ADVERTISEMENT

ರಸ್ತೆ ನಿರ್ಮಾಣಕ್ಕೆ ಜಾಹೀರಾತು ಅಡ್ಡಿ!

ಗುರು ಪಿ.ಎಸ್‌
Published 6 ಜುಲೈ 2017, 6:36 IST
Last Updated 6 ಜುಲೈ 2017, 6:36 IST
ಹುಬ್ಬಳ್ಳಿಯ ಜೆ.ಜಿ. ವಾಣಿಜ್ಯ ಕಾಲೇಜಿನ ಎದುರು ಹೊಸದಾಗಿ ನಿರ್ಮಾಣವಾದ ರಸ್ತೆಯಿಂದ ಹಳೆಯ ರಸ್ತೆಗೆ ಜಲ್ಲಿಕಲ್ಲುಗಳು ಬಿದ್ದಿರುವುದು  ಪ್ರಜಾವಾಣಿ ಚಿತ್ರ: ಈರಪ್ಪ ನಾಯ್ಕರ್
ಹುಬ್ಬಳ್ಳಿಯ ಜೆ.ಜಿ. ವಾಣಿಜ್ಯ ಕಾಲೇಜಿನ ಎದುರು ಹೊಸದಾಗಿ ನಿರ್ಮಾಣವಾದ ರಸ್ತೆಯಿಂದ ಹಳೆಯ ರಸ್ತೆಗೆ ಜಲ್ಲಿಕಲ್ಲುಗಳು ಬಿದ್ದಿರುವುದು ಪ್ರಜಾವಾಣಿ ಚಿತ್ರ: ಈರಪ್ಪ ನಾಯ್ಕರ್   

ಹುಬ್ಬಳ್ಳಿ: ಬಿ.ಆರ್.ಟಿ.ಎಸ್. ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಹೊಸೂರಿನಿಂದ ಬಿ.ವಿ.ಬಿ ಕಾಲೇಜಿನವರೆಗೆ ಅಷ್ಟಪಥ ರಸ್ತೆ ನಿರ್ಮಾಣವಾಗುತ್ತಿದೆ. ಈ ಪೈಕಿ, ಬಲ ಮತ್ತು ಎಡಬದಿಯ ರಸ್ತೆ ನಿರ್ಮಾಣವಾಗಿದ್ದು, ಮಧ್ಯಭಾಗದಲ್ಲಿರುವ ಹಳೆಯ ರಸ್ತೆ ಕೆಳಭಾಗಕ್ಕೆ ಜರಿದಂತಾಗಿದೆ. ಈ ರಸ್ತೆಯಲ್ಲಿ ಹರಡಿರುವ ಜಲ್ಲಿ ಕಲ್ಲುಗಳಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

‘ವಿದ್ಯಾನಗರದ ಜೆ.ಜಿ. ವಾಣಿಜ್ಯ ಕಾಲೇಜಿನ ಮುಂಭಾಗದಿಂದ ಸುಶ್ರುತ ಆಸ್ಪತ್ರೆಯವರೆಗೆ ಒಂದು ಭಾಗದಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದು ಮೊದಲಿನ ರಸ್ತೆಗಿಂತ ಸುಮಾರು ಒಂದು ಅಡಿ ಎತ್ತರದಲ್ಲಿದೆ. ಈ ಎತ್ತರದ ರಸ್ತೆ ಕೆಳಗೆ ಹಾಕಿರುವ ಜಲ್ಲಿ ಕಲ್ಲುಗಳು ಹಳೆಯ ರಸ್ತೆಗೆ ಹರಡಿ ಕೊಂಡಿದೆ. ಜಲ್ಲಿಕಲ್ಲುಗಳಿಂದ ಬೈಕ್‌ ಸ್ಕಿಡ್‌ ಆಗಿ ಎರಡು ಬಾರಿ ಬಿದ್ದಿದ್ದೇನೆ’ ಎಂದು ಶಿರೂರ ಪಾರ್ಕ್‌ನ ನಿವಾಸಿ ಪ್ರಮೋದ ಶಾಸ್ತ್ರಿ ‘ಪ್ರಜಾವಾಣಿ’ಗೆ ಹೇಳಿದರು.

‘ಬಸ್‌ಗಳು ಹಾಗೂ ದೊಡ್ಡ ಲಾರಿಗಳು ಹೊಸ ರಸ್ತೆಯ ಮೇಲೆ ಚಲಿಸುತ್ತಿವೆ. ಪಕ್ಕದ ರಸ್ತೆ ತೀರಾ ಇಕ್ಕಟ್ಟಾಗಿದೆ. ಸಂಚಾರ ದಟ್ಟಣೆ ಉಂಟಾಗುವುದಲ್ಲದೆ, ಏರಿಳಿತದ ರಸ್ತೆಯಲ್ಲಿ ಸಾಗುವುದು ಕಿರಿಕಿರಿ ಎನಿಸುತ್ತದೆ’ ಎಂದು ಲಾವಣ್ಯ ಗೌಳಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಾಹೀರಾತು ಫಲಕ ಅಡ್ಡಿ: ಈ ಬಗ್ಗೆ ಬಿ.ಆರ್.ಟಿ.ಎಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ ಅವರನ್ನು ಸಂಪರ್ಕಿಸಿದಾಗ, ‘ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆ.ಆರ್.ಡಿ.ಸಿ.ಎಲ್‌) ವಹಿಸಲಾಗಿದೆ, ಈ ಬಗ್ಗೆ ಅವರನ್ನೇ ವಿಚಾರಿಸಿ’ ಎಂದರು.

‘ವಿದ್ಯಾನಗರದ ವಾಣಿಜ್ಯ ಕಾಲೇಜು ಎದುರಿನ ರಸ್ತೆ ನಿರ್ಮಾಣವಾಗಿದೆ. ಕಿಮ್ಸ್ ಬದಿಯ ರಸ್ತೆ ನಿರ್ಮಾಣ ಮಾಡುವುದಕ್ಕೂ ಮೊದಲು ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಇನ್ನು, ರಸ್ತೆಯ ಮಧ್ಯದ ಭಾಗ (ಮೀಡಿಯನ್‌)ವನ್ನು ಮಹಾನಗರ ಪಾಲಿಕೆ ತೆರವು ಮಾಡಿಕೊಡಬೇಕು.

ಈ ಭಾಗದಲ್ಲಿ ಜಾಹೀರಾತುಗಳಿದ್ದು, ಪಾಲಿಕೆ ಅಧಿಕಾರಿ ಗಳು ಅದನ್ನು ತೆರವುಗೊಳಿಸಿದರೆ, ಮಧ್ಯದ ಮಾರ್ಗವನ್ನೂ ಶೀಘ್ರ ನಿರ್ಮಾಣ ಮಾಡುತ್ತೇವೆ. ಆಗ, ಸಮಗ್ರ ರಸ್ತೆ ಸಮಾನ ಎತ್ತರಕ್ಕೆ ಬರುತ್ತದೆ’ ಎಂದು ಕೆ.ಆರ್.ಡಿ.ಸಿ.ಎಲ್‌ನ ಅಧಿಕಾರಿಯೊಬ್ಬರು ಹೇಳಿದರು.

‘ನಾವು ಬಿ.ಆರ್.ಟಿ.ಎಸ್‌ ಹಾಗೂ ಲೋಕೋಪಯೋಗಿ ಇಲಾಖೆ ನಡುವಿನ ಏಜೆನ್ಸಿಯಾಗಿ ಕೆ.ಆರ್.ಡಿ.ಸಿ.ಎಲ್‌ ಕೆಲಸ ಮಾಡುತ್ತದೆ. ಜಾಹೀರಾತು ಫಲಕಗಳನ್ನು ತೆರವುಮಾಡಿದರೆ ರಸ್ತೆ ನಿರ್ಮಾಣ ಕಾಮಗಾರಿ ಬೇಗ ಮುಗಿಯುತ್ತದೆ’ ಎಂದು ಅವರು ಹೇಳಿದರು.

‘ಬಿ.ಆರ್.ಟಿ.ಎಸ್‌ ಜವಾಬ್ದಾರಿ’
‘ಬಿ.ಆರ್.ಟಿ.ಎಸ್‌ನ ರಸ್ತೆಯ ಸಂಪೂರ್ಣ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ಯಿಂದ ಕೆ.ಆರ್.ಡಿ.ಸಿ.ಎಲ್‌ಗೆ ನೀಡಲಾಗಿದೆ. ಅಲ್ಲದೆ, ಮೀಡಿ ಯನ್‌ ನಿರ್ವಹಣೆಗಾಗಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ, ಮೀಡಿಯನ್‌ ತೆರವು ಕಾರ್ಯವನ್ನು ಕೆ.ಆರ್.ಡಿ.ಸಿ.ಎಲ್‌ ಮಾಡಬೇಕು.

ಅಲ್ಲದೆ, ಜಾಹೀರಾತು ವಿಚಾರವಾಗಿ ಕೆಲವರು ಕೇಸು ಮಾಡಿದ್ದಾರೆ. ಈ ವಿಷಯದಲ್ಲಿ ಸ್ವಲ್ಪ ಸಮಸ್ಯೆಯಿದ್ದು, ಅದನ್ನು ಬಿ.ಆರ್.ಟಿ.ಎಸ್‌.ನವರೇ ಪರಿಹರಿಸಬೇಕು’ ಎಂದು ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.

* * 

ರಸ್ತೆಯ ಮೇಲೆ ಜಲ್ಲಿ ಕಲ್ಲುಗಳು ಹರಡಿರುವುದು ಗಮನಕ್ಕೆ ಬಂದಿದೆ. ಅದನ್ನು ಶೀಘ್ರವೇ ತೆರವುಗೊಳಿಸಲು ಕೆಆರ್‌ಡಿಸಿಎಲ್‌ನ ಅಧಿಕಾರಿಗಳಿಗೆ ಸೂಚಿಸುತ್ತೇನೆ
ಎಂ.ಜಿ. ಹಿರೇಮಠ
ವ್ಯವಸ್ಥಾಪಕ ನಿರ್ದೇಶಕ, ಬಿ.ಆರ್.ಟಿ.ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.