ADVERTISEMENT

ಮರಳು: ತಜ್ಞರ ಸಮಿತಿ ರಚನೆಗೆ ಸಲಹೆ

ಧರಣಿಗೆ ಫಕ್ಕೀರೇಶ ಶ್ರೀ, ಮಾಜಿ ಮುಖ್ಯಮಂತ್ರಿ ಶೆಟ್ಟರ್‌ ಬೆಂಬಲ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 6:22 IST
Last Updated 1 ಜನವರಿ 2014, 6:22 IST

ಹುಬ್ಬಳ್ಳಿ: ‘ಹೊಸ ಮರಳು ನೀತಿಯಿಂದಾಗಿ ರಾಜ್ಯ­ದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನ ಮಾಡಲು ದೀರ್ಘಕಾಲದ ಪರಿಹಾರ ಮಾರ್ಗ ಅಗತ್ಯ ಎಂದು ಅಭಿಪ್ರಾಯಪಟ್ಟ ಮಾಜಿ ಮುಖ್ಯ­ಮಂತ್ರಿ ಜಗದೀಶ ಶೆಟ್ಟರ್‌, ಮರಳಿನ (ಉಸುಕಿನ) ಲಭ್ಯತೆ, ಅಗತ್ಯ ಇತ್ಯಾದಿ ಮಾಹಿತಿಯನ್ನು ಸಂಗ್ರಹಿ­ಸಲು ಹಿರಿಯ ಅಧಿಕಾರಿಗಳು ಮತ್ತು ತಜ್ಞರನ್ನು ಒಳಗೊಂಡ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ನಗರದ ಗಬ್ಬೂರು ಕ್ರಾಸ್‌ನಲ್ಲಿ ಹತ್ತು ದಿನ­ಗಳಿಂದ ಧರಣಿ ನಡೆಸುತ್ತಿರುವ ಶ್ರೀ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘದವರನ್ನು ಮಂಗಳವಾರ ಭೇಟಿ ಮಾಡಿ ಬೆಂಬಲ ಸೂಚಿಸಿದ ಅವರು ಮರಳು ಸಾಗಾಣಿಕೆಗೆ ಸಂಬಂಧಿಸಿ ಎಲ್ಲರಿಗೂ ಅನುಕೂಲವಾಗುವ ರೀತಿಯ ನಿರ್ಧಾರವನ್ನು ಕೈಗೊಳ್ಳಲು ಹಿಂದೇಟು ಹಾಕಿದರೆ ಮುಂದಿನ ವಿಧಾನ ಮಂಡಲ ಅಧಿವೇಶನದ ಆರಂಭದಿಂದಲೇ ಹೋರಾಟ ಮಾಡಲಾಗು­ವುದು ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲೇ ಮರಳು ಸಾಗಾಣಿಕೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಕಾಣುವ ಹಂತಕ್ಕೆ ಬಂದಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ಬಂದು ಹೊಸ ಸರ್ಕಾರ ರಚನೆ­ಯಾಯಿತು. ಕಾಂಗ್ರೆಸ್‌ ಸರ್ಕಾರ ಯಾವುದೇ ಪೂರ್ವಾಪರ ಯೋಚನೆ ಮಾಡದೆ ಹೊಸ ಮರಳು ನೀತಿಯನ್ನು ಜಾರಿಗೆ ತಂದಿತು. ಹೊಸ ನೀತಿಯು ವಸೂಲಿ ಹೆಚ್ಚು ಮಾಡಲು ಮತ್ತು ಮರಳಿಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ವಿವಿಧ ಇಲಾಖೆಗಳಿಗೆ ಹರಡಲು ನೆರವಾಗಲಿದೆಯೇ ಹೊರತು ಮರಳು ಸಾಗಾಟಗಾರರು ಮತ್ತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಮಾಡಲಾರದು’ ಎಂದು ಅವರು ದೂರಿದರು.

‘ಉಸುಕು ಸರಿಯಾಗಿ ಸಿಗದಿದ್ದರೆ ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗಲಿದೆ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿ ಅಧಿ­ವೇ­ಶನದಲ್ಲೂ ಈ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿ­ಸುತ್ತಾ ಬರಲಾಗಿದೆ. ಆದರೆ ಸಮಸ್ಯೆಗಳನ್ನು ಆತ್ಮ­ಹತ್ಯೆ­ಗಳ ನಂತರ ಮಾತ್ರ ಅರ್ಥ ಮಾಡಿಕೊಳ್ಳುವ ಸರ್ಕಾರ ಮರಳಿನ ವಿಷಯದಲ್ಲೂ ಅದೇ ತತ್ವಕ್ಕೆ ಜೋತು ಬಿದ್ದಿದೆ’ ಎಂದು ಶೆಟ್ಟರ್‌ ವ್ಯಂಗ್ಯವಾಡಿದರು.

ಮಾಜಿ ಸಚಿವ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಮರಳು ಸಾಗಾಣಿಕೆ ಸ್ಥಗಿತಗೊಂಡ ಕಾರಣ ಈ ವೃತ್ತಿಯನ್ನು ನಂಬಿ ಜೀವನ ನಡೆಸುವವ ಸಾಮಾನ್ಯ ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು. ‘ಉಸುಕಿಗೆ ಸಂಬಂಧಿಸಿದ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು, ಮುಂದಿನ ಐದು ದಿನಗಳಲ್ಲಿ ಈ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟ ರೂಪಿಸಲಾ­ಗುವುದು’ ಎಂದು ಅವರು ಹೇಳಿದರು. ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಾಜಿ ಸದಸ್ಯ ನಿಂಗಪ್ಪ ಬಡಿಗೇರ, ಮುಖಂಡರಾದ ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಸಾವಕಾರ  ಮತ್ತಿತರರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.