ADVERTISEMENT

ಮುನಿದ ಮಳೆರಾಯ: ಬಾಡಿದ ಬೆಳೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 9:00 IST
Last Updated 24 ಆಗಸ್ಟ್ 2011, 9:00 IST
ಮುನಿದ ಮಳೆರಾಯ: ಬಾಡಿದ ಬೆಳೆ
ಮುನಿದ ಮಳೆರಾಯ: ಬಾಡಿದ ಬೆಳೆ   

ಹುಬ್ಬಳ್ಳಿ: ಆಗೊಮ್ಮೆ-ಈಗೊಮ್ಮೆ  ಮೋಡ ಕಟ್ಟಿ ಆಸೆಯ ಮಿಂಚು ಹರಿಸಿದರೂ ದೊಡ್ಡ ಹನಿಯಾಗಲು ಒಲ್ಲದೆ, ಅಂಗಳಕ್ಕೆ ನೀರು ಸಿಂಪಡಿಸಿದಂತೆ ಬಂದು ಹೋಗುವ ಮಳೆ... ನೀರು ಕಾಣದೆ ಬಿಸಿಲ ಝಳಕ್ಕೆ ಕಾದು ಬೂದಿಯಾದಂತೆ ಕಾಣುವ ಕಪ್ಪು ನೆಲ... ಬಿತ್ತನೆಯಾದ ನೆಲದಲ್ಲಿ ಹಸಿರು ಮೂಡದೆ ತಲೆ ಮೇಲೆ ಕೈ ಹೊತ್ತು ಕುಳಿತ ರೈತ.. ಇದು ಮುಂಗಾರು ಕೈ ಕೊಟ್ಟ ಪರಿಣಾಮ ಬರದ ಛಾಯೆ ಆವರಿಸಿರುವ ಧಾರವಾಡ ಜಿಲ್ಲೆಯ ಕೆಲ ಭಾಗದ ಚಿತ್ರಣ..

ಜೂನ್ ತಿಂಗಳ ಆರಂಭದಲ್ಲಿ ಸುರಿದ ಮಳೆ ನೆಚ್ಚಿಕೊಂಡು ಬಿತ್ತನೆ ಮಾಡಿದ್ದ ಉದ್ದು, ಹೆಸರು, ಕಡಲೆ, ಈರುಳ್ಳಿ, ಹತ್ತಿ, ಅಲಸಂದೆ, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ, ಮಳೆ ಇಲ್ಲದೆ ಒಣಗಿದ್ದು, ರೈತಾಪಿ ವರ್ಗ ಕಂಗಾಲಾಗಿದೆ.  

ನವಲಗುಂದ ತಾಲ್ಲೂಕಿನಲ್ಲಿ ಬರದ ಛಾಯೆ ತೀವ್ರವಾಗಿದ್ದು, ಕೃಷಿ ಇಲಾಖೆ ಅಂಕಿ-ಅಂಶದ ಪ್ರಕಾರ ತಾಲ್ಲೂಕಿನಲ್ಲಿ ಶೇ 80ರಷ್ಟು ಬಿತ್ತನೆ ಕಾರ್ಯವೇ ನಡೆದಿಲ್ಲ. ಧಾರವಾಡ ತಾಲ್ಲೂಕಿನ ಗರಗ ಹೋಬಳಿ ಹೊರತುಪಡಿಸಿದರೆ ಅಮ್ಮಿನಭಾವಿ ಭಾಗದಲ್ಲಿ ಪೈರು ಒಣಗಿ ನಿಂತಿದೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬರದ ಛಾಯೆ ದಟ್ಟವಾಗಿದ್ದು, ಬ್ಯಾಹಟ್ಟಿ ಹೋಬಳಿಯಲ್ಲಿ ಬಿತ್ತನೆಯಾಗಿದ್ದ ಬೀಜ ಮೊಳಕೆಯಲ್ಲಿಯೇ ಒಣಗುತ್ತಿದೆ. ಒಂದೂವರೆ ತಿಂಗಳಿನಿಂದ ಇಲ್ಲಿ ಮಳೆಯೇ ಆಗಿಲ್ಲ. ಬೆಳೆ ಒಣಗಿರುವುದನ್ನು ನೋಡಲಾರದೆ ರೈತರು ತಾವೇ ಮುಂದಾಗಿ ಹೊಲ ಹರಗಿದ್ದಾರೆ. ಮಲೆನಾಡ ಸೆರಗಿನ ಕಲಘಟಗಿ ತಾಲ್ಲೂಕಿನಲ್ಲಿ ಒಂದಿಷ್ಟು ಉತ್ತಮ ಮಳೆಯಾಗಿದ್ದು, ಕುಂದಗೋಳ ತಾಲ್ಲೂಕಿನಲ್ಲೂ ಮಳೆಯ ಕೊರತೆಯಾಗಿದೆ.

`ಹೆಸರಿನ ಹೊಲ್ದಾಗೆ ನಾವು ಕುಂತರೆ ಕಾಣಬಾರದ್ರಿ.. ಇಷ್ಟೊತ್ತಿಗೆ ಬಳ್ಳಿ ಮೊಳಕಾಲ ತಂಕಾ ಹಬ್ಬಿ ಕುಂತಿರ‌್ತಿದ್ವು.. ಈಗ ನೋಡ್ರಿ ಪೈರೆ ಕಾಣವಲ್ದು~ ಎಂದು ಬೇಸರದಿಂದ ನುಡಿದರು ಹುಬ್ಬಳ್ಳಿ ತಾಲ್ಲೂಕು ಕುಸಗಲ್‌ನ ಸೈದುಸಾಬ್. ಅರ್ಧ ಎಕರೆಯಲ್ಲಿ ಬೆಳೆದಿರುವ ಹೆಸರುಬಳ್ಳಿಗೆ ಮಗಳು ಫಾತಿಮಾಳೊಂದಿಗೆ ಸೈದುಸಾಬ್ ಮನೆಯಿಂದ ಬಿಂದಿಗೆಯಲ್ಲಿ ನೀರು ತಂದು ಹಾಕುತ್ತಿದ್ದ ದೃಶ್ಯ ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂತು.

`ರೋಹಿಣಿ ಮಳೆ ಬಂದರೆ ಓಣಿ ತುಂಬಾ ಜ್ವಾಳ~ ಎನ್ನುತ್ತಿದ್ದೆವು. ಈ ಬಾರಿ ರೋಹಿಣಿ, ಆಶ್ಲೇಷ ಎರಡೂ ಕೈ ಕೊಟ್ಟಿವೆ. ಏಳು ಎಕ್ರ್ಯಾಗೆ ಬಿ.ಟಿ.ಹತ್ತಿ, ಹೆಸರು, ಉದ್ದು ಬಿತ್ತೀನಿ. 40 ಸಾವಿರ ಖರ್ಚಾಗೇತಿ. ಈಗ ಬೆಳೆ ಒಣಗೈತಿ~ ಎಂದು ಬ್ಯಾಹಟ್ಟಿಯ ರೈತ ಸುರೇಶ ಹಿತ್ತಲಮನಿ ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷ ಜಿಲ್ಲೆಯಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆದಿದ್ದ ಬ್ಯಾಹಟ್ಟಿ ಹೋಬಳಿಯಲ್ಲಿ ಈ ಬಾರಿ ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. `ಏಳು ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡೀನಿ. ಎರಡು ಎಕರೆಯಲ್ಲಿ ಮಾತ್ರ ಬೆಳೆ ಹುಟ್ಟಿದ್ದು, ಅದೂ ಒಣಗುತ್ತಿದೆ. ಹೊಲಕ್ಕೆ ಹೋಗೋದನ್ನೇ ಬಿಟ್ಟೀನಿ~ ಎಂದು ಅದೇ ಊರಿನ ರೈತ ಚಂದುನವರ ಹೇಳುತ್ತಾರೆ.

ಸಂದಿಗ್ಧದಲ್ಲಿ ರೈತ: ಪಕ್ಕದ ನವಲಗುಂದ ತಾಲ್ಲೂಕಿನಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಮುಂಗಾರು ಮುನಿಸಿಕೊಂಡಿದ್ದು, ಮೇ ಕೊನೆಯಲ್ಲಿ ಹತ್ತಿ, ಹೆಸರು, ಹುರುಳಿ ಬಿತ್ತನೆ ನಡೆಸಿ ಆಗಸ್ಟ್ ವೇಳೆಗೆ ಬೆಳೆ ಪಡೆಯಬೇಕಿದ್ದ ರೈತರು ಮಳೆ ಇಲ್ಲದೆ ಬಿತ್ತನೆಗೆ ಮುಂದಾಗಿಲ್ಲ. ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಯಮನೂರು, ಅರೇಕುರಹಟ್ಟಿ, ಕಿರೇಸೂರ, ನವಲಗುಂದ ಪಟ್ಟಣದ ಸುತ್ತಮುತ್ತ ಮಳೆಯಾಗಿದ್ದರೂ, ನೆಲ ಹಸನಾಗದೆ ರೈತರು ಬಿತ್ತನೆಗೆ ಹಿಂಜರಿಯುತ್ತಿದ್ದಾರೆ.

`ಆಗಸ್ಟ್ ತಿಂಗಳಿನಿಂದ ಎರಡನೇ ಪೀಕಿಗೆ ಬಿತ್ತನೆ ಮಾಡಬೇಕಿತ್ರಿ. ಆಗಿರೋ ಮಳೆ ಬಿತ್ತನೆಗೆ ಸಾಲವಲ್ದೂ, ಬಿಸಲು ಜಾಸ್ತಿ ಆಗೈತಿ, ಮಳಿ ನಂಬಿ ಬಿತ್ತನೆ ಮಾಡಿದ್ರೆ ಬೀಜ, ಗೊಬ್ರುದು ಖರ್ಚು ವಾಪಸ್ ಬರೋ ನಂಬಿಕಿ ಇಲ್ರಿ~ ಎಂದು ಸೋಮವಾರ ಕಿರೇಸೂರಕ್ಕೆ ಭೇಟಿ ನೀಡಿದ ಪ್ರಜಾವಾಣಿಯೊಂದಿಗೆ ರೈತ ಗುರುಶಾಂತಯ್ಯ ಅಳಲು ತೋಡಿಕೊಂಡರು. `ಒಂದೂವರೆ ತಿಂಗಳ ಹಿಂದೆ ಈರುಳ್ಳಿ ಬಿತ್ತನೆ ಮಾಡೇವಿ ಇನ್ನೂ ಸಸಿ ಮಾರಿ ತೋರ‌್ಸಿಲ್ಲ~ ಎಂದು ಯಮನೂರಿನ ರೈತ ನಾಗಪ್ಪ ಹಳ್ಯಾಳ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.