ADVERTISEMENT

ಮುಸ್ಲಿಂ ಏಕೀಕರಣ ಸಮಿತಿಯಿಂದ ಪ್ರತಿಭಟನೆ

ಬಾಬರಿ ಮಸೀದಿ ಧ್ವಂಸ: ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:10 IST
Last Updated 7 ಡಿಸೆಂಬರ್ 2013, 8:10 IST

ಹುಬ್ಬಳ್ಳಿ: ನ್ಯಾಯಮೂರ್ತಿ ಲಿಬ್ಹರಾನ್ ಆಯೋಗದ ವರದಿ ಆಧಾರದ ಮೇಲೆ ಬಾಬರಿ ಮಸೀದಿ ಧ್ವಂಸಗೊಳಿಸಿದವರನ್ನು ಶಿಕ್ಷಿಸುವಂತೆ ಒತ್ತಾಯಿಸಿ ಶುಕ್ರವಾರ ಕರಾಳ ದಿನ ಆಚರಿಸಿದ ಮುಸ್ಲಿಮರು ಕರ್ನಾಟಕ ಮುಸ್ಲಿಂ ಏಕೀಕರಣ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಮೌನಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ಮುಸ್ಲಿಂ ಏಕೀಕರಣ ಸಮಿತಿ ಅಧ್ಯಕ್ಷ ದಾದಾಪೀರ ಎಂ.ಕೊಪ್ಪಳ ನೇತೃತ್ವದಲ್ಲಿ ಹಳೇಹುಬ್ಬಳ್ಳಿ ಸದರ ಸೋಫಾದಿಂದ ಪ್ರತಿಭಟನೆ ಆರಂಭಿಸಿದ ಮುಸ್ಲಿಮರು, ಕಪ್ಪು ಪಟ್ಟಿ ಧರಿಸಿಕೊಂಡು ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ಬಂದರು.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿ 21 ವರ್ಷಗಳಾಗಿದ್ದು, ಇಲ್ಲಿಯವರೆಗೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ.

ಬಾಬರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣದಲ್ಲಿ ಲಿಬ್ಹರಾನ್ ಆಯೋಗ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಉಮಾಭಾರತಿ ಸೇರಿದಂತೆ 68 ಮಂದಿಯನ್ನು ಪ್ರಮುಖ ಆರೋಪಿಗಳು ಎಂದು ಗುರ್ತಿಸಿದೆ. ಮಸೀದಿ ಧ್ವಂಸ ಪ್ರಕರಣದಿಂದಾಗಿ ದೇಶದ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಧಕ್ಕೆಯಾ­ಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಕೇಂದ್ರ ಸರ್ಕಾರ ಕೂಡಲೇ ಮುಂದಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಿ. ಧ್ವಂಸಗೊಂಡ ಸ್ಥಳದಲ್ಲಿಯೇ ಮಸೀದಿಯನ್ನು ಪುನರ್ ನಿರ್ಮಿಸಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ, ಪ್ರಧಾನಿ ಹಾಗೂ ಕೇಂದ್ರಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಮುಸ್ಲಿಂ ಏಕೀಕರಣ ಸಮಿತಿಯ ಪದಾಧಿಕಾರಿಗಳಾದ ಸಲಾವುದ್ದೀನ್ ಮುಲ್ಲಾ, ಮುಜಾಹಿದ್ ಜನಾಬ, ಜಲಾಜಸಾಬ ವಿಜಾಪುರಿ, ನಿಜಾಮುದ್ದೀನ್ ಬೇಪಾರಿ, ನರಸಪ್ಪ ಚಲವಾದಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.