ADVERTISEMENT

ರಾಜ್ಯ ಸರ್ಕಾರ ಶೀಘ್ರ ಪತನ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 6:43 IST
Last Updated 24 ಮಾರ್ಚ್ 2014, 6:43 IST

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತನ­ವಾಗಲಿದ್ದು, ಅಕ್ಟೋಬರ್‌ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿನ ಚವ್ಹಾಣ್ ಗ್ರೀನ್‌ ಗಾರ್ಡನ್‌ನಲ್ಲಿ ಭಾನುವಾರ ನಡೆದ ಬಿಜೆಪಿ ಎಸ್‌ಸಿ ಮೋರ್ಚಾ ಘಟಕದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳು ಇದ್ದು, ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮೇಲ್ವರ್ಗದವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಹಿಂದುಳಿದ ವರ್ಗದವರು ಹಾಗೂ ಮಲ್ಲಿ­ಕಾರ್ಜುನ ಖರ್ಗೆ, ಜಿ.ಪರಮೇಶ್ವರ ನೇತೃತ್ವದಲ್ಲಿ ದಲಿತರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಜುಲೈ ವೇಳೆಗೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತಿದೆ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಬಜೆಟ್‌ ನೀಡಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದ್ದಾರೆ. 1.36 ಲಕ್ಷ ಕೋಟಿ ಮೊತ್ತದ ಬಜೆಟ್‌ ನೀಡಿರುವುದಾಗಿ ಸಿಎಂ ಹೇಳುತ್ತಿದ್ದಾರೆ. ವಾಸ್ತವವಾಗಿ ರಾಜ್ಯದ ಬೊಕ್ಕಸಕ್ಕೆ ₨56 ಸಾವಿರ ಕೋಟಿ ಆದಾಯ ಇದೆ. ಉಳಿದ ಹಣ ಎಲ್ಲಿಂದ ತರುತ್ತಾರೆ’ ಎಂದು ಕಾರಜೋಳ ಪ್ರಶ್ನಿಸಿದರು.

ನೆಹರೂ ಕುಟುಂಬದ ಕಪಿ ಮುಷ್ಠಿಯಿಂದ ದೇಶ ಬಿಡಿಸಿಕೊಳ್ಳಲು ಇದು ಸಕಾಲ ಎಂದು ಹೇಳಿದ ಕಾರಜೋಳ, ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಕಾಂಗ್ರೆಸ್ ಸುಡುವ ಮನೆ ಎಂದು ಹೇಳಿದ್ದರು. ಅಸ್ಪೃಶ್ಯತೆ, ಅನಿಷ್ಟತೆ ಹೋಗಲಾಡಿಸಲು ಆ ಪಕ್ಷದಿಂದ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅವರು ಹೇಳಿದಂತೆ ದಲಿತರ ಉದ್ಧಾರ ಇನ್ನೂ ಅವರಿಂದ ಸಾಧ್ಯವಾಗಿಲ್ಲ ಎಂದರು.

ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಇಟ್ಟಿರುವ ಕಾಂಗ್ರೆಸ್‌ ಅವರನ್ನು ಮತಬ್ಯಾಂಕ್‌ ಆಗಿ ಮಾಡಿಕೊಂಡಿದೆ ಎಂದು ಅರೋಪಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಬಿಜೆಪಿ ಪದಾಧಿಕಾರಿಗಳು ಆಗಲು ಮೊದಲು ಪರಿಶಿಷ್ಟ ಸಮುದಾಯದವರು ಮುಂದೆ ಬರುತ್ತಿರಲಿಲ್ಲ. ಈಗ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಅಂಬೇಡ್ಕರ್‌ ಆಶಯಗಳನ್ನು ಈಡೇರಿಸಲು ರಕ್ತಪಾತವಿಲ್ಲದೆ ಕ್ರಾಂತಿ ನಡೆಸುವ ಶಕ್ತಿ ಬಿಜೆಪಿ ನಾಯಕತ್ವಕ್ಕೆ ಮಾತ್ರ ಇದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿಧಾನಸಭೆ ವಿರೋಧ­ಪಕ್ಷದ ನಾಯಕ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಉಪಮೇಯರ್‌ ಮಂಜುಳಾ ಅಕ್ಕೂರ, ಮಾಜಿ ಸಚಿವ ಸುನಿಲ್ ವಲ್ಯಾಪುರೆ, ಕೆ.ಬಿ.ಶಾಣಪ್ಪ, ಮಾಜಿ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಅಶೋಕ ಕಾಟವೆ, ಮೋಹನ ಲಿಂಬಿಕಾಯಿ, ಮುಖಂಡರಾದ ಭೀಮಶಿ ನೇಮಕಲ್, ಬಸವರಾಜ ವಡ್ಡರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.