ADVERTISEMENT

ವೀಕ್ಷಕರಿಗೆ ಮುಗಿಬಿದ್ದ ಆಕಾಂಕ್ಷಿಗಳ ದಂಡು

ಲೋಕಸಭಾ ಚುನಾವಣೆ: ಟಿಕೆಟ್‌ ಹಂಚಿಕೆಗಾಗಿ ಕಾಂಗ್ರೆಸ್‌ನಿಂದ ಅರ್ಜಿ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 7:26 IST
Last Updated 11 ಸೆಪ್ಟೆಂಬರ್ 2013, 7:26 IST
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಹುಬ್ಬಳ್ಳಿಯ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ ಕೆಪಿಸಿಸಿ ವೀಕ್ಷಕರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದರು.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಹುಬ್ಬಳ್ಳಿಯ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ ಕೆಪಿಸಿಸಿ ವೀಕ್ಷಕರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದರು.   

ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಮಂಗಳವಾರ ಭೇಟಿ ನೀಡಿದ ಕರ್ನಾ­ಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ವೀಕ್ಷಕರು, ಧಾರವಾಡ ಲೋಕ­ಸಭಾ ಕ್ಷೇತ್ರದಿಂದ ಸ್ಪರ್ಧಿಸ ಬಯ­ಸುವ ಆಕಾಂಕ್ಷಿಗಳಿಂದ ಅರ್ಜಿ­ಗಳನ್ನು ಸ್ವೀಕರಿಸಿ, ಕಾರ್ಯಕರ್ತರಿಂದ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಿದರು.

ವೀಕ್ಷಕರಾದ ಶಾಸಕ ನೆ.ಲ.ನರೇಂದ್ರ­ಬಾಬು, ಹಿರಣ್ಣಯ್ಯ ಸ್ವಾಮಿ, ಮೋಹನ ಕೊಂಡಜ್ಜಿ, ಓಬೇದುಲ್ಲಾ ಶರೀಫ್‌, ಎ.ಆನಂದ್‌, ಆರ್‌.ಬಿ.ತಿಮ್ಮಾಪುರ ಅವರು, ಪ್ರತ್ಯೇಕವಾಗಿ ಆಯಾ ಮುಖಂ­ಡ­ರಿಂದ ಅರ್ಜಿ ಸ್ವೀಕರಿಸಿದರು.

ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಸಚಿವ ಎ.ಎಂ.­ಹಿಂಡಸಗೇರಿ, ಡಾ.ಮಹೇಶ ನಾಲ­ವಾಡ ಹಾಗೂ ವಿಜಯ ಕುಲಕರ್ಣಿ ಲೋಕಸಭಾ ಚುನಾವಣೆ­ಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಪ್ರಮುಖ ಆಕಾಂಕ್ಷಿಗಳು.

ನಗರದ ಗೋಕುಲ ರಸ್ತೆಯಲ್ಲಿರುವ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ, ವೀಕ್ಷಕರನ್ನು ಭೇಟಿ ಮಾಡಿದ ಪಕ್ಷದ ಅನೇಕ ಮುಖಂ­ಡರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೇ ಟಿಕೆಟ್‌ ನೀಡುವಂತೆ ಮನವಿ ಸಲ್ಲಿಸಿದರು.

ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದು, ಕೈಗೊಂಡ ಜನಪರ ಹೋರಾಟಗಳ ಕುರಿತು ವೀಕ್ಷಕರಿಗೆ ವಿವರಿಸಿದ ಮುಖಂ­ಡರು, ತಮ್ಮ ಪರವಾಗಿ ಘೋಷಣೆ­ಗಳನ್ನು ಕೂಗುತ್ತಾ ಹಿಂಬಾಲಿಸುತ್ತಿದ್ದ ಬೆಂಬಲಿಗರೊಂದಿಗೆ ಬರುವ ಮೂಲಕ ಶಕ್ತಿ ಪ್ರದರ್ಶನವನ್ನೂ ಮಾಡಿದರು.
ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಶಾಸಕ ಸಿ.ಎಸ್‌.ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಐ.ಜಿ.ಸನದಿ ಅವರು ಸಹ ವೀಕ್ಷಕರನ್ನು ಭೇಟಿ ಮಾಡಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಿಧಾನ ಪರಿಷತ್‌ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ಸಹೋದರ ಶರಣಪ್ಪ ಕೊಟಗಿ, ಮಾಜಿ ಸಂಸದ ಐ.ಜಿ.ಸನದಿ ಅವರ ಪುತ್ರ ಶಾಕೀರ್‌ ಸನದಿ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ಮೋಹನ ಅಸುಂಡಿ, ಮೊಹ್ಮದ್‌ ಯೂಸುಫ್‌ ಸವಣೂರ, ಲೋಹಿತ್‌ ನಾಯ್ಕರ್‌, ಅಜ್ಜಂಪೀರ್‌ ಖಾದ್ರಿ, ಶಿವ ನಾಯ್ಕ ಅವರು ಸಹ  ತಮ್ಮ ಬೆಂಬಲಿಗರೊಂದಿಗೆ ಮುಖಂಡರು ಭೇಟಿ ಮಾಡಿ, ಟಿಕೆಟ್‌ ನೀಡುವಂತೆ ಅರ್ಜಿ ಸಲ್ಲಿಸಿದರು.

ಕಾಟನ್‌ ಕೌಂಟಿ ಕ್ಲಬ್‌ನ ಆವರಣ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಿಂದಲೇ ತುಂಬಿತ್ತು.’ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸಿ, ಯುಪಿಎ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸ ಬಯಸು­ವವರ ಸಂಖ್ಯೆಯೂ ಹೆಚ್ಚು’ ಎಂಬುದು  ಮುಖಂಡರ ಅಭಿಪ್ರಾಯವಾಗಿತ್ತು.

ಕ್ಲಬ್‌ಗೆ ಸಂಪರ್ಕಿಸುವ ರಸ್ತೆ ಮಳೆ­ಯಿ­ಂದಾಗಿ ಕೆಸರಿನಿಂದ ಕೂಡಿತ್ತು. ರಸ್ತೆಯೂ ಕಿರಿದಾಗಿದ್ದರಿಂದ ವಾಹನ­ಗಳ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗಿತ್ತು. ವಾಹನ­ಗಳನ್ನು ಅಡ್ಡಾ­ದಿಡ್ಡಿ­ಯಾಗಿ ರಸ್ತೆಯ    ಲ­­್ಲಿಯೇ ನಿಲುಗಡೆ ಮಾಡಿದ್ದರಿಂದಾಗಿ ಸಂಚಾರ ಸಮಸ್ಯೆ ಮತ್ತಷ್ಟೂ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.