ADVERTISEMENT

‘ಯೋಧರಿಗೆ ಸಿಗುವ ಗೌರವ ಪೊಲೀಸರಿಗೂ ಸಿಗಲಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:25 IST
Last Updated 22 ಅಕ್ಟೋಬರ್ 2017, 5:25 IST

ಧಾರವಾಡ: ‘ದೇಶದ ಗಡಿ ರಕ್ಷಣೆ ಮಾಡುವ ಯೋಧರಿಗೆ ಸಿಗುವಂಥ ಎಲ್ಲ ಗೌರವಗಳೂ ದೇಶದ ಆಂತರಿಕ ಭದ್ರತೆಯಲ್ಲಿ ನಿರತ ಪೊಲೀಸರಿಗೂ ಸಿಗಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ದೇಶ ಕಾಯುವ ಸೈನಿಕರಂತೆ ಪೊಲೀಸರು ಸಹ ದೇಶಕ್ಕಾಗಿ ಸಾಕಷ್ಟು ತ್ಯಾಗ ಬಲಿದಾನ ಮಾಡಿದ್ದಾರೆ. ಆದರೆ, ಇಂದು ಹುತಾತ್ಮ ಯೋಧರಿಗೆ ಸಿಗುವಂಥ ಗೌರವ ಹುತಾತ್ಮ ಪೊಲೀಸರಿಗೆ ಸಿಗುತ್ತಿಲ್ಲ. ದೇಶಕ್ಕಾಗಿ ಯೋಧರಂತೆಯೇ ಹೋರಾಡಿ ಪ್ರಾಣ ಕಳೆದುಕೊಳ್ಳುವ ಪೊಲೀಸರ ಕುಟುಂಬಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ’ ಎಂದರು.

‘ದೇಶದ ಆಂತರಿಕ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯ ಹಾಗೂ ದೇಶದ ಪ್ರಗತಿಯಲ್ಲಿ ಪೊಲೀಸರ ಪಾಲು ಸಾಕಷ್ಟಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರೂ ಪೊಲೀಸರನ್ನು ಗೌರವ ಭಾವನೆಯಿಂದ ಕಾಣಬೇಕು. ದಿನದ 24 ಗಂಟೆ ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಪೊಲೀಸರ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಮಾತನಾಡಿ, ‘ದೇಶದಲ್ಲಿ ಪೊಲೀಸ್‌ ವ್ಯವಸ್ಥೆ ಇಲ್ಲದಿದ್ದರೆ ಅರಾಜಕತೆಗೆ ದಾರಿ ಮಾಡಿಕೊಡುತ್ತಿತ್ತು. ಜನರ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯದಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ, ದೌರ್ಜನ್ಯ, ಅನ್ಯಾಯಗಳು ಕಡಿಮೆಯಾಗಿವೆ.

ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು ಉತ್ತಮವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಇನ್ನಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಹಾಗಾದರೆ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯವಾಗುತ್ತದೆ. ಆ ಮೂಲಕ ಸಮಾಜಕ್ಕೆ ಕಾನೂನಿನ ಶಕ್ತಿಯ ಅರಿವು ಮೂಡಿಸಲು ಸಾಧ್ಯ ಎಂದರು. 

‘ಪೊಲೀಸರಿಗೆ ಸಮರ್ಪಣಾ ಮನೋಭಾವ ಅಗತ್ಯ. ದೇಶ ಸೇವೆಗೆ ಸಿಕ್ಕಂತ ಇಂಥ ಅವಕಾಶಗಳನ್ನು ಪೊಲೀಸರು ಹೆಚ್ಚಿನ ಮುತವರ್ಜಿ ವಹಿಸಿ ಕೆಲಸ ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು. ಪೊಲೀಸ್ ಸೇವೆಯಲ್ಲಿ ಕಾರ್ಯ ನಿರ್ವಹಿಸಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ಪ್ರಸಕ್ತ ವರ್ಷ ದೇಶದಲ್ಲಿ ಹುತಾತ್ಮರಾದ 350 ಪೊಲೀಸರ ಹೆಸರನ್ನು ಓದುವ ಮೂಲಕ ಗೌರವ ಸಮರ್ಪಿಸಿದರು.
ಪರೇಡ್‌ ಕಮಾಂಡರ್ ಭರತ ತಳವಾರ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು. ನಂತರ ಪಥ ಸಂಚಲನ ಜರುಗಿತು. ನ್ಯಾಯಾಧೀಶರಾದ ಸಾವಿತ್ರಿ ಗುಜ್ಜಿ, ಎನ್.ಎಸ್. ಬೆಳ್ಳೊಳ್ಳಿ, ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.