ADVERTISEMENT

ವೃದ್ಧನನ್ನು ಕುಟುಂಬದೊಂದಿಗೆ ಬೆಸೆದ ಆರ್‌ಪಿಎಫ್‌

​ಪ್ರಜಾವಾಣಿ ವಾರ್ತೆ
Published 5 ಮೇ 2018, 11:20 IST
Last Updated 5 ಮೇ 2018, 11:20 IST

ಹುಬ್ಬಳ್ಳಿ: ಕಾಶಿ ವಿಶ್ವನಾಥನ ದರ್ಶನಕ್ಕೆ ಹೊರಟಿದ್ದ ಕುಟುಂಬದ ಸದಸ್ಯರೊಬ್ಬರು ಜಬಲ್ಪುರದ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದರಿಂದ ಕುಟುಂಬದ ಸದಸ್ಯರು ಗಾಬರಿಯಾಗಿದ್ದರು. ಆದರೆ, ನೈರುತ್ಯ ರೈಲ್ವೆಯ ಸುರಕ್ಷಾ ದಳದ
(ಆರ್‌ಪಿಎಫ್‌) ಪೊಲೀಸರು ಆ ಹಿರಿಯರನ್ನು ಹುಡುಕಿ ಮನೆಯವರಿಗೆ ಒಪ್ಪಿಸಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿದೆ.

ಚೆನ್ನೈ ನಿವಾಸಿ ನಟೇಶನ್‌ (83) ಕುಟುಂಬ ಸದಸ್ಯರೊಂದಿಗೆ ಕಳೆದ ಮಂಗಳವಾರ ಚೆನ್ನೈ ಸೆಂಟ್ರಲ್‌–ಛಾಪ್ರಾ ಗಂಗಾ ಕಾವೇರಿ ಎಕ್ಸ್‌ಪ್ರೆಸ್‌ ಮೂಲಕ ವಾರಾಣಸಿ (ಕಾಶಿ)ಗೆ ಹೊರಟಿದ್ದರು. ಆಕಸ್ಮಾತ್‌ ಜಬಲ್ಪುರ ನಿಲ್ದಾಣದಲ್ಲಿ ಇಳಿದ ನಟೇಶನ್‌, ತಾವು ಪ್ರಯಾಣಿಸುತ್ತಿರುವ ರೈಲೆಂದು ತಿಳಿದು ವಾರಾಣಸಿಯಿಂದ ಹುಬ್ಬಳ್ಳಿಗೆ ಬರುವ ರೈಲನ್ನೇರಿದರು.

ಜಬಲ್ಪುರ ನಿಲ್ದಾಣದಲ್ಲೇ ನಟೇಶನ್‌ ಇಳಿದು ಹೋಗಿದ್ದರಿಂದ ಗಾಬರಿಯಾದ ಕುಟುಂಬ ಸದಸ್ಯರು ಆರ್‌ಪಿಎಫ್‌ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಎಲ್ಲ ನಿಲ್ದಾಣಗಳಿಗೂ ಸುದ್ದಿ ಮುಟ್ಟಿಸಿದರು. ಜಬಲ್ಪುರ ಮಾರ್ಗವಾಗಿ ಸಂಚರಿಸುವ ರೈಲುಗಳನ್ನು ವಿಶೇಷ ಗಮನ ಹರಿಸಿ ಪರಿಶೀಲಿಸುವಂತೆಯೂ ಸಿಬ್ಬಂದಿಗೆ ಸೂಚಿಸಲಾಗಿತ್ತು. ಗದಗ ರೈಲು ನಿಲ್ದಾಣಕ್ಕೆ ರೈಲು ಬಂದಾಗ ಆರ್‌ಪಿಎಫ್‌ ಸಿಬ್ಬಂದಿ ನಟೇಶನ್ ಅವರನ್ನು ಪತ್ತೆ ಹಚ್ಚಿ ಕುಟುಂಬ ಸದಸ್ಯರಿಗೆ ಸುದ್ದಿ ಮುಟ್ಟಿಸಿದ್ದಾರೆ.

ADVERTISEMENT

ಗದಗ ನಿಲ್ದಾಣಕ್ಕೆ ಬಂದ ಕುಟುಂಬದವರಿಗೆ ನಟೇಶನ್‌ ಅವರನ್ನು ಆರ್‌ಪಿಎಫ್‌ ಪೊಲೀಸರು ಹಸ್ತಾಂತರಿಸಿದರು ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್‌ ಕೌಲಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.