ADVERTISEMENT

ರಕ್ತದಾನದಿಂದ ಉತ್ತಮ ಆರೋಗ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 6:15 IST
Last Updated 14 ಜೂನ್ 2011, 6:15 IST

ಜಗತ್ತಿನಲ್ಲಿ ಅತಿ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮಾನವನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಜಗತ್ತಿನಲ್ಲಿ ಪ್ರತಿ ದಿನ ಹಲವಾರು ಜನರು ಸಾವಿನಿಂದ ಬದುಕಿ ಉಳಿದಿದ್ದಾರೆ.  ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂಪ್ರೇರಿತನಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುವರು.

ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲ. ರಕ್ತ ಬೇಕಾದರೆ ರಕ್ತದಾನಿಯಿಂದಲೇ ಪಡೆಯಬೇಕಾಗುತ್ತದೆ. ರಕ್ತಕ್ಕೆ ನಿರಂತರವಾಗಿ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ರೋಗಿಗಳಿಗೆ, ಡೆಂಗೆ ಜ್ವರ, ಹೆರಿಗೆ ಆಗುವಾಗ ರಕ್ತಸ್ತಾವವಾದರೆ ರಕ್ತ ಬೇಕಾಗುತ್ತದೆ. ಸುಟ್ಟ ಗಾಯಾಗಳುಗಳಿಗೆ ಹಾಗೂ ರಕ್ತಹೀನತೆಗೂ ಬೇಕು.

ರಕ್ತವು ಪ್ರತಿಯೊಂದು ಜೀವಕಣಗಳಿಗೆ ಆಹಾರದ ಪೋಷಕಾಂಶಗಳನ್ನು ಮುಟ್ಟಿಸುತ್ತದೆ. ಜೀವಕಣಗಳಿಂದ ಬೇಡವಾದ ಪದಾರ್ಥಗಳನ್ನು ಹೊರತಳ್ಳುತ್ತದೆ. ಅಂದರೆ ಮೂತ್ರಕೋಶದಿಂದ ಮೂತ್ರವನ್ನು, ತ್ವಚೆಯಿಂದ ಬೇಡವಾದ ವಸ್ತುಗಳನ್ನು ಬೆವರಿನ ಮುಖಾಂತರ ಹಾಗೂ ಇಂಗಾಲದ ಡೈಯಾಕ್ಸೈಡ್ ಅನ್ನು ಪುಪ್ಪಸಗಳಿಂದ ಹೊರ ಹಾಕುತ್ತದೆ.

ರಕ್ತವು ಮನುಷ್ಯನಲ್ಲಿ ನೀರನ್ನು ಹಾಗೂ ಉಷ್ಣತೆಯನ್ನು ಸರಿಯಾದ ಪ್ರಮಾಣದಲ್ಲಿಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯನಲ್ಲಿ 5-6 ಲೀಟರ್ ರಕ್ತವಿರುತ್ತದೆ. ಆದರೆ ಒಬ್ಬ ವ್ಯಕ್ತಿಯಿಂದ 350 ಮಿಲಿ ಲೀಟರ್ ರಕ್ತ ಮಾತ್ರ ಪಡೆಯಲಾಗುತ್ತದೆ. ಇದು ಅಲ್ಪ ಪ್ರಮಾಣ.

ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಆರಂಭವಾಗುತ್ತದೆ. ಇದರಿಂದ ಮಿದುಳು ಚುರುಕುಗೊಳ್ಳುತ್ತದೆ. ಜಾಣ್ಮೆ ಹೆಚ್ಚುತ್ತದೆ. ನೆನಪಿನಶಕ್ತಿ ವೃದ್ಧಿಸುತ್ತದೆ. ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಹೃದಯಾಘಾತ ತಡೆಯಬಹುದು. ಆದರೆ ಜಗತ್ತಿನಲ್ಲಿ ಪ್ರತಿ ವರ್ಷ ಅಸಂಖ್ಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ.

ಮುಖ್ಯವಾಗಿ ಹೆರಿಗೆಯ ಸಮಯದಲ್ಲಿ ರಕ್ತ ಸಿಗದೆ ಇರುವುದರಿಂದ ಸಾವಿನ ಅಂಚಿನಲ್ಲಿರುತ್ತಾರೆ. ಅಂಥವರಿಗೆ ಸೂಕ್ತ ಸಮಯಕ್ಕೆ ರಕ್ತ ಸಿಕ್ಕರೆ ಬದುಕುಳಿಯುತ್ತಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಒಂದು ಸಾವಿರ ದಶಲಕ್ಷ ಯುನಿಟ್‌ಗಳನ್ನು ದಾನಿಗಳಿಂದ ಪಡೆದರೂ ಲಕ್ಷಗಟ್ಟಲೇ ರಕ್ತದ ಯುನಿಟ್‌ಗಳು ಬೇಕಾಗುತ್ತದೆ.

ಈ ದೇಶದಲ್ಲಿ ಪ್ರತಿ ಮೂರು ಸೆಕೆಂಡಿಗೆ ಒಬ್ಬರಿಗೆ ರಕ್ತ ಬೇಕಾಗುತ್ತದೆ. ಆದರೆ ಶೇ 40-50 ದಾನಿಗಳು ಮಾತ್ರ ದಾನ ಮಾಡುತ್ತಾರೆ. ಇದಕ್ಕೆ ತಿಳಿವಳಿಕೆಯ ಕೊರತೆ ಕಾರಣ. ರಕ್ತ ದಾನ ಮಾಡುವುದರಿಂದ ಅಶಕ್ತತೆ ಬರುತ್ತದೆ ಎನ್ನುವ ಮೂಢನಂಬಿಕೆ ಜನರಲ್ಲಿ ಇದೆ. ಇದನ್ನು ಹೋಗಲಾಡಿಸಿ ಜಾಗೃತಿಗೊಳಿಸಬೇಕಾದ ಅಗತ್ಯವಿದೆ.

ರಕ್ತವನ್ನು ದಾನಿಗಳಿಂದ ಪಡೆದ ನಂತರ 35 ದಿನಗಳವರೆಗೆ ಇಡಬಹುದು. ಒಬ್ಬ ದಾನಿಯಿಂದ ಪಡೆದ ಒಂದು ಬಾಟಲಿ (ಒಂದು ಯುನಿಟ್) ರಕ್ತ ಮೂರು ಜನರ ಜೀವ ಉಳಿಸಬಲ್ಲದು. ಇದಕ್ಕಾಗಿ ಸಾರ್ವಜನಿಕರು ಆಗಾಗ ರಕ್ತ ದಾನ ಮಾಡಿ ಜೀವ ಉಳಿಸಲು ನೆರವಾಗಬೇಕು. ಸ್ವಯಂಪ್ರೇರಿತ ರಕ್ತ ದಾನಿಗಳಿಂದ ಸಿಗುವ ರಕ್ತವು ಸುರಕ್ಷಿತವಾಗಿರುತ್ತದೆ. ಆದರೂ ಮಲೇರಿಯಾ, ಲೈಂಗಿಕ ರೋಗಗಳು ಹಾಗೂ ಇತರ ರೋಗಗಳಿಂದ ವ್ಯಕ್ತಿ ಮುಕ್ತವಾಗಿದ್ದಾನೆ ಎಂದು ತಪಾಸಣೆ ಮಾಡಿ ಖಚಿತಪಡಿಸಿಕೊಳ್ಳಲಾಗುತ್ತದೆ.

ರಕ್ತದಾನ ಮಾಡುವಾಗ ಒಂದು ಚುಚ್ಚುಮದ್ದು ತೆಗೆದುಕೊಳ್ಳುವಾಗ ಆಗುವುದಕ್ಕಿಂತ ಹೆಚ್ಚು ನೋವು ಆಗುವುದಿಲ್ಲ. ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು 20-30 ನಿಮಿಷ ಸಾಕು.

ಯಾರು ರಕ್ತದಾನ ಮಾಡಬಹುದು?

* 18ರಿಂದ 60 ವರ್ಷದೊಳಗಿನವರು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.

* ಪುರುಷರು ಮೂರು ತಿಂಗಳಿಗೊಮ್ಮೆ ಮತ್ತು ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

* ದಾನಿಯ ದೇಹದ ತೂಕ 45 ಕಿಲೋ ಇರಬೇಕು.

ಯಾರು ರಕ್ತದಾನ ಮಾಡಬಾರದು:
* ಚಳಿಜ್ವರ, ಕ್ಯಾನ್ಸರ್, ಕ್ಷಯರೋಗ, ಮಧುಮೇಹ, ಹೆಪಟೈಟಸ್ ಬಿ ಮತ್ತು ಸಿ, ಮೂತ್ರಪಿಂಡಕ್ಕೆ ಸಂಬಂಧಿಸಿ ರೋಗ, ಹೃದಯರೋಗ, ಲೈಂಗಿಕ ರೋಗಗಳು ಇದ್ದರೆ ರಕ್ತದಾನ ಮಾಡಬಾರದು.

* ಮದ್ಯಪಾನ, ಮಾದಕದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು.

* ಮಹಿಳೆಯರು ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾದಾಗ, ಎದೆ ಹಾಲು ಉಣಿಸುವಾಗ ರಕ್ತದಾನ ಮಾಡಬಾರದು. ಹೆರಿಗೆಯಾದ 6 ತಿಂಗಳವರೆಗೆ ರಕ್ತದಾನ ಮಾಡಬಾರದು.

* ಕಾಯಿಲೆ ವಿರುದ್ಧ ಲಸಿಕೆ ಪಡೆದಿದ್ದರೆ, ಒಂದು ತಿಂಗಳವರೆಗೆ ರಕ್ತದಾನ ಮಾಡಬಾರದು. ಆಸ್ಪಿರಿನ್ ಮಾತ್ರೆ ಸೇವಿಸಿದ ಮೂರು ದಿನಗಳವರೆಗೆ ರಕ್ತದಾನ ಮಾಡಬಾರದು.

* ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದವರು 6 ತಿಂಗಳವರೆಗೆ ರಕ್ತದಾನ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.