ADVERTISEMENT

ಮನಸೆಳೆವ ಏಳು ಬಣ್ಣದ ಸಂಗೀತ ಕಾರಂಜಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 5:25 IST
Last Updated 3 ಅಕ್ಟೋಬರ್ 2011, 5:25 IST

ಹುಬ್ಬಳ್ಳಿ: ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿಯ ಮಹಾತ್ಮಾ ಗಾಂಧಿ ಉದ್ಯಾನದಲ್ಲಿಯ ಸಂಗೀತ ಕಾರಂಜಿ ಕಾಮನಬಿಲ್ಲಿನ ಹಾಗೆ ಬಾಗುತ್ತದೆ. ಲತೆಯ ಹಾಗೆ ಬಳುಕುತ್ತದೆ. ನವಿಲಿನ ಹಾಗೆ ನರ್ತಿಸುತ್ತದೆ. ಹೀಗೆ ಏಳು ಬಣ್ಣಗಳ ಸಂಗೀತ ಕಾರಂಜಿ ನಿಮ್ಮನ್ನು ಆಕರ್ಷಿಸುತ್ತದೆ.

ಆದರೆ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳ ದಿನಗಳಂದು ರಾತ್ರಿ 7.30 ಗಂಟೆಯಿಂದ ಎಂಟು ಗಂಟೆಯವರೆಗೆ ಮಾತ್ರ ಸಂಗೀತ ಕಾರಂಜಿ ನೋಡಲು ಲಭ್ಯ.

ಕುವೆಂಪು ಅವರ ಉಳುವಾ ಯೋಗಿಯ ನೋಡಲ್ಲಿ, ಬೇಂದ್ರೆಯವರ ಪಾತರಗಿತ್ತಿ ಪಕ್ಕ ನೋಡಿದೇನೆ ಅಕ್ಕ, ಇನ್ನೂ ಯಾಕ ಬರಲಿಲ್ಲಂವ ಹುಬ್ಬಳ್ಳಿಯಾಂವ, ಜವಾನ್ ಎಂಬ ದೇಶಭಕ್ತಿಗೀತೆ, ಅರೆಬಿಕ್ ಸಂಗೀತ, ಕುವೆಂಪು ಅವರ ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ, ಎ.ಆರ್. ರೆಹಮಾನ್ ಹಾಡಿದ ಜೈ ಹೋ,

ಡಾ.ಚಂದ್ರಶೇಖರ ಕಂಬಾರರ ಕಾಡುಕುದುರೆ ಓಡಿ ಬಂದಿತ್ತ, ಚೆಲುವಿನ ಚಿತ್ತಾರ ಸಿನಿಮಾದ ಉಲ್ಲಾಸದ ಹೂಮಳೆ, ಡಾ.ಚನ್ನವೀರ ಕಣವಿ ಅವರ ವಿಶ್ವವಿನೂತನ ವಿದ್ಯಾಚೇತನ, ಆಕಸ್ಮಿಕ ಸಿನಿಮಾದ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು, ಹುಡುಗರು ಸಿನಿಮಾದ ಪಂಕಜಾ, ಶೀಲಾ ಕಿ ಜವಾನಿ ಹಾಡುಗಳನ್ನು ಸಂಗೀತ ಕಾರಂಜಿಗೆ ಅಳವಡಿಸಲಾಗಿದೆ.

ಈ ಎಲ್ಲ ಹಾಡುಗಳ ಅವಧಿ 40 ನಿಮಿಷ. ಆದರೆ ಅರ್ಧ ಗಂಟೆಗೆ ಮಾತ್ರ ಸಂಗೀತ ಕಾರಂಜಿಯನ್ನು ಪ್ರದರ್ಶಿಸುವುದರಿಂದ ಏಳು ಹಾಡುಗಳನ್ನು ಅಳವಡಿಸಲಾಗಿದೆ. `ಒಟ್ಟು 91 ನಮೂನೆಯ ಕಾರಂಜಿಗಳಿವೆ. 150 ವ್ಯಾಟ್‌ನ ಒಟ್ಟು 160 ಬಲ್ಬುಗಳನ್ನು ಬಳಸಲಾಗಿದೆ.

ಏಳು ಬಣ್ಣಗಳನ್ನು ಅಳವಡಿಸಲಾಗಿದೆ. ಹಾಡುಗಳು ಪ್ರಸಾರವಾದ ಹಾಗೆ ಕಾರಂಜಿ ಕುಣಿಯುತ್ತದೆ. ಇದು ಅತ್ಯಂತ ಆಧುನಿಕ ತಂತ್ರಜ್ಞಾನದಿಂದ ಕೂಡಿದೆ. ಜೊತೆಗೆ ಶೇ 70ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ. ಹೇಗೆಂದರೆ ಪಂಪ್‌ಗಳನ್ನು ಹೆಚ್ಚು ಬಳಸಿದ್ದೇವೆ.

ಅಗತ್ಯಕ್ಕೆ ಮಾತ್ರ ಪಂಪ್‌ಗಳು ಬಳಕೆಯಾಗುವುದರಿಂದ ಹೆಚ್ಚು ವಿದ್ಯುತ್ ಬಳಕೆಯಾಗುವುದಿಲ್ಲ~ ಎಂದು ಸಂಗೀತ ಕಾರಂಜಿ ನಿರ್ವಹಣೆಯ ಗುತ್ತಿಗೆ ಪಡೆದಿರುವ ಬಿಎನ್‌ಎ ಟೆಕ್ನಾಲಜಿಯ ಯೋಜನಾಧಿಕಾರಿ ಮಧುಗಿರಿ ಜಯರಾಂ ಶ್ರೀಧರ ತಿಳಿಸಿದರು.

`ಒಂದೊಂದು ಕಾರಂಜಿಗೆ ಒಂದೊಂದು ಸ್ವತಂತ್ರ ಪಂಪ್ ಅಳವಡಿಸಲಾಗಿದೆ. ಆಯಾ ಹಾಡು ಪ್ರಸಾರವಾದಾಕ್ಷಣ ಆಯಾ ಪಂಪ್‌ನಲ್ಲಿ ನೀರು ಜಿಗಿಯುತ್ತದೆ. ಜೊತೆಗೆ ಬಣ್ಣದ ದೀಪಗಳು ಉರಿಯುತ್ತವೆ. ಇದನ್ನೆಲ್ಲ ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗಿದೆ.
 
ಒಂದೊಂದು ಹಾಡು ಅಳವಡಿಸಲು 25-30 ಗಂಟೆ ಶ್ರಮ ಪಟ್ಟಿದ್ದೇವೆ. ಟೆಂಡರ್ ಮೂಲಕ ಗುತ್ತಿಗೆ ಪಡೆದು ರೂ. 65 ಲಕ್ಷ ವೆಚ್ಚದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಧಾರವಾಡದ ಸಾಧನಕೇರಿಯ ಸಂಗೀತ ಕಾರಂಜಿಗಿಂತ ಇದು ಮೂರು ಪಟ್ಟು ದೊಡ್ಡದು~ ಎಂದು ಅವರು ಸಂಭ್ರಮದಿಂದ ಹೇಳಿದರು.

`ಮಹಾತ್ಮಾ ಗಾಂಧಿ ಉದ್ಯಾನದ ಆಕರ್ಷಣೆಗಳಲ್ಲಿ ಸಂಗೀತ ಕಾರಂಜಿ ಕೂಡಾ ಒಂದು. ಈ ಉದ್ಯಾನದಲ್ಲಿ   ಸುತ್ತಾಡಿ ರಾತ್ರಿ 7.30ರ ಹೊತ್ತಿಗೆ ಸಂಗೀತ ಕಾರಂಜಿ ಬಳಿ ಸಾರ್ವಜನಿಕರು ನೆರೆಯುತ್ತಾರೆ. ಸಂಗೀತ ಕಾರಂಜಿಯನ್ನು ಕುಳಿತು, ನಿಂತು ನೋಡಿಕೊಂಡು ಮನೆಗಳಿಗೆ ತೆರಳುತ್ತಾರೆ.

ಜನರೇಟರ್ ಅಳವಡಿಸಿರುವುದರಿಂದ ವಿದ್ಯುತ್ ವ್ಯತ್ಯಯವಾದರೂ ಸಂಗೀತ ಕಾರಂಜಿ ಪ್ರದರ್ಶನಕ್ಕೆ ಯಾವುದೇ ತೊಂದರೆ ಇರುವುದಿಲ್ಲ~ ಎನ್ನುತ್ತಾರೆ ಜಿಲ್ಲಾಧಿಕಾರಿ ದರ್ಪಣ್ ಜೈನ್.

`ಕವಿಗಳ ಕವಿತೆಗಳನ್ನು ಕೇಳುತ್ತ ಸಂಗೀತ ಕಾರಂಜಿಯನ್ನು ನೋಡುವುದೇ ಚೆಂದ. ಕೆಲವೊಮ್ಮೆ ಹಾಡಿಗೂ ಸಂಗೀತ ಕಾರಂಜಿಗೂ ಹೊಂದಾಣಿಕೆ ಆಗುತ್ತಿಲ್ಲ ಎಂದೆನ್ನಿಸಿದೆ.ಆದರೂ ಕಾರಂಜಿಯ ನರ್ತನ ನೋಡಲು ಆನಂದವಾಗುತ್ತದೆ~ ಎನ್ನುತ್ತಾರೆ ವಿಜಯನಗರದ ವಿಜಯೇಂದ್ರ ಜೋಶಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.