ADVERTISEMENT

ಲಾರಿ ಹಾಯ್ದು ಬಾಲಕ ಸ್ಥಳದಲ್ಲೆ ಸಾವು

ರೊಚ್ಚಿಗೆದ್ದ ಸ್ಥಳೀಯರಿಂದ ಪ್ರತಿಭಟನೆ; ಗುಂಪು ಚದುರಿಸಲು ಲಾಠಿಚಾರ್ಜ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:49 IST
Last Updated 17 ಏಪ್ರಿಲ್ 2013, 10:49 IST
ಹಳೇಹುಬ್ಬಳ್ಳಿಯ ಮಾವನೂರ ರಸ್ತೆಯ ಸುಂಡಕೆ ಹಾಲ್ ಬಳಿ ಲಾರಿ ಹಾಯ್ದ ಬಾಲಕ ಸಾವಿಗೀಡಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗಿಸಿದರು.
ಹಳೇಹುಬ್ಬಳ್ಳಿಯ ಮಾವನೂರ ರಸ್ತೆಯ ಸುಂಡಕೆ ಹಾಲ್ ಬಳಿ ಲಾರಿ ಹಾಯ್ದ ಬಾಲಕ ಸಾವಿಗೀಡಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗಿಸಿದರು.   

ಹುಬ್ಬಳ್ಳಿ: ಲಾರಿ ಹಾಯ್ದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹಳೇಹುಬ್ಬಳ್ಳಿಯ ಮಾವನೂರ ರಸ್ತೆಯ ಸುಂಡಕೆ ಹಾಲ್ ಬಳಿ ಸೋಮವಾರ ಸಂಜೆ ಸಂಭವಿಸಿದೆ. ರೊಚ್ಚಿಗೆದ್ದ ಸ್ಥಳೀಯರು ಲಾರಿಗೆ ಬೆಂಕಿಹಚ್ಚಲು ಮುಂದಾಗುತ್ತಿದ್ದಂತೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು.

ಸ್ಥಳೀಯ ಟಿಪ್ಪುನಗರದ ನಿವಾಸಿ ಶಹಬಾಜ್ ಕಲಾದಗಿ (17) ಮೃತ ಬಾಲಕ. ಸಂಜೆ 5.20ರ ಸುಮಾರಿಗೆ ಈ ಘಟನೆ ನಡೆದಿದೆ.

ಸುಂಡಕೆ ಹಾಲ್ ಬಳಿ ಶಹಬಾಜ್ ರಸ್ತೆ ದಾಟುತ್ತಿದ್ದಾಗ ಮಣ್ಣು ಹೇರಿಕೊಂಡು ಮಾವನೂರ ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಹೊಟ್ಟೆಯ ಭಾಗದ ಮೂಲಕ ಲಾರಿ ಹಾಯ್ದ ಪರಿಣಾಮ ಸ್ಥಳದಲ್ಲೇ ಸಾವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಘಟನೆ ನಡೆದ ತಕ್ಷಣ ಅಂಬುಲೆನ್ಸ್‌ಗೆ ಮಾಹಿತಿ ನೀಡಿದರೂ, ಅದು ಸ್ಥಳಕ್ಕೆ ತಲುಪುವಷ್ಟರಲ್ಲಿ ಸುಮಾರು ಒಂದು ಗಂಟೆ ವಿಳಂಬವಾಯಿತು ಎಂದು ರೊಚ್ಚಿಗೆದ್ದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಅವಕಾಶ ನೀಡಲಿಲ್ಲ. ಭಾರಿ ಸಂಖ್ಯೆಯಲ್ಲಿ ಸೇರಿದ ಸ್ಥಳೀಯರು ಪೊಲೀಸರನ್ನೂ ತಡೆದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಗಮನಿಸಿ ಹಳೇಹುಬ್ಬಳ್ಳಿ, ಕಮರಿಪೇಟೆ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು. ಅಲ್ಲದೆ ಚುನಾವಣಾ ಕರ್ತವ್ಯಕ್ಕೆ ನಗರಕ್ಕೆ ಆಗಮಿಸಿದ ಗಡಿ ಭದ್ರತಾ ಪಡೆಯ ಪೊಲೀಸರು ಮತ್ತು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನೂ ಕರೆಸಲಾಯಿತು. ಸ್ಥಳೀಯರ ತೀವ್ರ ಪ್ರತಿಭಟನೆಯ ಮಧ್ಯೆಯೂ ಪೊಲೀಸರು ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಸಾಗಿಸಿದರು. ಈ ಮಧ್ಯೆ ಮತ್ತಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಡಿಕ್ಕಿ ಹೊಡೆದ ಲಾರಿಯ ಗಾಜುಗಳನ್ನು ಹೊಡೆದು, ಬೆಂಕಿಹಚ್ಚಲು ಮುಂದಾದರು. ಅಲ್ಲದೆ ಕಲ್ಲು ತೂರಾಟಕ್ಕೂ ಮುಂದಾದರು. ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವುದನ್ನು ಗಮನಿಸಿದ ಪೊಲೀಸರು ಲಾಠಿ ಪ್ರಯೋಗಿಸಿ ಗುಂಪುಗೂಡಿದವರನ್ನು ಚದುರಿಸಿದರು. ನಂತರ ಕ್ರೇನ್ ತರಿಸಿಕೊಂಡು ಲಾರಿಯನ್ನು ಸ್ಥಳದಿಂದ ತೆರವುಗೊಳಿಸಲಾಯಿತು. ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಪಿಗಳಾದ ಬಿ. ರಮೇಶ, ಶ್ರೀನಾಥ ಜೋಶಿ, ಎಸಿಪಿಗಳಾದ ಎ.ಆರ್.ಬಡಿಗೇರ, ಜಿ.ಎಂ.ದೇಸೂರ, ಎನ್.ಎಸ್.ಪಾಟೀಲ, ಉತ್ತರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಲೋಕೇಶ್, ಕಮರಿಪೇಟೆ ಇನ್‌ಸ್ಪೆಕ್ಟರ್ ಶಿವಾನಂದ ಚಲವಾದಿ ಮತ್ತಿತರರು ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಗೊಳಿಸಿದರು.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ತಲುಪಿದ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರು, ಆಕ್ರೋಶಭರಿತ ಜನಸಮೂಹವನ್ನು ಸಮಾಧಾನಪಡಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಘಟನೆ ನಡೆದ ತಕ್ಷಣ ಮಾಹಿತಿ ನೀಡಿದರೂ ಸುಮಾರು ಒಂದು ಗಂಟೆ ವಿಳಂಬವಾಗಿ ಅಂಬ್ಯುಲೆನ್ಸ್ ಸ್ಥಳಕ್ಕೆ ಬಂದಿದೆ. ಮಾಹಿತಿ ನೀಡಿದ ತಕ್ಷಣ ಬರುತ್ತಿದ್ದರೆ ಮೃತ ಬಾಲಕನ ಜೀವ ಉಳಿಯುತ್ತಿತ್ತು ಎಂಬ ಕಾರಣಕ್ಕೆ ಜನ ಸಿಟ್ಟಿಗೆದ್ದರು. ಈ ದುರಂತಕ್ಕೆ ರಸ್ತೆ ಅವ್ಯವಸ್ಥೆಯೂ ಪ್ರಮುಖ ಕಾರಣವಾಗಿದೆ' ಎಂದರು.

`ಹಳೇಹುಬ್ಬಳ್ಳಿ ಸುತ್ತಮುತ್ತ ಎಲ್ಲ ರಸ್ತೆಗಳನ್ನು ಒಳಚರಂಡಿ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಇದರಿಂದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಅಪಘಾತಗಳೂ ಆಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಸೆಳೆದರೂ ಯಾವುದೇ ಪ್ರಯೋಜನ ಆಗಿಲ್ಲ' ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.