ADVERTISEMENT

ರಾಷ್ಟ್ರಪಿತನಿಗೆ ಅವಳಿನಗರದ ಗೌರವ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 5:20 IST
Last Updated 3 ಅಕ್ಟೋಬರ್ 2011, 5:20 IST

ಹುಬ್ಬಳ್ಳಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜನ್ಮ ದಿನವನ್ನು ಅವಳಿನಗರದ ಭಾನುವಾರ ಪಾಲಿಕೆ, ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಶ್ರದ್ಧೆಯಿಂದ ಆಚರಿಸಲಾಯಿತು. ಪಾಲಿಕೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಿಮ್ಸ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಮೇಯರ್ ಪೂರ್ಣಾ ಪಾಟೀಲ ಮಾಲಾರ್ಪಣೆ ಮಾಡಿದರು.

ಗಾಂಧಿ ಅವರಿಗೆ ಪ್ರಿಯವಾದ ಭಜನೆಗಳನ್ನು ರತ್ನಮಾಲಾ ಕೋಪರ್ಡೆ ನೇತೃತ್ವದ ತಂಡ ಪ್ರಸ್ತುತಪಡಿಸಿತು. ದೇಶಭಕ್ತಿ ಗೀತೆಗಳೂ ಈ ಸಂದರ್ಭದಲ್ಲಿ ಕೇಳಿಬಂದವು.ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವ ಪಿ.ಸಿ. ಸಿದ್ಧನಗೌಡರ, ಪಾಲಿಕೆ ಸದಸ್ಯರಾದ ಲಕ್ಷ್ಮಿ ಉಪ್ಪಾರ, ಹಜರತಲಿ ದೊಡ್ಡಮನಿ, ರಾಜಣ್ಣ ಕೊರವಿ, ಮಾಜಿ ಮೇಯರ್ ಪಿರ್ದೋಸ್ ಕೊಣ್ಣೂರು, ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಹಾಜರಿದ್ದರು.

ಧಾರವಾಡದ ಆಜಾದ್ ಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಉಪ ಮೇಯರ್ ನಾರಾಯಣ ಜರತಾರಘರ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜೆಡಿಎಸ್: ಜಾತ್ಯತೀತ ಜನತಾದಳದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
 
ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಸದಸ್ಯ ಹಜರತ್ ಅಲಿ ದೊಡ್ಡಮನಿ, ಫಿರ್ದೋಸ್ ಕೊಣ್ಣೂರು, ವಿ.ಐ. ಅಳಗುಂಡಗಿ, ಬಸವರಾಜ ರಾಯನಗೌಡರ, ಎಂ.ಆರ್. ಯರಗಟ್ಟಿ, ಗಜಾನನ ಅಣ್ವೇಕರ್ ಮತ್ತಿತರರು ಪಾಲ್ಗೊಂಡಿದ್ದರು.

ಕೆಎಲ್‌ಇ ಫಾರ್ಮಸಿ ಕಾಲೇಜು
: ವಿದ್ಯಾನಗರದ ಕೆಎಲ್‌ಇ ಫಾರ್ಮಸಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಿಮ್ಸನ ರಕ್ತ ಭಂಡಾರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 40 ಜನ ಸ್ವಯಂ ಸೇವಕರು ರಕ್ತದಾನ ಮಾಡಿದರು.

ಪಿ.ಸಿ. ಜಾಬಿನ ಕಾಲೇಜು: ನಗರದ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಯಿತು. ವೈಷ್ಣವ ಜನತೋ ಭಜನೆ ಮಾಡಿದ ವಿದ್ಯಾರ್ಥಿಗಳು ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಪಠಣ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಅಮೆರಿಕಾ ಸಂಸತ್ತು ಗಾಂಧಿ ಜನ್ಮ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂಬ ಘೋಷಣೆ ಮಾಡಿದ್ದನ್ನು ಅವರು ನೆನೆದರು.

ಉಪಪ್ರಾಚಾರ್ಯ ಡಾ.ಎಂ.ಐ. ಸಾಂಬ್ರಾಣಿ, ಬಿಸಿಎ ಕೋ-ಆರ್ಡಿನೇಟರ್ ಎಸ್.ಎ. ಹಳೆಮನಿ, ಪಿಯು ವಿಭಾಗದ ಪ್ರಾಚಾರ್ಯ ಎಸ್.ಬಿ. ಹಿರೇಮಠ, ಡಾ.ಜಿ.ಬಿ. ಕಲಕೋಟಿ, ಎಸ್.ಎಸ್. ಬೆಳವಡಿ ಹಾಜರಿದ್ದರು. ಭಾಗ್ಯಶ್ರೀ ಹುಯಿಲಗೋಳ ಪ್ರಾರ್ಥಿಸಿದರು. ಶೇಖ್ ಅಬ್ದುಲ್ಲಾ ಸ್ವಾಗತಿಸಿದರು. ಕೆ.ದಿವ್ಯಾ ನಿರೂಪಿಸಿದರು. ವಿದ್ಯಾ ಕೋಟಿ ವಂದಿಸಿದರು.

ವಿ.ಎಸ್. ಪಿಳ್ಳೈ ಶಾಲೆ: ನಗರದ ಶಾಂತಿ ಕಾಲೊನಿಯ ವಿ.ಎಸ್. ಪಿಳ್ಳೈ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ನಿರ್ಮಲಾ ಠಕ್ಕರ್ ಪ್ರೌಢಶಾಲೆ ವತಿಯಿಂದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಯಿತು. ರತ್ನಾಕರ್ ನಾರಾಯಣ ಪ್ರಭು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿಗಳು ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಕುರಿತು ಮಾತನಾಡಿದರು.

ಭಜನೆಯನ್ನು ಏರ್ಪಡಿಸಲಾಗಿತ್ತು. ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಹಾಜರಿದ್ದರು.
ಶಾಕಾಂಬರಿ ವಿದ್ಯಾಸಂಸ್ಥೆ: ನಗರದ ಶಾಕಾಂಬರಿ ವಿದ್ಯಾ ಸಂಸ್ಥೆಯಿಂದ ಗಾಂಧಿ ಹಾಗೂ ಶಾಸ್ತ್ರಿ ಜಯಂತಿಯನ್ನು ಏರ್ಪಡಿಸಲಾಗಿತ್ತು. ಅಲಾ ಯನ್ಸ್ ಕ್ಲಬ್ ಆಫ್ ಸೂಪರ್ ಲೇಡೀಸ್ ಹುಬ್ಬಳ್ಳಿ, ಅಲಾಯನ್ಸ್ ಪರಿವಾರ, ಸಹೇಲಿ ಮತ್ತು ವೀರಶೈವ ಸಂಘಟನಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮವನ್ನು ಸಂಘಟಿಸಿದ್ದವು.

ಶಾಕಾಂಬರಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಸರೋಜಾ ಹೂಗಾರ, ಸಹೇಲಿ ಅಧ್ಯಕ್ಷೆ ಸುಮಾ ಹಿರೇಮಠ, ಅನುಸೂಯಾ ಅರಕೇರಿ ಮತ್ತಿತರು ಪಾಲ್ಗೊಂಡಿದ್ದರು. ಅಲಾಯನ್ಸ್ ಕ್ಲಬ್ ಜಿಲ್ಲಾ ಗವರ‌್ನರ್ ಎಂ.ಪಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು.

ಶ್ರೀಕೃಷ್ಣ ಗುರುಕುಲ: ನಗರದ ಅಕ್ಷಯ ಕಾಲೊನಿಯ ಶ್ರೀ ಕೃಷ್ಣ ಗುರುಕುಲ ಇಂಗ್ಲಿಷ್ ಶಾಲೆಯಲ್ಲಿ ಗಾಂಧಿ ಜಯಂತಿ ಏರ್ಪಡಿಸಲಾಗಿತ್ತು. ಮುಖ್ಯೋಪಾಧ್ಯಾಯ ಶ್ರೀಪಾದ ಹುಯಿಲಗೋಳ ಅಧ್ಯಕ್ಷತೆ ವಹಿಸಿದ್ದರು. ವೀಣಾ ಕುಲಕರ್ಣಿ ಸ್ವಾಗತಿಸಿದರು. ಅಕ್ಷತಾ ಗುಲಾರಿ ವಂದಿಸಿದರು. ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷತೊಟ್ಟು ಗಮನ ಸೆಳೆದರು.

ಕಟ್ಟಿಮನಿ ಕನ್ನಡ ಪ್ರಾಥಮಿಕ ಶಾಲೆ: ಕೆಎಲ್‌ಇ ಸಂಸ್ಥೆಯ ಎಚ್.ಎಫ್. ಕಟ್ಟಿಮನಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಹಾತ್ಮಾ ಗಾಂಧಿ ಹಾಗೂ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಎಸ್.ಎಸ್. ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಾಂಧಿ ಮತ್ತು ಶಾಸ್ತ್ರಿ ಅವರ ಕುರಿತು ಮಾತನಾಡಿದರು. ಎಸ್.ಎಂ. ಕಂಬಿ ಸ್ವಾಗತಿಸಿದರು. ಎಸ್.ಐ. ಶಿವಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್. ಸಾಲಿಮಠ ವಂದಿಸಿದರು.

ಸರ್. ಎಂ.ವಿ. ಪೂರ್ವ ನರ್ಸರಿ: ಮಂಟೂರ ರಸ್ತೆ ತಬೀಬ್ ಲ್ಯಾಂಡ್‌ನಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಪೂರ್ವ ನರ್ಸರಿ ಶಾಲೆ ಹಾಗೂ ಸರ್ ಎಂ.ವಿ. ಯುಥ್ ಕ್ಲಬ್‌ನಿಂದ ಗಾಂಧಿ ಜಯಂತಿಯನ್ನು ಏರ್ಪಡಿಸಲಾಗಿತ್ತು. ಶಾಲೆಯ ಮುಖ್ಯಸ್ಥ ಸುಭಾಷ ಕಲಾಲ್, ಅಶ್ಪಾಕ್ ಖತೀಬ್, ಶನ್ನು ಲಕ್ಷ್ಮೇಶ್ವರ, ಶೈಲಾ ಢೇಕಣಿ, ಸ್ಪೂರ್ತಿ ಚೌಕಿಮಠ ಮತ್ತಿತರರು ಹಾಜರಿದ್ದರು.

ನೂಲ್ವಿ ರೇಣುಕಾಚಾರ್ಯ ಕಾಲೇಜು: ತಾಲ್ಲೂಕಿನ ನೂಲ್ವಿಯ ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯ ಬಿ.ಇಡಿ ಹಾಗೂ ಡಿ.ಇಡಿ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ಜಿ.ವಿ. ಕರೆಪ್ಪಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಎಸ್.ಎಫ್.ಪಾಟೀಲ, ಪಿ.ಎಫ್.ತಳವಾರ, ಎಸ್.ಎನ್. ಉಗರಗೋಳ ಮತ್ತಿ ತರರು ಹಾಜರಿದ್ದರು. ಶಿವಾನಂದ ಪಟ್ಟೇದ ನಿರೂಪಿಸಿದರು. ಎ.ಸಿ. ವಾಡಕರ್ ಪ್ರಾರ್ಥಿಸಿದರು. ಮೆಹಬೂಬ್‌ಬಿ ಅಗಸಿಮನಿ ವಂದಿಸಿದರು.

ಕೋಳಿವಾಡ ಗ್ರಾ ಪಂ: ತಾಲ್ಲೂಕಿನ ಕೋಳಿ ವಾಡ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಪ್ಪ ಸೊರಟೂರ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ವಿ. ಸುಂಕದ, ಸದಸ್ಯರಾದ ನಿಂಗಪ್ಪ ಜಂತ್ಲಿ, ಚನ್ನಮ್ಮ ಈರಗಾರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.