ADVERTISEMENT

ರಾಹುಲ್ ಸ್ವಾಗತಕ್ಕೆ ಕಾರ್ಯಕರ್ತರ ಕಾತರ

​ಪ್ರಜಾವಾಣಿ ವಾರ್ತೆ
Published 31 ಮೇ 2012, 5:55 IST
Last Updated 31 ಮೇ 2012, 5:55 IST
ರಾಹುಲ್ ಸ್ವಾಗತಕ್ಕೆ ಕಾರ್ಯಕರ್ತರ ಕಾತರ
ರಾಹುಲ್ ಸ್ವಾಗತಕ್ಕೆ ಕಾರ್ಯಕರ್ತರ ಕಾತರ   

ಹುಬ್ಬಳ್ಳಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಮೂಲಕ ಯುವ ಕಾಂಗ್ರೆಸ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ನೆಹರೂ ಕುಟುಂಬದ ನಾಲ್ಕನೇ ತಲೆಮಾರು ರಾಜ್ಯದಲ್ಲಿ ಸಕ್ರಿಯವಾಗುತ್ತಿರುವುದು ವಿಶೇಷವಾಗಿದೆ. ಈ ಹಿಂದೆ ರಾಜ್ಯ ಯುವ ಕಾಂಗ್ರೆಸ್‌ನ ಸಮಾವೇಶ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಕ್ರಮವಾಗಿ ಸಂಜಯ ಗಾಂಧಿ ಹಾಗೂ ರಾಜೀವ್ ಗಾಂಧಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಂಘಟಿಸಿರುವ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಕಾರ್ಯಕಾರಿಣಿಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುವ ಮೂಲಕ ಸಂಚಲನೆಗೆ ಕಾರಣವಾಗುತ್ತಿದ್ದಾರೆ. ಪಕ್ಷದ ಯುವ ನಾಯಕನೊಂದಿಗೆ ನೇರ ಸಂವಾದಕ್ಕೆ ಹೊಸದಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಕಾತರದಿಂದ ಕಾಯುತ್ತಿದ್ದಾರೆ.

1972ರಲ್ಲಿ ಹಿಮಾಚಲ ಪ್ರದೇಶ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿದ್ದ ಲತಾ ಠಾಕೂರ್ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಅವರ ಗೌರವಾರ್ಥ ಬೀದರ್ ಜಿಲ್ಲೆ ಭಾಲ್ಕಿಯಿಂದ ಸಮೀಪದ ಮರೂರು ಗ್ರಾಮಕ್ಕೆ 10 ಕಿ.ಮೀ ಉದ್ದದ ರಸ್ತೆಯನ್ನು ರಾಜ್ಯ ಯುವ ಕಾಂಗ್ರೆಸ್ ಕಾರ್ಯರ್ತರು ಶ್ರಮದಾನದ ಮೂಲಕ ನಿರ್ಮಿಸಿದ್ದರು. 

ರಸ್ತೆ ಉದ್ಘಾಟನೆಗೆ ಅಂದಿನ ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಸಂಜಯ ಗಾಂಧಿ ಆಗಮಿಸಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಆಗ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ ಆರ್.ಗುಂಡೂರಾವ್ ವಹಿಸಿದ್ದರು. ಕಾರ್ಯಕ್ರಮದ ಯಶಸ್ಸು  ಗುಂಡೂರಾವ್ ಅವರಿಗೆ ದೇವರಾಜ ಅರಸು ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಲು ಕಾರಣವಾಯಿತು. ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಲು ಅವರಿಗೆ ಅವಕಾಶ ಒದಗಿಸಿತು.

ಬೆಂಗಳೂರಿನಲ್ಲಿ 1983ರಲ್ಲಿ ನಡೆದ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಾವೇಶಕ್ಕೆ ರಾಜೀವ್ ಗಾಂಧಿ ಆಗಮಿಸಿದ್ದರು. ದೇಶದ ವಿವಿಧ ರಾಜ್ಯಗಳಿಂದ 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಿದ್ದ ಸಮಾವೇಶವನ್ನು ಆಗಿನ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಜೆ.ಜಾರ್ಜ್ ಸಂಘಟಿಸಿದ್ದರು. ಪ್ರಜಾವಾಣಿಯೊಂದಿಗೆ ಮಾತನಾಡಿದ ಜಾರ್ಜ್ ಸಮಾವೇಶದ ಯಶಸ್ಸು ಮುಂದೆ ತಮಗೆ ಶಾಸಕರಾಗಲು ಅವಕಾಶ ಕಲ್ಪಿಸಿತು ಎನ್ನುತ್ತಾರೆ.

ಹುಬ್ಬಳ್ಳಿಯ ಕಾರ್ಯಕಾರಿಣಿ ಮುಂದಿನ ರಾಜಕೀಯ ಬದಲಾವಣೆಗೆ ಮಹತ್ವದ ಮೈಲುಗಲ್ಲು ಆಗಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಿಜ್ವಾನ್ ಅರ್ಷದ್ ಹೇಳುತ್ತಾರೆ. ರಾಹುಲ್ ಭೇಟಿ ರಾಜ್ಯದಲ್ಲಿ ಪಕ್ಷದ ಹಿರಿಯರು, ಕಿರಿಯರ ನಡುವೆ ಇರುವ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂದು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.