ADVERTISEMENT

ರಣಜಿಗೆ ರಾಜನಗರ ಮೈದಾನ ಸಜ್ಜು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 5:52 IST
Last Updated 11 ಡಿಸೆಂಬರ್ 2013, 5:52 IST
ಕರ್ನಾಟಕ ಮತ್ತು ಪಂಜಾಬ್‌ ನಡುವೆ ಇದೇ 14ರಿಂದ ನಡೆಯಲಿರುವ ರಣಜಿ ಪಂದ್ಯಕ್ಕಾಗಿ ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಮೈದಾನ ಸಜ್ಜುಗೊಳಿಸುವುದನ್ನು ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ, ಶಿವಾನಂದ ಗುಂಜಾಳ, ಬಾಬಾ ಭೂಸದ ಹಾಗೂ ಕೆ.ಎಸ್‌.ರಘುರಾಂ ವೀಕ್ಷಿಸಿದರು
ಕರ್ನಾಟಕ ಮತ್ತು ಪಂಜಾಬ್‌ ನಡುವೆ ಇದೇ 14ರಿಂದ ನಡೆಯಲಿರುವ ರಣಜಿ ಪಂದ್ಯಕ್ಕಾಗಿ ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಮೈದಾನ ಸಜ್ಜುಗೊಳಿಸುವುದನ್ನು ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ, ಶಿವಾನಂದ ಗುಂಜಾಳ, ಬಾಬಾ ಭೂಸದ ಹಾಗೂ ಕೆ.ಎಸ್‌.ರಘುರಾಂ ವೀಕ್ಷಿಸಿದರು   

ಹುಬ್ಬಳ್ಳಿ: ಭಾರತ–ವೆಸ್ಟ್‌ ಇಂಡೀಸ್‌ ‘ಎ’ ತಂಡಗಳ ನಡುವೆ ಅನೌಪಚಾರಿಕ ಟೆಸ್ಟ್‌ ಪಂದ್ಯ ನಡೆದು ಕೇವಲ ಎರಡು ತಿಂಗಳು ತುಂಬುತ್ತಿದ್ದಂತೆ ನಗರ ಮತ್ತೊಮ್ಮೆ ಕ್ರಿಕೆಟ್‌ ಗುಂಗಿನತ್ತ ಜಾರುತ್ತಿದೆ. ಕರ್ನಾಟಕ ಮತ್ತು ಪಂಜಾಬ್‌ ತಂಡಗಳ ನಡುವೆ ಇದೇ 14ರಿಂದ ನಡೆಯಲಿರುವ ರಣಜಿ ಪಂದ್ಯಕ್ಕೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನ ಸಜ್ಜಾಗುತ್ತಿದ್ದು ಮತ್ತೊಂದು ರೋಚಕ ಪಂದ್ಯಕ್ಕಾಗಿ ಪ್ರೇಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ.

ಒಡಿಶಾ ಮತ್ತು ಹರಿಯಾಣ ತಂಡ­ಗಳ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಕನಸು ಕಾಣುತ್ತಿರುವ ಕರ್ನಾಟಕ ಬಲಿಷ್ಠ ಪಂಜಾಬ್ ವಿರುದ್ಧ ಕಾದಾಡುವುದರಿಂದಾಗಿ ಈ ಪಂದ್ಯ ರೋಚಕವಾಗಲಿದೆ. ಆದ್ದರಿಂದ ಪ್ರೇಕ್ಷಕರಿಗೆ ಉತ್ತಮ ಸ್ಪರ್ಧೆ ನೋಡಲು ಸಿಗಲಿದೆ. ಕಳೆದ ವರ್ಷ ರಣಜಿ ಪಂದ್ಯಕ್ಕೆ ಆತಿಥ್ಯ ವಹಿಸುವುದರೊಂದಿಗೆ ಉದ್ಘಾಟನೆ­ಗೊಂಡ ಕೆಎಸ್‌ಸಿಎ ಮೈದಾನದಲ್ಲಿ ಭಾರತ–ವಿಂಡೀಸ್‌ ‘ಎ’ ತಂಡಗಳ ಪಂದ್ಯ ಯಶಸ್ವಿಯಾಗಿತ್ತು.

ಹೀಗಾಗಿ ಈಗ ಹೆಚ್ಚಿನ ಸಿದ್ಧತೆಗಳೇನೂ ನಡೆಸ­ಬೇಕಾದ ಅಗತ್ಯವಿಲ್ಲ. ಅನೌಪಚಾರಿಕ ಟೆಸ್ಟ್‌ ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರಿ­ಗಾಗಿ ನಿರ್ಮಿಸಲಾಗಿದ್ದ ಸ್ಟ್ಯಾಂಡ್‌ಗಳು ಈ ಬಾರಿ ಇರುವುದಿಲ್ಲ. ಶಾಶ್ವತವಾಗಿ ನಿರ್ಮಿಸಿರುವ ಸಿಮೆಂಟ್‌ನ ಗ್ಯಾಲರಿ­ಯಲ್ಲಿ ಪ್ರೇಕ್ಷಕರು ಕುಳಿತುಕೊಳ್ಳ­ಬಹುದಾಗಿದೆ. ನೆರಳಿಗಾಗಿ ಶಾಮಿಯಾನ ಹಾಕಲಾಗುತ್ತಿದೆ.

ರಣಜಿ ಪಂದ್ಯದ ಸಂದರ್ಭದಲ್ಲಿ ಎರಡು, ಮೂರು ಮತ್ತು ನಾಲ್ಕನೇ ಗೇಟ್‌ಗಳನ್ನು ಸಾರ್ವಜನಿಕರಿಗಾಗಿ ತೆರೆದಿಡಲಾಗುತ್ತದೆ. ಮುಖ್ಯ ಗೇಟ್‌ನಲ್ಲಿ ಮಾತ್ರ ಗಣ್ಯರು, ಅತಿಗಣ್ಯರು, ಕೆಎಸ್‌ಸಿಎ ಪ್ರತಿನಿಧಿಗಳು ಮತ್ತು ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಲಾಗು­ವುದು ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ನಾಳೆ ತಂಡಗಳ ಆಗಮನ
ಇದೇ 12ರಂದು ಮಧ್ಯಾಹ್ನ ಪಂಜಾಬ್‌ ತಂಡ ಹುಬ್ಬಳ್ಳಿಗೆ ಆಗಮಿಸಲಿದ್ದು ಕರ್ನಾಟಕ ತಂಡ ಅಂದು ಸಂಜೆ ಆಗಮಿಸಲಿದೆ. ಪಂಜಾಬ್‌ ತಂಡ ತಾಜ್‌ ಗೇಟ್‌ವೇದಲ್ಲಿ ತಂಗಲಿದ್ದು ರಾಜ್ಯ ತಂಡದ ಆಟಗಾರರು ಗೋಕುಲ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಹೋಟೆಲ್‌ನಲ್ಲಿ ತಂಗಲಿದ್ದಾರೆ.  13ರಂದು ಉಭಯ ತಂಡಗಳು ಅಭ್ಯಾಸ ನಡೆಸಲಿವೆ.

ಕೆಎಸ್‌ಸಿಎ ನೂತನ ಕಾರ್ಯದರ್ಶಿ ಬ್ರಿಜೇಶ್ ಪಟೇಲ್‌ ಪಂದ್ಯದ ಆರಂಭದ ದಿನ ಹುಬ್ಬಳ್ಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ‘ಮಂಗಳವಾರ ನಿಧನ ಹೊಂದಿದ ಕೆಎಸ್‌ಸಿಎ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಅವರಿಗೆ ಅಂದು ಮೈದಾನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುವುದು’ ಎಂದು ಕೆಎಸ್‌ಸಿಎ ಸಂಚಾಲಕ ಬಾಬಾ ಭೂಸದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT