ADVERTISEMENT

ಮಿಯಾವಕಿ ವಿಧಾನದಲ್ಲಿ ಸಸಿ ನೆಟ್ಟರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 7:30 IST
Last Updated 6 ಜೂನ್ 2011, 7:30 IST

ಹುಬ್ಬಳ್ಳಿ: ಜಪಾನ್‌ನ ಪರಿಸರವಾದಿ, ವೃಕ್ಷ ಪ್ರಿಯ ಡಾ. ಮಿಯಾವಕಿ ಅವರ ನೂತನ ಅರಣ್ಯೀಕರಣ ವಿಧಾನದಡಿ ನಗರದಲ್ಲಿ ಭಾನುವಾರ ನೂರರಷ್ಟು ಸಸಿಗಳನ್ನು ನೆಡಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರೀನ್ ಇಂಡಿಯಾ ಕ್ಲಬ್‌ನ ಹುಬ್ಬಳ್ಳಿ ಶಾಖೆ, ದೇಶಪಾಂಡೆ ಫೌಂಡೇಷನ್ ಹಾಗೂ ಬೆಂಗಳೂರಿನ ಅಫೋರೆಸ್ಟ್ ಸಂಘಟನೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಪರಿಸರ ಪ್ರಿಯರು ಸಸಿಗಳನ್ನು ನೆಟ್ಟು ನೀರುಣಿಸಿ ಅವುಗಳ ಸಂರಕ್ಷಣೆಯ ಕಾಳಜಿಯೊಂದಿಗೆ ಮರಳಿದರು.

ಮಿಯಾವಕಿ ವಿಧಾನವು ಸಸಿಗಳ ಶೀಘ್ರ ಬೆಳವಣಿಗೆ, ದಟ್ಟ ಕಾಡಾಗಿ ಪರಿವರ್ತನೆ ಮತ್ತಿತರ ಅಂಶಗಳನ್ನು ಒಳಗೊಂಡಿದೆ. ಬೆಂಗಳೂರು ಮೂಲದ ಅಫೋರೆಸ್ಟ್ ಸಂಸ್ಥೆಯು ಬೆಂಗಳೂರು, ಪುಣೆ ಹಾಗೂ ಹುಬ್ಬಳ್ಳಿಯಲ್ಲಿ ಈ ವಿಧಾನದಡಿ ಸಸಿಗಳನ್ನು ನೆಡುತ್ತಿದ್ದು ಹುಬ್ಬಳ್ಳಿಯಲ್ಲಿ ಒಟ್ಟು ಮೂರು ಯೋಜನೆಗಳನ್ನು ಹಮ್ಮಿಕೊಂಡಿದೆ.

ಭಾನುವಾರ ಎರಡನೇ ಯೋಜನೆ ಪೂರ್ಣಗೊಂಡಿದ್ದು ಮೂರನೇ ಯೋಜನೆ ನವನಗರದ ಸಂಕಲ್ಪ ಸಂಸ್ಥೆಯಲ್ಲಿ ಅನುಷ್ಠಾನಗೊಳ್ಳಲಿದೆ.

ಸಸಿ ನೆಡುವ ಕಾರ್ಯದಲ್ಲಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ ಶೆಟ್ಟರ, ಸಂಕಲ್ಪ ಸೆಮಿ ಕಂಡಕ್ಟರ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ ಪವಾರ, ಗ್ರೀನ್ ಇಂಡಿಯಾ ಕ್ಲಬ್‌ನ ಹುಬ್ಬಳ್ಳಿ ಶಾಖೆಯ ಡಾ. ಎಂ.ಸಿ. ತಪಶೆಟ್ಟಿ, ಅಫೋರೆಸ್ಟ್‌ನ ಮನೋಜ ಭಾರದ್ವಾಜ್, ದೇಶಪಾಂಡೆ ಫೌಂಡೇಷನ್‌ನ ನವೀನ ಝಾ, ಬಿವಿಬಿ ಎಂಜನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಎ.ಎಂ. ಕುರುಗೋಡಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.