ADVERTISEMENT

ವಿಜಯಪುರ ಘಟನೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 9:13 IST
Last Updated 24 ಡಿಸೆಂಬರ್ 2017, 9:13 IST

ಧಾರವಾಡ: ವಿಜಯಪುರದಲ್ಲಿ ಶಾಲಾ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ರಾಮಾತಾಯಿ ಮಹಿಳಾ ಪ್ರಗತಿ ಮತ್ತು ಅಧ್ಯಯನ ಸಂಸ್ಥೆ, ಬಿಜೆಪಿ ಜಿಲ್ಲೆ ಮಹಿಳಾ ಮೋರ್ಚಾ, ರಾಷ್ಟ್ರೀಯ ಬಸವ ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಆಲೂರು ವೆಂಕಟರಾವ್ ವೃತ್ತ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದಿರುವುದು ಅಮಾನವೀಯ ಹಾಗೂ ಸಮಾಜ ತಲೆತಗ್ಗಿಸುವಂಥ ಘಟನೆ. ಹೀಗಾಗಿ ಆರೋಪಿಗಳ ಮೇಲೆ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಜತೆಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ‘ರಾಜ್ಯದಲ್ಲಿ ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇವುಗಳನ್ನು ತಡೆಯಲು ಸರ್ಕಾರ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಪ್ರಜ್ಞಾವಂತ ಸಮಾಜದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಪೊಲೀಸ್ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗಿದೆ’ ಎಂದು ದೂರಿದರು.

ADVERTISEMENT

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರೇಮಾ ಕೋಮಾರದೇಸಾಯಿ ಮಾತನಾಡಿ, ‘ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ, ಆರ್ಥಿಕ ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಹಾಗೂ ಕೃಷಿ ಜಮೀನು ನೀಡಬೇಕು’ ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಎಲ್ಲ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯ್ತಿ ಅದ್ಯಕ್ಷೆ ಚೈತ್ರಾ ಶಿರೂರ, ಜಿಲ್ಲಾ ಬಿಜೆಪಿ ಮಹೀಳಾ ಮೋರ್ಚಾದ ಮಾಲಾ ಗೋಕುಲ, ಗೀತಾ ಮರಲಿಂಗಣ್ಣವರ, ರೇಣುಕಾ, ರಾಮಾತಾಯಿ ಮಹಿಳಾ ಪ್ರಗತಿ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಶೋಭಾ ಚಲವಾದಿ, ವೀಣಾ ದೊಡ್ಡಮನಿ, ಚನ್ನವ್ವ ಕಾಳಿ, ಗೀತಾ ಬಿಸಿಡೋಣಿ, ಮಂಜುಳಾ ಹೊಸಮನಿ, ಯಲ್ಲವ್ವ ಭಜಂತ್ರಿ, ಸುನಂದಾ ಮಸ್ಕಿ, ಶಿವಲೀಲಾ, ರತ್ನವ್ವ, ಮಂಜುನಾಥ ಭೋವಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ದೊಡ್ಡಮನಿ, ರಾಜೇಶ ಸಗಬಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.