ADVERTISEMENT

ಮಳೆಗಾಗಿ ಕೂಡಲಸಂಗಮಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 7:39 IST
Last Updated 7 ಜುಲೈ 2017, 7:39 IST
ಮಳೆಗಾಗಿ ಪ್ರಾರ್ಥಿಸಿ ಕುಂದಗೋಳದಿಂದ ಕೂಡಲ ಸಂಗಮದವರಿಗೆ ಪಾದಯಾತ್ರೆ ಮಾಡಿದ ಯಾತ್ರಿಕರನ್ನು ಕಲ್ಯಾಣಪೂರ ಬಸವಣ್ಣಜ್ಜ ಹಾಗೂ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಗುರುವಾರ ಗಾಳಿ ಮರೆಮ್ಮನದೇವಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು
ಮಳೆಗಾಗಿ ಪ್ರಾರ್ಥಿಸಿ ಕುಂದಗೋಳದಿಂದ ಕೂಡಲ ಸಂಗಮದವರಿಗೆ ಪಾದಯಾತ್ರೆ ಮಾಡಿದ ಯಾತ್ರಿಕರನ್ನು ಕಲ್ಯಾಣಪೂರ ಬಸವಣ್ಣಜ್ಜ ಹಾಗೂ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಗುರುವಾರ ಗಾಳಿ ಮರೆಮ್ಮನದೇವಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು   

ಕುಂದಗೋಳ: ಮಳೆಗಾಗಿ ಇಲ್ಲಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷ ತಮ್ಮ ಸಹಪಾಠಿಗಳೊಂದಿಗೆ ಕೂಡಲ ಸಂಗಮ ದೇವಸ್ಥಾನದವರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಗುರುವಾರ ಮುಂಜಾನೆ ಪಟ್ಟಣದ ತ್ರಿವಿಧ ದಾಸೋಹಿ ಬಸವಣ್ಣಜ್ಜ ಹಾಗೂ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ ಗಾಳಿಮರೆಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

‘ಈ ವರ್ಷದಲ್ಲಿಯೂ ಮುಂಗಾರು ಮಳೆ ಆಗಲಿಲ್ಲ. ಇದರಿಂದ ರೈತರು ಬಹಳ ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಬರಬಹುದು’ ಎಂದು ಇಲ್ಲಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ ಹಾಗೂ ಅವರ ಗೆಳೆಯರ ಬಳಗದವರು ಈ ಪಾದಯಾತ್ರ ಹಮ್ಮಿಕೊಂಡಿದ್ದಾರೆ.

ಸುಮಾರು 185 ಕಿ.ಮೀ ದೂರ ಇರುವ ಕೂಡಲ ಸಂಗಮದವರಿಗೆ ಪಾದಯಾತ್ರೆ ಮಾಡಿ ಕೂಡಲ ಸಂಗಮೇಶ್ವರನಿಗೆ ಉತ್ತಮ ಮಳೆ ಹಾಗೂ ಬೆಳೆಗಾಗಿ ಅಭಿಷೇಕ ಮಾಡಿಸಿಕೊಂಡು ಬರುವ ಸಂಕಲ್ಪ ಹೊಂದಿದ್ದಾರೆ.

ADVERTISEMENT

ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿ ‘ಇಲ್ಲಿ ಮಳೆ ಇಲ್ಲ ಕೆಲಸ ಇಲ್ಲ. ಖಾಲಿ ಇದ್ದು ಏನ್ ಮಾಡುವುದು ಅಂತಾ ಮಳೆಗಾಗಿ ಕೂಡಲ ಸಂಗಮದವರಿಗೆ ಪಾದಯಾತ್ರೆಯನ್ನು ಪಕ್ಷಾತೀತವಾಗಿ ಹಮ್ಮಿಕೊಂಡಿದ್ದೇವೆ. ದಾರಿಯಲ್ಲಿ ಬರುವ ನವಲಗುಂದ ಹಾಗೂ ನರಗುಂದ ಪಟ್ಟಣಗಳಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ವರ್ಷದಿಂದ ಧರಣಿ ಕುಳಿತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಗುತ್ತದೆ. ಅವರಿಗೆ ಯಶಸ್ಸು ಸಿಗಲಿ ಎಂದು ಸಂಗಮೇಶ್ವರನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತೆದೆ’ ಎಂದು ‘ಪ್ರಜಾವಾಣಿಗೆ ’ ತಿಳಿಸಿದರು.

ಪಾದಯಾತ್ರೆಯಲ್ಲಿ ಕಲ್ಯಾಣಪುರ ಬಸವಣ್ಣಜ್ಜ, ಸಂತೋಷ ಸಜ್ಜನ, ಶಿವಾನಂದ ಕಟಗಿ, ಯಲ್ಲಪ್ಪ ಗಾಡಿ, ಶಿವಪ್ಪ ಗದಗಿನ, ಸರವೇಶ ಪಲ್ಲೇದ, ನಿಂಗಪ್ಪ ಕರಿಗಾರ, ಪ್ರವೀಣ ಪರಣ್ಣವರ, ಬಸವರಾಜ ದುದ್ದಿ, ವಿಜಯ ಹಿಂಡಸಗೇರಿ, ವಿನೋದ ಸಂಶಿ, ಗೌಡಪ್ಪ ಅವಾರಿ,ಶಿವಲಿಂಗಯ್ಯ ಕಂಬಾಳಿಮಠ, ಕುಮಾರ ಕಿರೇಸೂರ, ಭಾಗವಹಿಸಿದ್ದಾರೆ.

ವರುಣನಿಗಾಗಿ ಕುಂಭ ಮೇಳ
ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಭಜನೆ ಸಪ್ತಾಹ ಹಾಗೂ ನೂರಾರು ಸುಮಂಗಲೆಯರು ಕುಂಭ ಮೇಳದೊಂದಿಗೆ ಗ್ರಾಮದೇವಿ ಮರೆಮ್ಮದೇವಿಯ ಪಲ್ಲಕ್ಕಿ ಮೆರವಣಿಗೆಯನ್ನು ಮಾಡಲಾಯಿತು.

ಪ್ರಸಕ್ತ ಸಾಲಿನ ಮುಂಗಾರು ಜುಲೈ ಆರಂಭಗೊಂಡರೂ ಮಳೆ ಆಗದೇ  ಇರುವುದರಿಂದ ಬಿತ್ತನೆ ಕಾರ್ಯ ಮಾಡಿಲ್ಲ. ಸತತ ಮೂರು ವರ್ಷಗಳಿಂದ ಸರಿಯಾದ ಮಳೆ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ.

ಆ ರೈತರ ಸಂಕಷ್ಟವನ್ನು ನಿವಾರಣೆ ಮಾಡಲಿ ಎಂಬ ಉದ್ದೇಶದಿಂದ ದಿನದ 24 ಗಂಟೆ ನಿರಂತರ ಭಜನೆ, ಅನ್ನಪ್ರಸಾದ ಹಾಗೂ ಕುಂಭ ಮೇಳ ಮೆರವಣಿಗೆಯೊಂದಿಗೆ ಬೆಣ್ಣಿಹಳ್ಳಕ್ಕೆ ಹೋಗಿ ಸಾಂಪ್ರದಾಯದ ಪೂಜೆಗಳನ್ನು ಮಾಡಿದ್ದೇವೆ ಎಂದು ಗ್ರಾಮದೇವಿ ಮರೆಮ್ಮ ದೇವಸ್ಥಾನದ ಸಮಿತಿ ಅಧ್ಯಕ್ಷ ರುದ್ರಪ್ಪ ಗಾಣಿಗೇರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮೃತ್ಯಂಜಯಸ್ವಾಮಿ ಹಿರೇಮಠ, ಭಕ್ತರಾದ ವೆಂಕಪ್ಪ ತಾಯಿತಂದೆ, ದೇವಪ್ಪ ತಳವಾರ, ಭರಮಪ್ಪ, ಹರೀಶ, ನೂರಾರು ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.