ADVERTISEMENT

ವಿಶಿಷ್ಟ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾದ ವೈದ್ಯರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 6:23 IST
Last Updated 22 ಏಪ್ರಿಲ್ 2013, 6:23 IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ನರರೋಗ ತಜ್ಞರಿಗೆ ಭಾನುವಾರ ನಗರದ ಶ್ರೀ ಬಾಲಾಜಿ ನರರೋಗ ವಿಜ್ಞಾನ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಯಲ್ಲಿ ವಿಶೇಷ ಅನುಭವದ ದಿನವಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಡಾ.ಸುಶೀಲ ಪಾಠಕರ ಹುಬ್ಬಳ್ಳಿಗೆ ಬಂದು ಅಪರೂಪದ ಎರಡು ಬೆನ್ನುಹುರಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಅವರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿದ ಈ ಭಾಗದ ವೈದ್ಯರು ಸಂದೇಹಗಳನ್ನು ಪರಿಹರಿಸಿಕೊಂಡರು.

ಪುಣೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಡಾ. ಸುಶೀಲ ಪಾಠಕರ ಮೊದಲು ನಡೆಸಿದ್ದು ಬೆನ್ನುಹುರಿ ಕ್ಷಯರೋಗಕ್ಕೆ ತುತ್ತಾದ ಹಿರಿಯ ವ್ಯಕ್ತಿಗೆ. ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸಬೇಕಾದ ಸಿದ್ಧತೆ, ರೋಗಿಯನ್ನು ಮಲಗಿಸಬೇಕಾದ ವಿಧಾನ ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟ ಸೂಕ್ಷ್ಮ ಅಂಶಗಳನ್ನು ಮೂರನೇ ಮಹಡಿಯಲ್ಲಿನ ಸಭಾಂಗಣದಲ್ಲಿ ಕುಳಿತಿದ್ದ ವೈದ್ಯರು ಆನ್‌ಲೈನ್ ಮೂಲಕ ಕೇಳಿ ತಿಳಿದುಕೊಂಡರು. ಶಸ್ತ್ರಚಿಕಿತ್ಸಾ ಕೊಠಡಿಯಿಂದ ಪಾಠಕರ ಎಲ್ಲ ಸಂದೇಹಗಳಿಗೂ ನಗುನಗುತ್ತಾ ಉತ್ತರಿಸಿದರು.

ಮರದಿಂದ ಬಿದ್ದು ಬೆನ್ನುಹುರಿಗೆ ಗಾಯವಾಗಿದ್ದ ಯುವಕನಿಗೆ ಮಧ್ಯಾಹ್ನದ ನಂತರ ಶಸ್ತ್ರಚಿಕಿತ್ಸೆ ನಡೆಸಲಾಯಿತು.`ಕ್ಲಿಷ್ಟಕರ ಬೆನ್ನುಹುರಿ ಶಸ್ತ್ರಚಿಕಿತ್ಸೆಯನ್ನು ಈ ಭಾಗದ ವೈದ್ಯರು ಕೂಡ ನಡೆಸುತ್ತಾರೆ. ಆದರೆ ಪಾಠಕರ ಅವರಿಗೆ ಅಪಾರ ಅನುಭವ ಇರುವ ಕಾರಣ ಅವರನ್ನು ಕರೆಸಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಅವರೊಂದಿಗೆ ಸಂವಾದ ನಡೆಸಲು ಅವಕಾಶ ಲಭಿಸಿದ್ದರಿಂದ ವೈದ್ಯರಿಗೆ ಅನುಕೂಲವಾಗಲಿದೆ' ಎಂದು ಆಸ್ಪತ್ರೆಯ ಡಾ. ವೀರೇಂದ್ರ ತಿಳಿಸಿದರು.

`ತಲಾ ಸುಮಾರು ರೂ ಮೂರರಿಂದ ನಾಲ್ಕು ಲಕ್ಷ ವೆಚ್ಚದ ಆ್ಯಂಟಿ ರಿಯಲ್ ಪ್ಲೇಟ್ ಮತ್ತು ವೆರ್ಟ್ ಬ್ರೋ ಪ್ಲಾಸ್ಟಿಕ್ ಎಂಬ ಈ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ' ಎಂದು ಅವರು ವಿವರಿಸಿದರು.

ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಕಿಮ್ಸ ಕಾಲೇಜಿನ ಪ್ರಾಚಾರ್ಯ ಡಾ.ಯು.ಎಸ್.ಹಂಗರಗ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಾಲಾಜಿ ಆಸ್ಪತ್ರೆಯ ಅಧ್ಯಕ್ಷ ಡಾ. ಕ್ರಾಂತಿ ಕಿರಣ ಹಾಗೂ ಡಾ. ಪಾಠಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.