ADVERTISEMENT

ಮಳೆ: 3 ಸಾವಿರ ಕೋಳಿ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:46 IST
Last Updated 3 ಜೂನ್ 2018, 8:46 IST
ಧಾರವಾಡ ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿನ ತನ್ವೀರ್ ಹಾದಿಮನಿ ಅವರಿಗೆ ಸೇರಿದ ಕೋಳಿ ಫಾರ್ಮ್‌ ನೆಲಕಚ್ಚಿದೆ
ಧಾರವಾಡ ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿನ ತನ್ವೀರ್ ಹಾದಿಮನಿ ಅವರಿಗೆ ಸೇರಿದ ಕೋಳಿ ಫಾರ್ಮ್‌ ನೆಲಕಚ್ಚಿದೆ   

ಧಾರವಾಡ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರವಾಗಿ ಮಳೆಯಾಗಿದ್ದು, ಬಿರುಗಾಳಿಗೆ ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕೋಳಿ ಫಾರ್ಮ್‌ ನೆಲಕಚ್ಚಿದೆ. ಅವಳಿ ನಗರದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆಯಿತು

ಧಾರವಾಡದಲ್ಲಿ ಸಂಜೆ 7.30ರ ವೇಳೆಗೆ ಪ್ರಾರಂಭವಾದ ಮಳೆ 2 ಗಂಟೆ ಕಾಲ ಸುರಿಯಿತು. ಇದರಿಂದ ನಾಗರಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಜನ್ನತ್‌ ನಗರ, ಚನ್ನಬಸವೇಶ್ವರ ನಗರ, ಕಂಟಿಗಲ್ಲಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಹುಬ್ಬಳ್ಳಿಯಲ್ಲಿಯೂ 1 ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.

ಉಪ್ಪಿನ ಬೆಟಗೇರಿ ಹಾಗೂ ಕಲ್ಲೂರ ರಸ್ತೆ ಬದಿಯ 10ಕ್ಕೂ ಹೆಚ್ಚು ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ADVERTISEMENT

ಬಿರುಗಾಳಿಗೆ ಗ್ರಾಮದ ರೈತ ತನ್ವೀರ್ ಹಾದಿಮನಿ ಅವರಿಗೆ ಸೇರಿದ ಕೋಳಿ ಫಾರ್ಮ್ ಸಂಪೂರ್ಣವಾಗಿ ನೆಲಕಚ್ಚಿದ್ದು, ಮೂರು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಮೃತಪಟ್ಟಿವೆ. ₹6 ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕೋಳಿ ಫಾರ್ಮ್‌ ಕಲ್ಲೂರ ಗ್ರಾಮದ ವಿನಾಯಕ ಪಾಟೀಲ ಎಂಬುವರಿಗೆ ಬಾಡಿಗೆ ನೀಡಲಾಗಿತ್ತು. ಶಾಸಕ ಅಮೃತ ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾವೀರ ಅಷ್ಟಗಿ ಹಾಗೂ ತಹಶೀಲ್ದಾರ್ ಪ್ರಕಾಶ ಕುದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.