ADVERTISEMENT

ಮನಸ್ಸುಗಳ ಮೇಲೆ `ಮತದಾನ'ದ ಮುನ್ನುಡಿ

ಸಾಂಸ್ಕೃತಿಕ ಜನೋತ್ಸವ: ಚಳಿಯಲ್ಲೂ ಚಿತ್ರ ವೀಕ್ಷಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:52 IST
Last Updated 6 ಡಿಸೆಂಬರ್ 2012, 6:52 IST

ಹುಬ್ಬಳ್ಳಿ: ಧಾರವಾಡ ಸಾಂಸ್ಕೃತಿಕ ಜನೋತ್ಸವದ ದಶಮಾನೋತ್ಸವ ಕಾರ್ಯಕ್ರಮಗಳ ಕಡೆಯ ದಿನವಾದ ಬುಧವಾರ ಮಹಿಳಾ ವಿದ್ಯಾಪೀಠದ ಆವರಣದಲ್ಲಿ ನಡೆದ `ಮತದಾನ' ಚಿತ್ರ ಪ್ರದರ್ಶನ ವಿದ್ಯಾರ್ಥಿಗಳ ಮನಸ್ಸುಗಳ ಮೇಲೆ ಹಲವು ಚಿಂತನೆಗಳ ಮುನ್ನುಡಿ ಬರೆಯುವಲ್ಲಿ ಯಶಸ್ವಿಯಾಯಿತು.

ದಶಕದ ಹಿಂದೆ ಬಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ `ಮತದಾನ' ಚಿತ್ರವನ್ನು ಬಹುತೇಕ ವಿದ್ಯಾರ್ಥಿಗಳು ಇದೇ ಮೊದಲ ಬಾರಿ ವೀಕ್ಷಿಸಿದರು. ವಿದ್ಯಾಪೀಠದ ಆಟದ ಮೈದಾನದಲ್ಲಿ ಹಾಕಲಾಗಿದ್ದ ಪರದೆಯ ಮೇಲೆ ಚಿತ್ರವನ್ನು ಪ್ರದರ್ಶಿಸಲಾಯಿತು. ಕೊರೆಯುವ ಸಂಜೆ ಚಳಿಯಲ್ಲೂ ವಿದ್ಯಾರ್ಥಿಗಳು ಚಿತ್ರ ವೀಕ್ಷಣೆ ಮಾಡಿದರು. ಚಿತ್ರದ ಎಲ್ಲಾ ಸನ್ನಿವೇಶಗಳನ್ನೂ ವಿದ್ಯಾರ್ಥಿಗಳು ಮನಸಾರೆ ಮೆಚ್ಚಿಕೊಂಡರು.

ಚಿತ್ರದಲ್ಲಿ ಬರುವ ಚುನಾವಣಾ ತಂತ್ರಗಳು, ಪ್ರತಿತಂತ್ರಗಳು, ಸ್ವಾರ್ಥ, ಪ್ರೀತಿ, ನಿಷ್ಠೆ, ಆದರ್ಶ, ಅಧಿಕಾರ, ಅಸಹಾಯಕತೆ, ಹಾಸ್ಯ, ತಿಕ್ಕಲುತನ, ನೋವು... ಎಲ್ಲವೂ ವಿದ್ಯಾರ್ಥಿಗಳ ಮನಸೆಳೆಯುವಲ್ಲಿ ಯಶಸ್ವಿಯಾದವು.

ಚಿತ್ರದಲ್ಲಿ ಬರುವ ಪುಟ್ಟತಿಮ್ಮಯ್ಯನ (ಅವಿನಾಶ್) ಮಾತುಗಳು ನಗೆ ಬುಗ್ಗೆ ಹರಿಸಿದವು. ಡಾ. ಶಿವಪ್ಪ (ಹೇಮಂತ್ ಹೆಗಡೆ) ಮತ್ತು ಲಕ್ಷ್ಮಿಯ (ತಾರಾ) ಪ್ರೇಮ ಪ್ರಸಂಗ ಹಾಗೂ ಸುಂದರ ಹಾಡು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿತು. ಶಿವಪ್ಪ ಮತ್ತು ಲಕ್ಷ್ಮಿ ನಡುವಿನ ಲಕ್ಷ್ಮಿ ನಡುವಿನ ಮದುವೆ ಮುರಿದು ಬಿದ್ದಾಗ ಕಣ್ಣುಗಳು ಆರ್ದ್ರಗೊಂಡವು. ಸ್ವಾರ್ಥಕ್ಕಾಗಿ ಪುಟ್ಟತಿಮ್ಮಯ್ಯ ಲಕ್ಷ್ಮಿಯನ್ನು ಮದುವೆಯಾದಾಗ ವಿದ್ಯಾರ್ಥಿಗಳು ಲಕ್ಷ್ಮಿಯ ಪುಟ್ಟತಮ್ಮಯ್ಯನ ಸ್ವಾರ್ಥದ ವಿರುದ್ಧ ಕೈಕೈ ಮುರಿದುಕೊಂಡರು. ಚುನಾವಣೆ ಸಂದರ್ಭದಲ್ಲಿ ತಂತ್ರಕ್ಕೆ ಪ್ರತಿತಂತ್ರ ಎಣೆಯುವ ಶ್ರೀಕಂಕಠೇಗೌಡ,  ಮಾರ್ಕಂಡೇಗೌಡ (ದೇವರಾಜ್) ಅವರ ರಾಜಕೀಯ ವಿದ್ಯಾರ್ಥಿಗಳ ಮನಸ್ಸುಗಳ ಮೇಲೆ ವ್ಯವಸ್ಥೆಯ ಕನ್ನಡಿ ಹಿಡಿಯಿತು.

ರಾಜಕೀಯ ದಾಳಕ್ಕೆ ರಾಮಲಿಂಗೇಗೌಡ (ಅನಂತ್‌ನಾಗ್) ಬಲಿಯಾದಾಗ ಎಲ್ಲರ ಕಣ್ಣಾಲಿಗಳು ತುಂಬಿ ಬಂದವು. ರಾಮಲಿಂಗೇಗೌಡರ ಆಸ್ತಿಯನ್ನು ಬರೆಸಿಕೊಳ್ಳುವಾಗ ಶೆಟ್ಟಿ(ಪಿ. ಶೇಷಾದ್ರಿ)ಯ ಸಹಾನುಭೂತಿ ಎಲ್ಲರಲ್ಲೂ ಧನ್ಯತಾಭಾವ ಮೂಡಿಸಿತು. ಕಡೆಯಲ್ಲಿ ಶಿವಪ್ಪ ಮತ್ತು ಲಕ್ಷ್ಮಿ ಒಂದಾದಾಗ ವಿದ್ಯಾರ್ಥಿಗಳ ಕರತಾಡನ ಮುಗಿಲು ಮುಟ್ಟಿತ್ತು.
`ಮತದಾನ ಚಿತ್ರವನ್ನು ನಾನು ಈ ಮೊದಲು ನೋಡಿರಲಿಲ್ಲ. ಪ್ರಶಸ್ತಿಗಾಗಿ ಮಾಡಿದ ಚಿತ್ರ ಎಂದು ಎಲ್ಲರೂ ಮಾತನಾಡಿಕೊಳ್ಳುವುದನ್ನು ಕೇಳಿ ಚಿತ್ರ ನೋಡದೆ ನಿರ್ಲಕ್ಷ್ಯ ಮಾಡಿದೆ. ಆದರೆ ಈಗ ಚಿತ್ರ ನೋಡಿದ ಮೇಲೆ, ಮುಂದೆ ಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ನೋಡಬೇಕು ಎಂದು ಅನ್ನಿಸುತ್ತಿದೆ' ಎಂದು ಬಿ.ಕಾಂ. ವಿದ್ಯಾರ್ಥಿ ರೂಪಶ್ರೀ ಹೇಳಿದರು.

`ಸಂವಾದಕ್ಕಿಲ್ಲದ ವಿದ್ಯಾರ್ಥಿಗಳು'
ಚಿತ್ರದ ನಂತರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕುರಿತು ಮೊದಲೇ ವಿದ್ಯಾರ್ಥಿಗಳಿಗೆ ಘೋಷಣೆ ಮಾಡಲಾಗಿತ್ತು. ಆದರೆ ಬಹುತೇಕ ವಿದ್ಯಾರ್ಥಿಗಳು ಚಿತ್ರ ಮುಗಿದ ಕೂಡಲೇ ಎದ್ದು ಹೋದರು. ಇದ್ದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಗೂ ಹೊರಗಿನಿಂದ ಬಂದ ಪ್ರೇಕ್ಷಕರಿಗಾಗಿ ಸಂವಾದ ನಡೆಯಿತು.

`ಚಿತ್ರದ ನಾಯಕ ಯಾರು' ಎಂಬ ಪತ್ರಕರ್ತ ರಾಜು ವಿಜಾಪುರ ಕೇಳಿದ ಪ್ರಶ್ನೆಗೆ `ಚಿತ್ರದಲ್ಲಿ ಕತೆಯೇ ನಾಯಕನಾಗಿದ್ದು, ಪಾತ್ರಗಳಿಗಿಂತಲೂ ಕತೆಯನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರಿಸಲಾಗಿದೆ' ಎಂದು ತಜ್ಞವೈದ್ಯ ಡಾ. ವಸುಧೇಂದ್ರ ಉತ್ತರಿಸಿದರು. `ಮತದಾನ ಜನರ ಜನ್ಮಸಿದ್ಧ ಹಕ್ಕು, ಆದರೆ ಮತದಾನವನ್ನು ದುರುಪಯೋಗ ಮಾಡಿಕೊಂಡು ಸಾಮಾನ್ಯರನ್ನು ಬಲಿಪಶು ಮಾಡುವ ರಾಜಕೀಯ ವ್ಯವಸ್ಥೆಗೆ ಕೊನೆ ಎಂದು' ಎಂದು ವಿದ್ಯಾರ್ಥಿ ಪೂಜಾ ಕೇಳಿದ ಪ್ರಶ್ನೆಗೆ `ರಾಜಕಾರಣಿಗಳು ಹಣದ ಬಲದ ಮೇಲೆ ರಾಜಕೀಯ ಮಾಡುವತನಕ ಸಾಮಾನ್ಯರು ಬಲಿಪಶುಗಳಾಗುತ್ತಾರೆ' ಎಂದು ಸಾಹಿತಿ ಜಗದೀಶ ಮಂಗಳೂರಮಠ ಹೇಳಿದರು.

`ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಹುಡುಕುವುದು ಹೇಗೆ' ಎಂಬ ಡಾ. ಅನಿತಾ ಕೆಂಭಾವಿ ಅವರ ಪ್ರಶ್ನೆಗೆ `ಪ್ರಾಮಾಣಿಕ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಬರಬೇಕು. ಜನರು ಪ್ರಾಮಾಣಿಕರಿಗೇ ಮತದಾನ ಮಾಡಬೇಕು' ಎಂದು ಮಂಗಳೂರ ಮಠ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ವಿದ್ಯಾಪೀಠದ ಕಾರ್ಯದರ್ಶಿ ಕೆ.ಟಿ. ಪಾಟೀಲ, ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಬಡಿಗೇರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT