ADVERTISEMENT

ಮನೋಹರ ಗ್ರಂಥಮಾಲೆಗೆ ಚಿರಂಜೀವಿ ಸಿಂಗ್ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 8:25 IST
Last Updated 11 ಆಗಸ್ಟ್ 2011, 8:25 IST
ಮನೋಹರ ಗ್ರಂಥಮಾಲೆಗೆ ಚಿರಂಜೀವಿ ಸಿಂಗ್ ಭೇಟಿ
ಮನೋಹರ ಗ್ರಂಥಮಾಲೆಗೆ ಚಿರಂಜೀವಿ ಸಿಂಗ್ ಭೇಟಿ   

ಧಾರವಾಡ: ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಮನೋಹರ ಗ್ರಂಥಮಾಲೆಗೆ ಮಂಗಳವಾರ ಭೇಟಿ ನೀಡಿ ಕನ್ನಡ ಸಾಹಿತ್ಯ ಕುರಿತು ಚರ್ಚೆ ನಡೆಸಿದರು.

ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಂಗ್, ಕನ್ನಡದಲ್ಲಿ ಬರುತ್ತಿರುವ ಹೊಸ ಸಾಹಿತ್ಯ ಪ್ರಕಾರಗಳ ಬಗ್ಗೆ ವಿಚಾರಿಸಿದರು.

ಕನ್ನಡ ಪುಸ್ತಕಗಳ ಮಾರುಕಟ್ಟೆಯ ಬಗ್ಗೆ ವಿವರವಾದ ಮಾಹಿತಿ ನೀಡಿದ ಸಂಪಾದಕ ಡಾ. ರಮಾಕಾಂತ ಜೋಶಿ, ಪುಸ್ತಕದ ಅಂಗಡಿಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟ ಕಡಿಮೆಯಾಗುತ್ತಿದ್ದರೂ, ಪುಸ್ತಕ ಪ್ರಕಟಣೆ ಮುಂದುವರಿದಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಏಕಗವಾಕ್ಷಿ ಯೋಜನೆಯಲ್ಲಿ ಸಗಟು ಖರೀದಿಯಾಗಿ ಪ್ರತಿ ವರ್ಷದ ಮೊದಲ ಆವೃತ್ತಿಯಾಗಿ ಪ್ರಕಟವಾಗುವ ಪುಸ್ತಕಗಳ 300 ಪ್ರತಿಗಳನ್ನು ಖರಿದಿಸುತ್ತಿರುವುದು ಇದಕ್ಕೆ ಕಾರಣ ಎಂದರು.

ಇಂಥ ಬೆಳವಣಿಗೆ ಬಗ್ಗೆ ಖೇದ ವ್ಯಕ್ತಪಡಿಸಿದ ಸಿಂಗ್, ಗ್ರಂಥಮಾಲೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ವ್ಯವಸ್ಥಾಪಕ ಸಮೀರ ಜೋಶಿ, ತಮ್ಮ ಮಹತ್ವಾಕಾಂಕ್ಷೆಯ ಕತೆ- ಚಿತ್ರಕತೆ- ಚಿತ್ರ, ಈ ಮೂರು ಪ್ರಕಾರಗಳನ್ನು ಒಂದೆಡೆಗೆ ಸೇರಿಸಿ ಪ್ರಕಟಿಸುವ ಯೋಜನೆಯನ್ನು ವಿವರಿಸಿದರು. ಮೂಲ ಕತೆ ನಂತರ ಅದರ ತಿರುಳಿನಿಂದ ತಯಾರಾದ ಚಿತ್ರಕತೆ, ಚಿತ್ರಕತೆಯನ್ನು ಆಧರಿಸಿ ತಯಾರಾದ ಚಿತ್ರ ಹೀಗೆ ಮೂರನ್ನು ಒಟ್ಟಿಗೆ ಪ್ರಕಟಿಸುವುದರಿಂದ ಹೊಸದಾಗಿ ಚಿತ್ರಕತೆ ಬರೆಯುವವರಿಗೆ ಮಾದರಿಯಾಗಬಲ್ಲದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.