ADVERTISEMENT

ರೈಲ್ವೆಯ ಆರ್ಥಿಕ ಆಧಾರ ಹುಬ್ಬಳ್ಳಿ ವಲಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 6:35 IST
Last Updated 19 ಏಪ್ರಿಲ್ 2012, 6:35 IST

ಹುಬ್ಬಳ್ಳಿ: `ಭಾರತೀಯ ರೈಲ್ವೆಗೆ ಆದಾಯ ತಂದುಕೊಡುವ ಪ್ರಮುಖ ವಲಯಗಳಲ್ಲಿ ಹುಬ್ಬಳ್ಳಿ ವಲಯ ಒಂದು~ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ ಮಿಶ್ರಾ ಹೇಳಿದರು.

ನಗರದ ಚಾಲುಕ್ಯ ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ಈಚೆಗೆ ನಡೆದ ಭಾರತೀಯ ರೈಲ್ವೆ ಸಪ್ತಾಹ ಆಚರಣೆ ಯಲ್ಲಿ  ನಾಲ್ವರು ಅಧಿಕಾರಿಗಳು ಸೇರಿದಂತೆ 343 ಮಂದಿ ಹಾಗೂ 14 ತಂಡಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

`ಆರ್ಥಿಕ ಹಿಂಜರಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಹಾಗೂ ಅನೇಕ ಇತಿಮಿತಿಗಳ ನಡುವೆ ಹುಬ್ಬಳ್ಳಿ ವಲಯ ದೇಶಿ ಸರಕು ಸಾಗಾಟದಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ ಎಂದು ಹೇಳಿದ ಅವರು, ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 4.1 ಶೇಕಡಾ ಹೆಚ್ಚಳ ಕಂಡಿದೆ~ ಎಂದರು.

`ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ರೈಲು ನಿಲ್ದಾಣ ಪೂರ್ಣಗೊಳ್ಳುವುದರೊಂದಿಗೆ ನೈರುತ್ಯ ರೈಲ್ವೆಯ ಇತಿಹಾಸದಲ್ಲಿ ಮೈಲಿಗಲ್ಲಾ ಗಲಿದೆ. ಇಲ್ಲಿ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು.
 
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ರೈಲು ಟಿಕೆಟ್‌ಗಳನ್ನು ಸುಲಭವಾಗಿ ಪಡೆಯಲು ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ~ ಎಂದು ಅವರು ತಿಳಿಸಿದರು.

`ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು 20 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 9 ಸಬ್‌ವೇಗಳನ್ನು ನಿರ್ಮಿಸಲಾಗಿದೆ. 15 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಗೇಟ್ ಅಳವಡಿಸಲಾಗಿದೆ. ಇದು ದೇಶದ ಯಾವುದೇ ವಲಯ ಮಾಡಿರುವ ಸಾಧನೆಗಳಲ್ಲೇ ಅತ್ಯುತ್ತಮ~ ಎಂದು ಅವರು ತಿಳಿಸಿದರು.

`ವಿಜಾಪುರ-ಹುಟಗಿ, ಹುಬ್ಬಳ್ಳಿ- ಹೆಬಸೂರು, ಧಾರವಾಡ- ಮುಗದ, ಬಳ್ಳಾರಿ-ತೋರಣಗಲ್ ನಡುವೆ ಸಂಚಾರದ ಸಂದರ್ಭದಲ್ಲಿ ವೇಗ ಹೆಚ್ಚಳಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಹೊಸಪೇಟೆ- ಕೊಟ್ಟೂರು ನಡುವೆ ಹೊಸ ಪ್ಯಾಸೆಂಜರ್ ರೈಲು ಆರಂಭಿಸಲಾಗಿದೆ.
 
ಹಳಿಯ ಉನ್ನತೀಕರಣ, ಸ್ಟೇಷನ್‌ಗಳ ನಿರ್ಮಾಣ, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳು, ಲೆವೆಲ್ ಕ್ರಾಸಿಂಗ್, ಸಿಗ್ನಲ್ ವ್ಯವಸ್ಥೆ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ. ಸಿಬ್ಬಂದಿ ಕ್ಷೇಮ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಳಿದಿರುವ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು~ ಎಂದು ಅವರು ಭರವಸೆ ನೀಡಿದರು.

ನೈರುತ್ಯ ರೈಲ್ವೆ ವಲಯದ ಹೆಚ್ಚುವರಿ ವ್ಯವಸ್ಥಾಪಕ ಜಿ.ಕೆ. ದ್ವಿವೇದಿ, ನೈರುತ್ಯ ರೈಲ್ವೆ ಮಹಿಳಾ ಕ್ಷೇಮ ಸಂಸ್ಥೆಯ ಅಧ್ಯಕ್ಷೆ ಸುನೀತಾ ಮಿಶ್ರಾ ಮತ್ತಿತರರು ಭಾಗವಹಿಸಿದ್ದರು. ಜಿ.ಆರ್.ಎಸ್ ರಾವ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.