ADVERTISEMENT

ಮಧುರ ಮಂಜುಳ ಗಾನದ ಸೊಬಗು 22ಕ್ಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:45 IST
Last Updated 9 ಜುಲೈ 2012, 5:45 IST

ಧಾರವಾಡ: ಚಂದನ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ `ಮಧುರ ಮಧುರವೀ ಮಂಜುಳ ಗಾನ~ ಕಾರ್ಯಕ್ರಮ ಇದೇ 22ರಂದು ಸಂಜೆ 4ರಿಂದ 7ರವರೆಗೆ ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೂರದರ್ಶನ ವಾಹಿನಿ ನಿರ್ದೇಶಕ ಮಹೇಶ ಜೋಶಿ, “ಅಂದು ನಾಗರಪಂಚಮಿ ಆದುದರಿಂದ ಪಂಚಮಿಗೆ ಸಂಬಂಧಿಸಿದ ಜಾನಪದ, ಸಿನಿಮಾ ಹಾಡು, ತತ್ವಪದಗಳನ್ನು ಹಾಡುವಂತೆ ಕಲಾವಿದರಿಗೆ ಸೂಚಿಸಲಾಗಿದೆ. ಸುಮಾರು 25 ಹಾಡುಗಳನ್ನು ಅಂದು ಹಾಡಿಸಲಾಗುವುದು. ಸ್ಥಳೀಯ ಸಂಸ್ಕೃತಿಗೆ ಆದ್ಯತೆ ನೀಡಲಾಗುವುದು” ಎಂದರು.

ಚಂದನ ವಾಹಿನಿಯಲ್ಲಿ `ನೋಡ ಬನ್ನಿ ನೋಡ ಬನ್ನಿ ನಮ್ಮೂರ~ ಎಂಬ ನೂತನ ಕಾರ್ಯಕ್ರಮ ಆರಂಭಿಸಲಿದ್ದು, ಕುಮಾರವ್ಯಾಸನ ಕೋಳಿವಾಡ, ನಾ.ಸು.ಹರ್ಡೀಕರ, ಆಲೂರು ವೆಂಕಟರಾಯರ ಊರುಗಳ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಇತಿಹಾಸ ತಜ್ಞ ಡಾ.ಸೂರ್ಯನಾಥ ಕಾಮತ ಅವರು ನಮ್ಮ ಯೋಜನೆಗೆ ಸಹಾಯ ಮಾಡಲು ಒಪ್ಪಿದ್ದಾರೆ. ಇದಕ್ಕೆ ಕಂತುಗಳ ಮಿತಿ ಹಾಕಿಲ್ಲ. ಒಂದೊಂದು ಊರಿನ ಬಗ್ಗೆ ಅರ್ಧ ಗಂಟೆ ಅವಧಿಯ ಕಾರ್ಯಕ್ರಮ ನಿರಂತರವಾಗಿ ಪ್ರಸಾರವಾಗಲಿದೆ” ಎಂದರು.

“ಉತ್ತರ ಕರ್ನಾಟಕದ ಕಲಾವಿದರಿಗೆ ವಾಹಿನಿಯಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಈ ಭಾಗದ ಕಲಾವಿದರಿಗೇ ಹೆಚ್ಚು ಅವಕಾಶಗಳು ದೊರೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಆ ಆರೋಪಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ” ಎಂದು ಹೇಳಿದರು.

ಶಾಸಕ ಚಂದ್ರಕಾಂತ ಬೆಲ್ಲದ, ಸ್ಟೇಟ್ ಬ್ಯಾಂಕ್‌ನ ಹಿರಿಯ ಅಧಿಕಾರಿ ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ ಹಾಜರಿದ್ದರು.

`ಶಾಲೆಗಾಗಿ ನಾವು-ನೀವು~ ಆಚರಣೆ

ಧಾರವಾಡ: ನಗರದ ಕೆಲಗೇರಿಯಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಇತ್ತೀಚೆಗೆ ಶಾಲೆಗಾಗಿ ನಾವು ನೀವು ಕಾರ್ಯಕ್ರಮವನ್ನು ಆಚರಿಸಲಾಯಿತು.

ಅನಿಯಮಿತ ಹಾಜರಿ ಉಳ್ಳ ಮಕ್ಕಳ ಪಾಲಕರನ್ನು ಭೇಟಿಯಾಗಿ ಶಾಲೆಗೆ ಕಳುಹಿಸುವಂತೆ ತಿಳಿಸಲಾಯಿತು. ಪರಿಸರ ಜಾಗೃತಿ, ಮಕ್ಕಳ ಹಕ್ಕು ಕಾಯ್ದೆ ಹಾಗೂ ಶಿಕ್ಷಣದ ಮಹತ್ವ ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಹಂಚಿನಮನಿ, ಸದಸ್ಯರಾದ ನಾಗೇಶ ತಲವಾಯಿ, ಲಕ್ಷ್ಮೀ ಪಾಟೀಲ, ಲಕ್ಷ್ಮೀ ವಜ್ಜನ್ನವರ, ಭರಮಣ್ಣ ಮುಗದ ಹಾಗೂ ಗ್ರಾಮದ ಲೂಸಿ ಸಾಲ್ವಾನ್, ನಿಂಗಯ್ಯ ಕಲ್ಯಾಣಮಠ, ಸುಮಂಗಲಾ ಹಿರೇಮಠ ಕಾರ್ಯಕ್ರಮದಲ್ಲಿದ್ದರು.

ಸಹ ಶಿಕ್ಷಕ ಎಸ್.ಬಿ.ಕೇಸರಿ ಪ್ರಮಾಣ ವಚನ ಬೋಧನೆ ಮಾಡಿದರು. ಪ್ರಾಚಾರ್ಯ ಎನ್.ಎಫ್.ಮುಜಾವರ ಅವರು, ಮಕ್ಕಳ ಹಕ್ಕು ಕಾಯಿದೆ ಕುರಿತು ಮಾಹಿತಿ ನೀಡಿದರು. ಎಸ್.ಜಿ.ಕವಠೇಕರ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.