ADVERTISEMENT

ವಿಮಾ ಅವಧಿ ವಿಸ್ತರಣೆಗೆ ರೈತರ ಆಗ್ರಹ

ನವಲಗುಂದ: ಪಹಣಿ ಪತ್ರಿಕೆ ಪಡೆಯಲು ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:15 IST
Last Updated 27 ಡಿಸೆಂಬರ್ 2012, 9:15 IST

ನವಲಗುಂದ: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮಂಜೂರಾತಿ ನೀಡಿ ಇದೇ 31ರ ಒಳಗಾಗಿ ಬ್ಯಾಂಕಿಗೆ ಘೋಷಣೆ ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪಹಣೆ ಪತ್ರಿಕೆ ಪಡೆಯಲು ರೈತರು ಮುಗಿಬಿದ್ದು ನೂಕುನುಗ್ಗಲು ಉಂಟಾದ ಘಟನೆ ಬುಧವಾರ ಮಧ್ಯಾಹ್ನ ನಡೆಯಿತು.

ಇಲ್ಲಿನ ನೆಮ್ಮದಿ ಕೇಂದ್ರ ಹಾಗೂ ತಹಶೀಲ್ದಾರ್ ಕಾರ್ಯಾಲಯದಲ್ಲಿ ಪಹಣಿ ಪತ್ರಿಕೆ ನೀಡುತ್ತಿದ್ದರೂ ಪರಿಸ್ಥಿತಿ ಹತೋಟಿಗೆ ಬರದೇ ನೂಕುನುಗ್ಗಲು ಉಂಟಾದ ಕಾರಣ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.

ಈ ಕುರಿತು ಪ್ರೋಬೇಷನರಿ ಐಎಎಸ್ ಅಧಿಕಾರಿ ಬಿ.ಸಿಂಧು ಅವರನ್ನು ಸಂಪರ್ಕಿಸಿದಾಗ `ಎರಡು ಕೇಂದ್ರಗಳಲ್ಲಿ ಪಹಣಿ ಪತ್ರಿಕೆಯನ್ನು ಬೆಳಿಗ್ಗೆ 9.30 ಗಂಟೆಯಿಂದ ನೀಡುತ್ತಿದ್ದೇವೆ. ರಾತ್ರಿ 1.30 ಗಂಟೆಯಾದರೂ ಪಹಣಿ ಪತ್ರಿಕೆ ಕೊಟ್ಟು ರೈತರೊಂದಿಗೆ ಸಹಕರಿಸಿದ್ದೇವೆ. ಬೆಳೆವಿಮೆ ತುಂಬುವ ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ರೈತರು ಕೂಡ ಸಿಬ್ಬಂದಿಯೊಂದಿಗೆ ಸಹಕರಿಸಬೇಕು' ಎಂದು ಹೇಳಿದರು.

ಭೋಗಾನೂರ ಗ್ರಾಮದಿಂದ ಆಗಮಿಸಿದ್ದ ರೈತ ರುದ್ರಪ್ಪ ಕುಲಕರ್ಣಿ ಪತ್ರಿಕೆಯೊಂದಿಗೆ ಮಾತನಾಡಿ `ಬೆಳಿಗ್ಗೆ 8 ಗಂಟೆಗೆ ಬಂದು ಸರದಿಯಲ್ಲಿ ನಿಂತಿದ್ದೇನೆ. ರಾತ್ರಿ 7 ಗಂಟೆಯಾದರೂ ನನಗೆ ಪಹಣಿ ಪತ್ರಿಕೆ ಸಿಗುತ್ತಿಲ್ಲ. ಮತ್ತೇ ನಾಳೆ ಬನ್ನಿ ಎಂದು ಹೇಳುತ್ತಿರುವುದರಿಂದ ಬೇಸರ ತಂದಿದೆ' ಎಂದರು. ತ್ವರಿತಗತಿಯಲ್ಲಿ ಪತ್ರಗಳ ವಿತರಣೆ ಮಾಡಲು ಇನ್ನಷ್ಟು ಕಂಪ್ಯೂಟರ್‌ಗಳನ್ನು ಒದಗಿಸುವಂತೆ ಅವರು ಆಗ್ರಹಿಸಿದರು.

`ಬೆಳೆವಿಮೆ ತುಂಬಬೇಕಾದರೆ ಬೆಳೆದ ಬೆಳೆ ಬಗ್ಗೆ ಧೃಡೀಕರಣ ಪತ್ರ ಪಡೆಯಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಆಯಾ ಗ್ರಾಮಕ್ಕೆ ಬಂದು ರೈತರಿಗೆ ಧೃಡೀಕರಣ ಪತ್ರ ಕೊಟ್ಟರೆ ತೊಂದರೆಯಾಗುವುದಿಲ್ಲ. ಆದರೆ ನವಲಗುಂದದಲ್ಲಿಯೇ ಪತ್ರ ಕೊಡುತ್ತಿರುವುದರಿಂದ ರೈತರು ತೊಂದರೆ ಅನುಭವಿಸಬೇಕಾಗಿದೆ.

ಬ್ಯಾಂಕಿನಲ್ಲಿಯೂ ದಿನಗಟ್ಟಲೇ ಸರದಿಯಲ್ಲಿ ಕಾಯಬೇಕಾದ ಪರಸ್ಥಿತಿ ಎದುರಾಗಿದೆ. ಈ ಕಾರಣ ಸರ್ಕಾರ ಪತ್ರ ಸಲ್ಲಿಕೆ ಅವಧಿಯನ್ನು 31ರ ಬದಲಾಗಿ ಜ.15 ರವರೆಗೆ ವಿಸ್ತರಿಸಬೇಕು' ಎಂದು ಶಿರಕೋಳ ಗ್ರಾಮ ಪಂಚಾಯಿತಿ ಸದಸ್ಯ ಮಂಜು ಹಂಡಿ ಒತ್ತಾಯಿಸಿದರು.
` 2011ರ ಹಿಂಗಾರು ಬೆಳೆಯ ಬೆಳೆವಿಮೆ ಇನ್ನೂ ಬಂದಿಲ್ಲ. ಆದರೂ ಈ ವರ್ಷ ಬೆಳೆವಿಮೆ ಪಾವತಿಸುತ್ತಿದ್ದೇವೆ. ಕೂಡಲೇ ಕಳೆದ ವರ್ಷದ ಹಿಂಗಾರು ಬೆಳೆ ವಿಮೆಯನ್ನು ಬಿಡುಗಡೆ ಮಾಡಬೇಕು' ಎಂದು ಪ್ರಗತಿಪರ ರೈತ ಶಾಂತು ಪಾಟೀಲ ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.