗೆ ಮಾಹಿತಿ ನೀಡಿ, ಅರಿವು ಮೂಡಿಸುವ ಕರಪತ್ರಗಳನ್ನು ಅವರಿಗೆ ವಿತರಿಸಲಾಗುವುದು. ಪ್ರತಿಯೊಬ್ಬರ ಮಧುಮೇಹ ಪರೀಕ್ಷೆಗೆ 16 ರೂಪಾಯಿ ವೆಚ್ಚವಾಗಲಿದೆ. ಇದಕ್ಕೆ ದಾನಿಗಳು ನೆರವು ನೀಡಿದ್ದಾರೆ~ ಎಂದು ವಿವರಿಸಿದರು.

ಮಹೇಂದ್ರ ವಿಕಮ್ಶಿ, ಜೆ.ಸಿ. ಮಠದ, ಜಿತೇಂದ್ರ ಮಜೀಥಿಯಾ ಹಾಗೂ ಕೇವಲ್ ಲೂನ್ಕರ್ ವೇದಿಕೆ ಮೇಲಿದ್ದರು.
ಆಶಾ ಹೃದಯ ಮತ್ತು ಮಧುಮೇಹ ಪ್ರತಿಷ್ಠಾನ ಹಾಗೂ ಮಜೀಥಿಯಾ ಪ್ರತಿಷ್ಠಾನದ ಆಶ್ರಯದಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವರು ಹಾಜರಿದ್ದರು. ಡಾ.ಪೂಜಾ ಸತ್ತೂರ ಪ್ರಾರ್ಥಿಸಿ, ಶ್ರೀಮತಿ ಮಜೀಥಿಯಾ ಸ್ವಾಗತಿಸಿದರು. ಮಮತಾ ಹಲಗೇರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.