ADVERTISEMENT

ಯುವಕರಿಗೆ ಹಿರಿಯರ ಮಾರ್ಗದರ್ಶನ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 5:15 IST
Last Updated 3 ಅಕ್ಟೋಬರ್ 2011, 5:15 IST

ಧಾರವಾಡ:ಹಿರಿಯರು ಸತ್ಸಂಗದ ಮೂಲಕ ಪಡೆದಂಥ ಮೌಲ್ಯಾಧಾರಿತ ಜೀವನದ ಅನುಭವಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಟ್ಟು ಉತ್ತಮ ಮಾರ್ಗದಲ್ಲಿ ನಡೆಯುವಂತೆ ನೆರವಾಗಬೇಕು” ಎಂದು ಜಿಲ್ಲಾ ನ್ಯಾಯಾಧೀಶ ಕೆ.ನಟರಾಜನ್ ಹೇಳಿದರು.

ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ  ಕ್ಷೇಮಾಭಿವೃದ್ಧಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ನಾಗರಿಕರ ಹಕ್ಕುಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು ಕುರಿತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಸತ್ಸಂಗದ ಮೂಲಕ ಯುವಕರು ಒಳ್ಳೆಯ ಸಂಘಗಳನ್ನು ಕಟ್ಟಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕು.

ಹಿರಿಯ ನಾಗರಿಕರಿಗೆ ಇರುವ ಕಾನೂನು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು, ಹಿರಿಯ ನಾಗರಿಕರಿಗೆ ಜಾಮೀನು ತಕ್ಷಣ ನೀಡಲು, ಜಿವನಾಂಶಕ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಅವಕಾಶವಿದೆ. ಬ್ಯಾಂಕು ಗಳಲ್ಲಿ ಸಹ ಠೇವಣಿ ಮೇಲೆ ಹೆಚ್ಚಿನ  ಬಡ್ಡಿದರ, ಬಸ್ ಹಾಗೂ ರೈಲ್ವೆಗಳಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶವಿದೆ ಎಂದರು.

ಜಿಲ್ಲಾಧಿಕಾರಿ ದರ್ಪಣ ಜೈನ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಳ್ಳೆಯ ಸಂಸ್ಕಾರಗಳು ಬೆಳೆಯಲು ಸತ್ಸಂಗ ಬೇಕು. ಇದರಿಂದ ಜೀವನದಲ್ಲಿ ತೃಪ್ತಿಯಿಂದ ಇರಲು ಸಾಧ್ಯ. ಬೇರೆ ದೇಶಕ್ಕಿಂತ ನಮ್ಮಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಿಗೆ ಕಾಣುತ್ತೇವೆ. ಇದಕ್ಕೆ ಕಾರಣ ನಮ್ಮಲ್ಲಿರುವ ಆರೋಗ್ಯ ಮೂಲಭೂತ ಸೌಕರ್ಯಗಳು ಎಂದು ಹೇಳಿದರು.

ಸಮಾಜದ ಪ್ರತಿಯೊಂದು ಅಂಗ ದಲ್ಲಿ ಸುಧಾರಣೆ ಆಗಬೇಕೆಂಬ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ವಾರ್ಡ್ ಹಾಗೂ ಮೂರು ತಾಲ್ಲೂಕುಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಮಾಶಾಸನ ಸೌಲಭ್ಯ ನೀಡಲು ಕ್ರಮ ಕೈಕೊಳ್ಳಲಾಗುತ್ತಿದೆ. ಜಿಲ್ಲೆಯ ಹಿರಿಯ ನಾಗರಿಕರ ಟ್ರಸ್ಟ್‌ಗೆ ಹುಡಾ ಮೂಲಕ ನಿವೇಶನ ಒದಗಿಸುವ ಭರವಸೆ ನೀಡಿದರು.

ಎಸ್.ಎಸ್.ಶಿವಳ್ಳಿ, ಮುತ್ತಣ್ಣ ಸಿ.ಎ. ಉಪನ್ಯಾಸ ನೀಡಿದರು. ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಭೂಪಳಾಪುರ, ಡಾ. ಮಹಾದೇವ ವಲಾಂಡಿಕರ್ ಮಾತ ನಾಡಿದರು.

ಎಂ.ಮುರುಘೇಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಸಿ.ರಾಜಶೇಖರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸರೋಜಿನಿ ಕಡೇಮನಿ, ಪ್ರೊಬೇಶನರಿ ಐಎಎಸ್ ಅಧಿಕಾರಿ ಮಂಜುಶ್ರೀ ವೇದಿಕೆಯಲ್ಲಿದ್ದರು.

ಶತಾ ಯುಷಿಗಳಾದ ದೇವರಹುಬ್ಬಳ್ಳಿಯ ಗಂಗವ್ವ ಹಿರೇಮಠ, ಮನಗುಂಡಿಯ ಗಂಗಮ್ಮ ಮಠದಾರ, ಕ್ಯಾರಕೊಪ್ಪದ ಗಂಗವ್ವ ಪೂಜಾರ, ಮಾಳಮಡ್ಡಿಯ ಜಾನಕಿಬಾಯಿ ಮಣ್ಣೂರ ಹಾಗೂ ಗುರುಪುತ್ರಪ್ಪ ದೊಡ್ಡವಾಡ ಅವರನ್ನು ಸನ್ಮಾನಿಸಲಾಯಿತು. ಎಂ.ವಿ. ಅಪ್ಪಿನ ಭಾವಿ ಸ್ವಾಗತಿಸಿದರು. ಜಿ.ಎಂ. ಅಡಗಿಮಠ ವಂದಿಸಿದರು.

ಡಾ. ಕಂಬಾರರೊಂದಿಗೆ ಇಂದು ಸಂವಾದ
ಹುಬ್ಬಳ್ಳಿ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರೊಂದಿಗೆ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ (ಅ.3) ಬೆಳಿಗ್ಗೆ 8 ಗಂಟೆಗೆ ಪತ್ರಕರ್ತರು ಸಂವಾದ ನಡೆಸಲಿದ್ದಾರೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಇದೇ ಸಂದರ್ಭದಲ್ಲಿ ಕಂಬಾರ ಅವರನ್ನು ಸನ್ಮಾನಿಸ ಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.