ಧಾರವಾಡ: ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಹೋಬಳಿಯ 14 ಹಳ್ಳಿಗಳು ಹಾಗೂ ನವಲಗುಂದ ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನವಲಗುಂದ ಹಾಗೂ ಶಿರಗುಪ್ಪಿ ಹೋಬಳಿ ವ್ಯಾಪ್ತಿಯ ರೈತರು ಆಗಮಿಸಿ, ಇಲ್ಲಿನ ಕಲಾಭವನದ ಮೈದಾನದಿಂದ ಮೆರವಣಿಗೆ ನಡೆಸಿದರು. ಚಕ್ಕಡಿಗಳು ಹಾಗೂ ಟ್ರ್ಯಾಕ್ಟರ್‌ಗಳ ಸಮೇತ ಮೆರವಣಿಗೆ ನಡೆಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರ ಸಮಸ್ಯೆಗಳ ಬಗ್ಗೆ ಸ್ಥಳೀಯ ತಹಶೀಲ್ದಾರರಿಗೆ ಹಾಗೂ ತಮಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ವಿಳಂಬ ಮಾಡದೇ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತರು ಬ್ಯಾಂಕುಗಳಲ್ಲಿ ಹಾಗೂ ಇತರೆ ಮೂಲಗಳಿಂದ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ ಸಮರ್ಪಕ ಮಳೆ ಬಾರದ ಕಾರಣ ಬೆಳೆಗಳು ಮೊಳಕೆಯೊಡೆದು ನಾಶವಾಗಿವೆ. ಇದರಿಂದ ತೀವ್ರ ತೊಂದರೆಯಲ್ಲಿರುವ ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಜಾನುವಾರುಗಳಿಗೆ ಸಹ ಮೇವು ಇಲ್ಲದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೃಷಿ ಸಾಲ, ಟ್ರ್ಯಾಕ್ಟರ್ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರು ಈಗಾಗಲೇ ಪಾವತಿಸಿದ 2004 ರಿಂದ 2011ರ ವರೆಗಿನ ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸುವುದು ಹಾಗೂ ಗೋ ಶಾಲೆ ಪ್ರಾರಂಭಿಸಬೇಕು. ಪ್ರತಿ ಎಕರೆಗೆ 25000 ರೂ. ಪರಿಹಾರ ನೀಡಬೇಕು. ವಿಳಂಬ ಮಾಡಿದರೆ ಸೆ. 23 ರಂದು ಹುಬ್ಬಳ್ಳಿ ಹಾಗೂ ನವಲಗುಂದ ತಾಲ್ಲೂಕಿನ ಎಲ್ಲ ಮುಖ್ಯ ರಸ್ತೆಗಳ ಸಂಚಾರ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಹೇಳಲಾಗಿದೆ.
ಎನ್.ಎಚ್.ಕೋನರಡ್ಡಿ, ಶಿವಾನಂದ ಕರಿಗಾರ, ಎಸ್.ಬಿ.ನವಲೂರ, ಗುರುನಾಥಗೌಡ ಗೌಡರ, ಪ್ರಶಾಂತ ಮತ್ತಿತರರು ನೇತೃತ್ವ ವಹಿಸಿದ್ದರು. ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.