ADVERTISEMENT

ಮಹಾವೀರಗೆ ನಾಮಕರಣೋತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:40 IST
Last Updated 24 ಏಪ್ರಿಲ್ 2013, 6:40 IST

ಹುಬ್ಬಳ್ಳಿ: ಜೋ ಜೋ ಆದಿಬಾಲಕ
ಷಟ್ಖಂಡ ಭೂಮಿಗೆ ನೀನೇ ಮಾಲೀಕ ಜೋ ಜೋ
ಜೋ ಜೋ ಮಲಗು ಜಿನಭೂಪ
ಸಾಕೋ ನಿನ್ನ ಕೋಪ
ಜೋ ಜೋ ಎಂದು ತೂಗಿರಿ ದಿವ್ಯದ ಕುಲದೀಪ
ಮೊದಲು ಮಾಡಿದರು ಗರ್ಭಕಲ್ಯಾಣ
ಮನ ಮುಟ್ಟಿ ಪೂಜಿಸು ತ್ರಿಶಲ ಕಂದನ

ಹೀಗೆ ಚಾಮರ ಬೀಸುತ್ತ, ಮುತ್ತೈದೆಯರು ಹಾಡುವ ಮೂಲಕ ಮಹಾವೀರ ನಾಮಕರಣ ಕಾರ್ಯಕ್ರಮ ನಗರದ ಮಹಾವೀರ ಗಲ್ಲಿಯಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆಯಿತು. ಶಾಂತಿನಾಥ ಮಹಿಳಾ ಸಮಾಜದ ವತಿಯಿಂದ ನಡೆದ  ನಾಮಕರಣೋತ್ಸವ ಕಾರ್ಯಕ್ರಮದಲ್ಲಿ ವರ್ಧಮಾನ, ಸನ್ಮತಿ, ವೀರ, ಅತಿ ವೀರ ಹಾಗೂ ಮಹಾವೀರ ಎಂದು 5 ನಾಮಕರಣ ಮಾಡುವ ಮೂಲಕ ಮಹಾವೀರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಯಿತು. ಮಹಾವೀರ ಮೂರ್ತಿಗೆ ಆಭರಣ ಶೃಂಗಾರವಾದ ಮೇಲೆ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಶಾಂತಿನಾಥ ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಜವಳಿ ಹಾಗೂ ಕಾರ್ಯದರ್ಶಿ ಸರೋಜಾ ಗುಗ್ರಿ ಮೊದಲಾದವರು ನೇತೃತ್ವ ವಹಿಸಿದ್ದರು.

ಇದಕ್ಕೂ ಮೊದಲು ದಿಗಂಬರ ಜೈನ ಸಮಾಜದ ವತಿಯಿಂದ ಹಳೇಹುಬ್ಬಳ್ಳಿಯ ಅನಂತನಾಥ ಬಸದಿಯಿಂದ ಬೆಳಿಗ್ಗೆ ದಿಗಂಬರ ಜೈನ ಸಮಾಜದ ಅಧ್ಯಕ್ಷ ಮಹಾವೀರ ಸೂಜಿ ಧರ್ಮದ ಧ್ವಜಾರೋಹಣ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಪದ್ಮಾವತಿ ಮಹಿಳಾ ಮಂಡಳದ ಪದಾಧಿಕಾರಿಗಳು ಅಲಂಕಾರಗೊಳಿಸಿದ ಮಹಾವೀರ ಮೂರ್ತಿ, ಸನ್ಮತಿ ಮಹಿಳಾ ಮಂಡಳದ ಮಹಾವೀರ ಮೂರ್ತಿ ಹಾಗೂ ಮಹಾವೀರಗಲ್ಲಿಯ ಮಹಾವೀರ ತೀರ್ಥಂಕರ ಮೂರ್ತಿ ಮೆರವಣಿಗೆಯಲ್ಲಿದ್ದವು.

ಮಹಾವೀರ ತೀರ್ಥಂಕರ ತಾಯಿ ತ್ರಿಶಲಾದೇವಿಯ ರೂಪದಲ್ಲಿ ಜ್ಯೋತಿ ರೋಖಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದನ್ನು ಬ್ರಾಹ್ಮಿಳಾ ಜೈನ ಮಹಿಳಾ ಪರಿಷತ್ ಸಂಘಟಿಸಿತ್ತು. ಮಹಾವೀರಗಲ್ಲಿಯ ಬಳಿ ಮೆರವಣಿಗೆ ಬಂದಾಗ ಪ್ರತಿ ಮನೆಯಿಂದ ಮಹಾವೀರ ಮೂರ್ತಿಗಳಿಗೆ ಆರತಿ ಸಮರ್ಪಿಸಿ, ತೆಂಗಿನಕಾಯಿ ಒಡೆಯಲಾಯಿತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮೆರವಣಿಗೆಯು ಶಾಂತಿನಾಥ ಭವನ, ಮೂರುಸಾವಿರಮಠ, ಪದ್ಮಾ ಟಾಕೀಸ್, ಜೈನ ಬೋರ್ಡಿಂಗ್, ದುರ್ಗದಬೈಲ್ ಮೂಲಕ ಶಾಂತಿನಾಥ ಭವನ ತಲುಪಿತು. ಕರ್ನಾಟಕ ಜೈನ ಸ್ವಯಂ ಸೇವಕ ಸಂಘದಿಂದ ಮೂರುಸಾವಿರಮಠದ ಬಳಿ ತಂಪು ಪಾನೀಯ ಹಾಗೂ ಪ್ರಸಾದ ವಿತರಣೆ ನಡೆಯಿತು. ದಿಗಂಬರ ಜೈನ ಸಮಾಜದ ಪದಾಧಿಕಾರಿಗಳಾದ ಮಹಾವೀರ ಸೂಜಿ, ಬ್ರಹ್ಮಕುಮಾರ ಬೀಳಗಿ, ಆರ್.ಟಿ. ತವನಪ್ಪನವರ, ರಾಜೇಂದ್ರ ಬೀಳಗಿ, ವಿಮಲ್ ತಾಳಿಕೋಟಿ, ನಳಿನಿ ಜವಳಿ, ಆಶಾ ಬಾಗಿ, ಪದ್ಮಾವತಿ ಸೂಜಿ, ಪದ್ಮಾವತಿ ಉಮಚಗಿ, ಸುಭದ್ರಾ ಮುತ್ತಿನ ಹಾಗೂ ತ್ರಿಶಲಾ ಮಾಲಗತ್ತಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.