ADVERTISEMENT

ವಾಸಕ್ಕೆ ಮೊದಲೇ ಸೋರುತ್ತಿವೆ `ಆಸರೆ' ಮನೆಗಳು

ಬೆಣ್ಣೆಹಳ್ಳ ಸಂತ್ರಸ್ತರಿಗೆ ಸರ್ಕಾರ ನೀಡಿದ್ದ ಕೊಡುಗೆ

ಆರ್.ಜಿತೇಂದ್ರ
Published 14 ಜೂನ್ 2013, 7:07 IST
Last Updated 14 ಜೂನ್ 2013, 7:07 IST

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ `ಕಣ್ಣೀರಿನ ಹಳ್ಳ' ಎಂದೇ ಹೆಸರಾದ ಬೆಣ್ಣೆ ಹಳ್ಳ ಈ ಬಾರಿಯ ಮಳೆಗಾಲದಲ್ಲಿ ಉಕ್ಕಿಹರಿಯುವ ಮುನ್ನವೇ ಊರು ಖಾಲಿ ಮಾಡಬೇಕಾದ ಪರಿಸ್ಥಿತಿ ಈ ಊರಿನ ಜನರದ್ದು. ಸರ್ಕಾರ ಆಸರೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಇವರ ನೆರವಿಗೆ ಬಂದಿದೆಯಾದರೂ ಅಲ್ಲಿನ ಅವ್ಯವಸ್ಥೆಗಳಿಂದಾಗಿ `ಇಲ್ಲಿಯೂ ಇರಲಾರೆವು. ಅಲ್ಲಿಗೂ ಹೋಗಲಾರೆವು' ಎನ್ನುವ ಸ್ಥಿತಿಯಲ್ಲಿದ್ದಾರೆ ಇಲ್ಲಿನ ಜನತೆ.

ದಿಢೀರ್ ಪ್ರವಾಹಕ್ಕೆ ಹೆಸರಾಗಿರುವ ಬೆಣ್ಣೆ ಹಳ್ಳದ ಸಂತ್ರಸ್ಥ ಗ್ರಾಮಗಳಲ್ಲಿ ಕುಂದಗೋಳ ತಾಲ್ಲೂಕಿನ ಮುಳ್ಳೊಳ್ಳಿ ಸಹ ಒಂದು. ನಾಲ್ಕು ವರ್ಷಗಳ ಹಿಂದೆ ಈ ಹಳ್ಳ ಉಕ್ಕಿ ಹರಿದ ಪರಿಣಾಮ ಇಡೀ ಊರು ಮುಳುಗಿ ಜನ ದನಕರುಗಳೊಂದಿಗೆ ವಲಸೆ ಹೋಗಿದ್ದನ್ನು ಇಲ್ಲಿನವರು ಈಗಲೂ ಸ್ಮರಿಸುತ್ತಾರೆ.

ಇವರಿಗೆ ನೆರವಾಗುವ ಸಲುವಾಗಿ ಸರ್ಕಾರ 2010-11ರಲ್ಲಿ ಆಸರೆ ಮನೆಗಳನ್ನು ನಿರ್ಮಿಸಿ, ವರ್ಷದ ಹಿಂದೆ ನಿವಾಸಿಗಳಿಗೆ ಹಸ್ತಾಂತರ ಮಾಡಿದೆ. ಆದರೆ ಹೊಸ ಮನೆಗಳು ಸೋರುತ್ತಿದ್ದು, ಕೆಲವು ಬಿರುಕು ಬಿಟ್ಟವೆ. ಅಲ್ಲಿ ಮೂಲ ಸೌಕರ್ಯಗಳ ಕೊರತೆ ಕಾರಣ ಮುಳ್ಳೊಳ್ಳಿ ಗ್ರಾಮಸ್ಥರು ಹೊಸ ಬಡಾವಣೆಗೆ ಪೂರ್ಣವಾಗಿ ಸ್ಥಳಾಂತರಗೊಂಡಿಲ್ಲ.

ಗ್ರಾಮದ ಪಕ್ಕದಲ್ಲೇ ಇರುವ ಜಮೀನಿನಲ್ಲಿ ಸರ್ಕಾರವು ನೆರೆ ಸಂತ್ರಸ್ಥರಿಗಾಗಿ ಆಸರೆ ಯೋಜನೆಯ ಅಡಿ ತಲಾ ರೂ 1.4 ಲಕ್ಷ ವೆಚ್ಚದಲ್ಲಿ ಒಟ್ಟು 320 ಮನೆಗಳನ್ನು ನಿರ್ಮಿಸಿದೆ. ಆದರೆ ಅರ್ಧದಷ್ಟು ಮನೆಗಳಲ್ಲಿ ಮಾತ್ರ ಜನರು ವಾಸವಿದ್ದಾರೆ. ಅದರಲ್ಲೂ ಕೆಲವರು ಹೊಸ ಮನೆಗಳಿಗೆ ಬೀಗ ಹಾಕಿ ಊರಿನಲ್ಲಿರುವ ಹಳೆಯ ಮನೆಗಳಲ್ಲೇ ವಾಸವಾಗಿದ್ದಾರೆ.

`ಮನೆಗಳು ಬಹಳ ಚಿಕ್ಕದಿದ್ದು, ಸೋರುತ್ತಿವೆ. ಬೆಳಕಿನ ವ್ಯವಸ್ಥೆಯೂ ಅಷ್ಟಾಗಿಲ್ಲ. ಅಲ್ಲದೇ ಮನೆಗಳಿಗೆ ಹೊಗೆ ಹೊರಹೋಗುವ ಕೊಳವೆ ವ್ಯವಸ್ಥೆಯೂ ಇಲ್ಲ. ನಾವು ಮನೆ ರಿಪೇರಿ ಮಾಡಿಸಿಕೊಂಡೇ ವಾಸಕ್ಕೆ ಬರಬೇಕಾದ ಪರಿಸ್ಥಿತಿ ಇದೆ' ಎನ್ನುತ್ತಾರೆ ಸ್ಥಳೀಯ ನಿವಾಸಿ ಕಲ್ಲಪ್ಪ ಅಡವಿ.

ಈ ಕುರಿತು ಕುಂದಗೋಳ ತಹಶೀಲ್ದಾರ್ ಗಣಾಚಾರಿ ಅವರನ್ನು ಸಂಪರ್ಕಿಸಿದಾಗ `ಕೆಲವು ಮನೆಗಳು ಸೋರುತ್ತಿರುವುದು ನಿಜ. ಅಂತೆಯೇ ಕೆಲವು ಕಡೆ ಸಣ್ಣ ಬಿರುಕುಗಳೂ ಇರಬಹುದು.

ನಿವಾಸಿಗಳಲ್ಲಿನ ಗೊಂದಲದಿಂದಾಗಿ ಮನೆ ಹಂಚಿಕೆಯಾಗಿ ವರ್ಷ ಕಳೆದರೂ ಯಾರೂ ವಾಸಕ್ಕೆ ಹೋಗಲಿಲ್ಲ. ಹೀಗಾಗಿ ಕೆಲವು ಮನೆಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ.

150 ಮನೆಗಳಲ್ಲಿ ಜನ ಈಗಾಗಲೇ ವಾಸಕ್ಕೆ ಬಂದಿದ್ದು, ಉಳಿದವರು ಬರಬೇಕಿದೆ. ಜನರಿಗೆ ಕುಡಿಯುವ ನೀರು ಪೂರೈಕೆ ಸೌಲಭ್ಯವನ್ನು ಗುರುವಾರದಿಂದಲೇ ಕಲ್ಪಿಸಲಾಗುತ್ತಿದೆ' ಎಂದು ತಿಳಿಸಿದರು.

ಕಳಪೆ ಕಾಮಗಾರಿಯಿಲ್ಲ: ಸ್ಟಷ್ಟನೆ
`ಉತ್ತಮ ಗುಣಮಟ್ಟದ ಸಾಮಗ್ರಿ ಮತ್ತು ತಂತ್ರಜ್ಞಾನವನ್ನು ಬಳಸಿಯೇ ನಿರ್ಮಿತಿ ಕೇಂದ್ರವು ಈ ಮನೆಗಳನ್ನು ನಿರ್ಮಿಸಿದೆ.

ಕಳಪೆ ಕಾಮಗಾರಿ ನಡೆದಿಲ್ಲ. ನಿರ್ವಹಣೆ ಕೊರತೆ ಕಾರಣ ಕೆಲವು ಮನೆಗಳು ಹಾಳಾಗಿರಬಹುದು. ಈ ಕುರಿತು ಪರಿಶೀಲನೆ ನಡೆಸಿ ಅಗತ್ಯಬಿದ್ದಲ್ಲಿ ದುರಸ್ತಿ ಕೈಗೊಳ್ಳುತ್ತೇವೆ' ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಚಂದ್ರಶೇಖರ್ `ಪ್ರಜಾವಾಣಿ'ಗೆ ತಿಳಿಸಿದರು.

ಹೀಗನ್ನುತ್ತಾರೆ ಸ್ಥಳೀಯ ನಿವಾಸಿಗಳು
ಚಿಕ್ಕ ಮನೆಯಲ್ಲಿ ಇಕ್ಕಟ್ಟು

ನಾವು ಒಂದು ತಿಂಗಳ ಹಿಂದಷ್ಟೇ ಈ ಮನೆಗೆ ವಾಸಕ್ಕೆ ಬಂದಿದ್ದೇವೆ. ಇಲ್ಲಿನ ಸಾಕಷ್ಟು ಮನೆಗಳಲ್ಲಿ ಜನ ಇನ್ನಷ್ಟೇ ವಾಸಕ್ಕೆ ಬರಬೇಕಿದೆ. ಮನೆ ಚಿಕ್ಕದಾಗಿರುವುದರಿಂದ ಎಲ್ಲಕ್ಕೂ ಇಕ್ಕಟ್ಟು. ಹೀಗಾಗಿ ಜನ ಬರಲು ಮನಸ್ಸು ಮಾಡುತ್ತಿಲ್ಲ.
-ಈಶ್ವರಪ್ಪ ಅಡವಿ

ಸೋರುವ ಮನೆ, ನೀರಿಗೆ ತತ್ವಾರ

ಮಳೆ ಬಂತೆಂದರೆ ಮನೆಗಳು ಸೋರುತ್ತವೆ. ನಮ್ಮ ಸಾಲಿನ ನಾಲ್ಕೈದು ಮನೆಗಳಲ್ಲೂ ಇದೇ ಪರಿಸ್ಥಿತಿ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ಇದೆ.
-ಲಕ್ಷ್ಮಿ ಬೆಂತೂರ

ನಮಗೆ ಸಾಕಾಗುವುದಿಲ್ಲ

ADVERTISEMENT

ಬೆಣ್ಣೆ ಹಳ್ಳ ಹುಚ್ಚು ಹೊಳೆ ಇದ್ದ ಹಾಗೇ. ಯಾವಾಗ ಉಕ್ಕಿ ಬರುತ್ತೋ ಗೊತ್ತಿಲ್ಲ. ಹೀಗಾಗಿ ಹೊಸ ಮನೆಗೆ ಸ್ಥಳಾಂತರಗೊಳ್ಳುವುದು ನಮಗೆ ಅನಿವಾರ್ಯ. ಆದರೆ ಆ ಮನೆಗಳು ನಮ್ಮ ಈಗಿನ ಮನೆಗಳಷ್ಟು ವಿಸ್ತಾರವಾಗಿಲ್ಲ. ನಮ್ಮ ತುಂಬು ಕುಟುಂಬಗಳಿಗೆ ಸಾಕಾಗುವುದೂ ಇಲ್ಲ. ಇನ್ನು ದನ-ಕರುಗಳನ್ನು ಎಲ್ಲಿ ಕಟ್ಟಿಕೊಳ್ಳಬೇಕು?
-ಚನ್ನವೀರಯ್ಯ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.