ADVERTISEMENT

ಮಹಿಳಾ ಸಾಕ್ಷರತೆ ಕೊರತೆ ಅಭಿವೃದ್ಧಿಗೆ ಮಾರಕ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 13:05 IST
Last Updated 10 ಮಾರ್ಚ್ 2011, 13:05 IST

ಧಾರವಾಡ: “ಹೆಣ್ಣು ಮಕ್ಕಳು ಬುದ್ಧಿಮತ್ತೆಯಲ್ಲಿ ಪುರುಷ ವರ್ಗಕ್ಕೆ ಸರಿಸಮಾನವಾಗಿದ್ದರೂ ಸಾಕ್ಷರತೆಯಲ್ಲಿ ಇನ್ನೂ ಹಿಂದುಳಿದಿರುವುದರಿಂದ ರಾಷ್ಟ್ರದ ಅಭಿವೃದ್ಧಿಗೆ ತೊಡಕಾಗಿದೆ” ಎಂದು ಡಾ. ಯಶೋಧಾ ಭಟ್ ಹೇಳಿದರು.

ಇಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ತನ್ನ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಬಾಲ್ಯದಿಂದ ವಯಸ್ಕರಾಗುವವರೆಗೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವರಿಗೆ ಸರಿಯಾದ ಜ್ಞಾನ ಹಾಗೂ ಸಾಮಾಜಿಕ ಬೆಂಬಲ ನೀಡುವುದು ಅಗತ್ಯವಿದೆ ಎಂದರು.

ಮಹಿಳಾ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ವಿಷಾದಿಸಿದ ಅವರು, ಸ್ತ್ರೀ ಪುರುಷ ಅನುಪಾತ ಸರಿಯಾಗಿರದಿದ್ದಲ್ಲಿ ಸಾಮಾಜಿಕ ವ್ಯವಸ್ಥೆ ಕುಸಿದು ಕ್ಷೋಭೆಗೆ ಕಾರಣವಾಗಬಹುದು.ಇಂದಿನ ಸಮಾಜದಲ್ಲಿ ಒದಗಿಬರುತ್ತಿರುವ ಉದ್ಯೋಗದ ಅವಕಾಶಗಳನ್ನು ಬಳಸಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು.

ಕೆವಿಜಿ ಬ್ಯಾಂಕಿನ ಅಧ್ಯಕ್ಷ ಕೆ.ಪಿ.ಮುರಳೀಧರನ್ ಅಧ್ಯಕ್ಷತೆ ವಹಿಸಿ, ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಮಹಿಳೆಯರು ಅನೇಕ ಕಾರಣಗಳಿಂದ ಸಮಾನ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವಿಶ್ವದ ಹಲವೆಡೆ ಮಹಿಳೆಯರ ಸ್ಥಿತಿಗತಿ ಶೋಚನೀಯವಾಗಿದೆ. ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ಉತ್ತಮಗೊಳ್ಳುತ್ತಲಿದ್ದು, ಅವರ ಸಾಕ್ಷರತೆ ಹಾಗೂ ಆರ್ಥಿಕ ಪ್ರಗತಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯಕವಾಗಿದೆ ಎಂದರು.

ಪಾಲಿಕೆ ಸದಸ್ಯೆ ವಿಜಯಲಕ್ಷ್ಮೀ ಲೂತಿಮಠ ಮಾತನಾಡಿದರು. ಮಾಲಾ ಅಗ್ನಿಹೋತ್ರಿ ಮಹಿಳಾ ದಿನಾಚರಣೆ ಬಗ್ಗೆ ವಿವರಿಸಿದರು. ಪ್ರಮೋದಾ ಧಾರವಾರಕರ್ ಸ್ವಾಗತಿಸಿದರು. ಮೇಘಾ ದೇಶಪಾಂಡೆ ನಿರೂಪಿಸಿದರು. ಶೀಲಾ ನಡುವಿನಮನಿ ವಂದಿಸಿದರು.

ಆರೋಗ್ಯ ಸಹಾಯಕ ಕೇಂದ್ರ ಸಂಘದ ಸಭೆ
ಧಾರವಾಡ: ಅಖಿಲ ಕರ್ನಾಟಕ ರಾಜ್ಯ ಕಿರಿಯ ಪುರುಷ ಆರೋಗ್ಯ ಸಹಾಯಕ ಕೇಂದ್ರ ಸಂಘದ ಜಿಲ್ಲಾ ಶಾಖೆಯ ಸಭೆ ಮಾ. 12ರಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆಯಲಿದೆ. ವೇತನ ತಾರತಮ್ಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಎ.ಎ.ಅಳವಂಡಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.